ಜೈಲುಪಾಲಾದ ದರ್ಶನ್‌ಗೆ ಅಭಿಮಾನಿಗಳಿಂದಲೂ ಶಾಕ್: ಡಿ ಬಾಸ್ ಹೆಸರು ಔಟ್
ಬೆಂಗಳೂರು, ಜೂನ್ 23: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಈವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ದರ್ಶನ್‌ನನ್ನು ನಿನ್ನೆ ನ್ಯಾಯಾಲಯದ ಆದೇಶ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ದರ್ಶನ್‌ನನ್ನ ಶಿಫ್ಟ್ ಮಾಡಲಾಗಿದೆ.
ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದರ್ಶನ್ ಬಗ್ಗೆ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪವಿತ್ರ ಗೌಡ ವಿಚಾರಕ್ಕೆ ರೇಣುಕಾಸ್ವಾಮಿ ಕೊಲೆ ನಡೆದಿದೆ. ಈ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿದ್ದಾರೆ ಎಂದು ತಿಳಿದು ಅಭಿಮಾನಿಗಳು ದರ್ಶನ್ ಮೇಲೆ ಬೇಸರಗೊಂಡಿದ್ದು, ಪ್ರೀತಿ- ಅಭಿಮಾನದಿಂದ ತಮ್ಮ ಕಾರು, ಬೈಕ್ ಹಾಗೂ ಇತರ ವಾಹನಗಳ ಮೇಲೆ ಹಾಕಿದ್ದ ದರ್ಶನ್ ಹೆಸರನ್ನು ಅಳಿಸಿ ಹಾಕುವ ಕೆಲಸ ಮಾಡುತ್ತಿದ್ದಾರೆ.

ಡಿ ಬಾಸ್..ಚಾಲೆಂಜಿಂಗ್ ಸ್ಟಾರ್..ದರ್ಶನ್.. ದಚ್ಚು..ದಾಸ..ಹೀಗೆ ದರ್ಶನ್ ಹಾಗೂ ಅವರ ಸಿನಿಮಾಗಳ ಹೆಸರನ್ನು ತಮ್ಮ ವಾಹನಗಳ ಮೇಲೆ ಬರೆಸಿಕೊಂಡಿದ್ದ ಅಭಿಮಾನಿಗಳು..ಈಗ ತೆಗೆದು ಹಾಕುತ್ತಿದ್ದಾರೆ. ಇನ್ನು ಕೆಲವರು ಕಾಟೇರ ಎಂದು ಬರೆಸಿಕೊಂಡವರು ಮ್ಮ ಸೇರಿಸಿ ಕಾಟೇರಮ್ಮ ಎಂದು ಬರೆಸಿಕೊಳ್ಳುತ್ತಿದ್ದಾರೆ.
ಈ ಕೊಲೆ ಪ್ರಕರಣದಿಂದ ದರ್ಶನ್ ಖ್ಯಾತಿ ದಿನದಿಂದ ದಿನಕ್ಕೆ ಕುಗ್ಗುತ್ತಿದ್ದು, ಅತಿಯಾದ ಅಭಿಮಾನದಿಂದಲೇ ಕೊಲೆ ಹಾಗೂ ಕೆಲವರು ಜೈಲು ಪಾಲಾಗಿದ್ದಾರೆ. ಅಲ್ಲದೇ ಅಭಿಮಾನಿಗಳ ಬಲವನ್ನೇ ದರ್ಶನ್ ದುರ್ಬಳಕೆ ಮಾಡಿಕೊಂಡಿದ್ದಾಗಿ ಪೊಲೀಸರು ಕೋರ್ಟ್ಗೆ ಸಲ್ಲಿಸಿದ ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈವರೆಗೂ ದರ್ಶನ್ ಮೇಲೆ ಅಭಿಮಾನ ಇಟ್ಟಿರುವುದಕ್ಕೆ ಹಲವರು ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಜೈಲುಪಾಲಾಗಿದ್ದು, ಎ 2 ದರ್ಶನ್ ಸೇರಿ ಧನರಾಜ ವಿನಯ್, ಪ್ರದೂಶ್ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ 13 ದಿನಗಳ ಕಸ್ಟಡಿಯಲ್ಲಿ ಸಂಪೂರ್ಣ ವಿಚಾರಣೆ ಬಳಿಕ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ನಟ ದರ್ಶನ್‌ನನ್ನ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದು ಕೈದಿ ಸಂಖ್ಯೆ 6106 ಅನ್ನು ನೀಡಲಾಗಿದೆ.












Click it and Unblock the Notifications