KPTCL Strike : 60,000 ಕೆಪಿಟಿಸಿಎಲ್ ಸಿಬ್ಬಂದಿಯಿಂದ ಅನಿರ್ದಿಷ್ಟಾವಧಿ ಮುಷ್ಕರ- ಕತ್ತಲೆಯಲ್ಲಿ ಮುಳುಗಲಿದೆಯೇ ಮಹಾನಗರ?
ಕೆಪಿಟಿಸಿಎಲ್ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ನಗರಗಳ ನಿವಾಸಿಗಳು ತೊಂದರೆಗೊಳಗಾಗುವ ಸಾಧ್ಯತೆಯಿದೆ.
ಬೆಂಗಳೂರು, ಮಾರ್ಚ್ 14: ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಮತ್ತು ರಾಜ್ಯದ ಎಲ್ಲಾ ಐದು ವಿದ್ಯುತ್ ಸರಬರಾಜು ಕಂಪನಿಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ನಗರಗಳ ನಿವಾಸಿಗಳು ತೊಂದರೆಗೊಳಗಾಗುವ ಸಾಧ್ಯತೆಯಿದೆ. ಲೈನ್‌ಮ್ಯಾನ್‌ನಿಂದ ಇಂಜಿನಿಯರ್‌ಗಳವರೆಗೆ ಸುಮಾರು 60,000 ನೌಕರರು ವೇತನ ಪರಿಷ್ಕರಣೆ ಕೋರಿ ಗುರುವಾರದಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ನೌಕರರ ಸಂಘಟನೆಗಳ ನಾಯಕತ್ವ ಭರವಸೆ ನೀಡಿದ್ದರೂ, ಮುಷ್ಕರವು ರಾಜ್ಯದಾದ್ಯಂತ ಸಾವಿರಾರು ಕಚೇರಿಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವುದು ಸೇರಿದಂತೆ ಯಾವುದೇ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಅಡಚಣೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ.

ಯಾವುದೇ ತಾಂತ್ರಿಕ ದೋಷಗಳು ಅಥವಾ ಅಡೆತಡೆಗಳ ಸಂದರ್ಭದಲ್ಲಿ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಲಭ್ಯವಿರುವುದಿಲ್ಲ ಎಂದು ಯೂನಿಯನ್ ನಾಯಕತ್ವವು ಹೇಳಿದೆ. ಆದರೆ ಆಸ್ಪತ್ರೆಗಳು/ವೈದ್ಯಕೀಯ ಸಂಸ್ಥೆಗಳು ಮತ್ತು ನೀರು ಸರಬರಾಜು ಸ್ಥಾವರಗಳಿಗೆ ತಾಂತ್ರಿಕ ಸೇವೆಗಳನ್ನು ಮುಂದುವರಿಸುತ್ತೇವೆ. ನಾವು ಯಾವುದೇ ಇತರ ವಲಯಕ್ಕೆ ಸೇವೆ ಸಲ್ಲಿಸುವುದಿಲ್ಲ ಎಂದು ತಿಳಿಸಿದೆ.
ಕರ್ನಾಟಕದಲ್ಲಿ, ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಕೆಪಿಟಿಸಿಎಲ್) ರವಾನೆಯಾಗುತ್ತದೆ. ಐದು ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಮ್‌ಗಳು) ವಿತರಿಸಲಾಗುತ್ತದೆ.

ಬೆಸ್ಕಾಂ, ಬೆಂಗಳೂರು (ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್), ಮೆಸ್ಕಾಂ, ಮಂಗಳೂರು (ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಹೆಸ್ಕಾಂ, ಹುಬ್ಬಳ್ಳಿ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಜೆಸ್ಕಾಂ, ಕಲಬುರಗಿ (ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ಮತ್ತು ಚೆಸ್ಕಾಂ, ಮೈಸೂರು (ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ) ಗಳಿಗೆ ವಿತರಿಸಲಾಗುತ್ತಿದೆ.
ಕಾರ್ಮಿಕ ಸಂಘಟನೆಗಳ ಮುಖಂಡರ ಪ್ರಕಾರ, ಸರ್ಕಾರ ಮತ್ತು ವಿದ್ಯುತ್ ಕಂಪನಿಗಳ ಆಡಳಿತವು ಮುಷ್ಕರ ಮೆಮೊಗಳನ್ನು ನೀಡಿದ್ದರೂ ವೇತನ ಹೆಚ್ಚಳದ ಬೇಡಿಕೆಯ ಬಗ್ಗೆ ನಿರಾಸಕ್ತಿ ವಹಿಸುತ್ತಿದೆ. ವೇತನ ಹೆಚ್ಚಳದ ಬೇಡಿಕೆಗಳು ಈಡೇರುವವರೆಗೆ ನೌಕರರು ಮನೆಯಲ್ಲಿಯೇ ಇರುತ್ತಾರೆ. ಕೆಲಸದಿಂದ ದೂರ ಉಳಿಯುತ್ತಾರೆ ಎಂದು ಅವರು ಹೇಳಿದರು.
'ನಾವು ಏಪ್ರಿಲ್ 2022 ರಿಂದ ವೇತನ ಪರಿಷ್ಕರಣೆ ಕೋರುತ್ತಿದ್ದೇವೆ. ಹಿಂದಿನ ನಿರ್ಧಾರದ ಪ್ರಕಾರ, ನಮ್ಮ ವೇತನವನ್ನು ಶೇ 22ರಷ್ಟು ಹೆಚ್ಚಿಸಬೇಕಾಗಿತ್ತು. ಪ್ರಸ್ತಾವನೆಯನ್ನು KPTCL ಮಂಡಳಿಯು ಅನುಮೋದಿಸಿದೆ. ಆದರೆ, ಸರ್ಕಾರವು ಅದನ್ನು ಇಲ್ಲಿಯವರೆಗೆ ಬಾಕಿ ಇರಿಸಿದೆ. ನಾವು ಪ್ರತಿಭಟನೆ ನಡೆಸಿದರೆ ಮಾತ್ರ ಸರ್ಕಾರ ನಮ್ಮ ಮಾತನ್ನು ಕೇಳುತ್ತದೆ ಎಂದು ಕೆಪಿಟಿಸಿಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಮತ್ತು ಫೆಡರೇಶನ್ ಮುಖ್ಯಸ್ಥ ಕೆ ಬಲರಾಮ್ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ತಿಳಿಸಿದ್ದಾರೆ. ಆದರೆ, ವೇತನ ಹೆಚ್ಚಳದ ಬೇಡಿಕೆಗೆ ಕರ್ನಾಟಕ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ.












Click it and Unblock the Notifications