ಬೆಂಗಳೂರು : ಕೈ-ಕಾಲು ಕಟ್ಟಿ ವೃದ್ಧ ದಂಪತಿ ಹತ್ಯೆ
ಬೆಂಗಳೂರು, ನವೆಂಬರ್ 29 : ವೃದ್ಧ ದಂಪತಿಗಳ ಕೈ-ಕಾಲು ಕಟ್ಟಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೊಮ್ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾರತ್ತಹಳ್ಳಿ ಸಮೀಪದ ಅಶ್ವಥ್ ನಗರದ ನಿವಾಸಿಗಳಾದ ಗೋವಿಂದನ್ (65), ಸರೋಜಮ್ಮ (62) ಅವರನ್ನು ಹತ್ಯೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಹತ್ಯೆ ನಡೆದಿರುವ ಸಾಧ್ಯತೆ ಇದ್ದು, ಮಂಗಳವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
ಬಿಇಎಲ್ ನಿವೃತ್ತ ನೌಕರರಾದ ಗೋವಿಂದನ್ ಮತ್ತು ಸರೋಜಾ ಇಬ್ಬರೇ ಅಶ್ವಥ್ ನಗರದಲ್ಲಿ ವಾಸವಾಗಿದ್ದರು. ಮಂಗಳವಾರ ರಾತ್ರಿ ಮನೆಯಿಂದ ವಾಸನೆ ಬರುತ್ತಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

8.30ರ ಸುಮಾರಿಗೆ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಹತ್ಯೆಯಾಗಿರುವುದು ತಿಳಿದಿದೆ. ಹತ್ಯೆಯಲ್ಲಿ ಮೊಮ್ಮಗನ ಕೈವಾಡವಿರುವ ಶಂಕೆ ಇದ್ದು, ಎಚ್.ಎ.ಎಲ್ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದಂಪತಿಗಳ ಕೈ ಕಾಲು ಕಟ್ಟಿ ಹತ್ಯೆ ಮಾಡಲಾಗಿದೆ. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಇಬ್ಬರನ್ನು ನೇಣು ಹಾಕಲಾಗಿದೆ. ದೇಹದ ಮೇಲೆ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾಗಿವೆ.
ಕೆಲವು ದಿನಗಳ ಹಿಂದೆ ಮೊಮ್ಮಗ ಮನೆಗೆ ಬಂದು ದಂಪತಿಗಳ ಜೊತೆ ಜಗಳವಾಡಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹತ್ಯೆಯಲ್ಲಿ ಪರಿಚಯಸ್ಥರೇ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರೆದಿದೆ.











Click it and Unblock the Notifications