Ejipura Flyover: ಈಜಿಪುರ ಫ್ಲೈ ಓವರ್ ಕಾಮಗಾರಿ ಮುಗಿಸಲು ಹೊಸ ಗಡುವು
ಬೆಂಗಳೂರು, ಜನವರಿ 15: ಈಜಿಪುರ ಫ್ಲೈ ಓವರ್. ಉದ್ಯಾನ ನಗರಿ ಬೆಂಗಳೂರಿನ ಈ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ? ಎಂಬ ಪ್ರಶ್ನೆಗೆ ಬಿಬಿಎಂಪಿ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. 2017ರಲ್ಲಿ 30 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಗುರಿ ಹಾಕಿಕೊಂಡು ಆರಂಭಿಸಿದ ಯೋಜನೆ ಇದು. ಸದ್ಯ ಯೋಜನೆಯನ್ನು ಪೂರ್ಣಗೊಳಿಸಲು 2025ರ ಡಿಸೆಂಬರ್ ಅಂತ್ಯದ ಗುರಿಯನ್ನು ಸರ್ಕಾರ ನೀಡಲು ಮುಂದಾಗಿದೆ.
2.5 ಕಿ. ಮೀ. ಉದ್ದದ ಫ್ಲೈ ಓವರ್ ಕಾಮಗಾರಿ ಹಲವಾರು ಅಡೆತಡೆಗಳನ್ನು ಎದುರಿಸಿದೆ. 2017ರಲ್ಲಿ ಆರಂಭಗೊಂಡ ಕಾಮಗಾರಿ 2025ರಲ್ಲಿ ಚುರುಕು ಪಡೆದಿದೆ. ಗುತ್ತಿಗೆದಾರರು ಬದಲಾಗಿದ್ದಾರೆ. ಆದರೆ ಈ ವರ್ಷಾಂತ್ಯಕ್ಕೆ ಯೋಜನೆ ಪೂರ್ಣಗೊಳ್ಳಲಿದೆಯೇ? ಎಂದು ಖಚಿತವಾಗಿ ಹೇಳಲು ಆಗದು.

ಹೊಸ ಅಪ್‌ಡೇಟ್‌ನಂತೆ ಕರ್ನಾಟಕ ಸರ್ಕಾರ ಈಜಿಪುರ ಫ್ಲೈ ಓವರ್ ಕಾಮಗಾರಿಯನ್ನು ಮುಗಿಸಲು ಡಿಸೆಂಬರ್ 2025ರ ಅಂತ್ಯದ ಗಡುವು ನೀಡಲಿದೆ. ಅಲ್ಲದೇ ಗುತ್ತಿಗೆ ಪಡೆದಿರುವ ಸಂಸ್ಥೆಯೇ ಕಾಮಗಾರಿಯನ್ನು ಮುಂದುವರೆಸಲು ಸಹ ಸರ್ಕಾರ ಅವಕಾಶವನ್ನು ನೀಡಲಿದೆ.
ಈಜಿಪುರ ಫ್ಲೈ ಓವರ್: ಕೋರಮಂಗಲ ಹೊರ ವರ್ತುಲ ರಸ್ತೆ (ಈಜಿಪುರ)ದಿಂದ ಕೇಂದ್ರಿಯ ಸದನದ ತನಕ ಈ 2.5 ಕಿ. ಮೀ. ಉದ್ದದ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ಪಿಲ್ಲರ್‌ಗಳನ್ನು ಹಾಕಲಾಗಿದೆ. ಆದರೆ ಪ್ರೀಕಾಸ್ಟ್ ಸೆಗ್ಮೆಂಟ್‌ಗಳನ್ನು ಅಳವಡಿಕೆ ಮಾಡಿ, ಮುಂದಿನ ಕಾಮಗಾರಿ ನಡೆಸುವುದು ಬಾಕಿ ಇದೆ.
ಈ ಫ್ಲೈ ಓವರ್ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕ್ಷೇತ್ರ ಬಿಟಿಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಬಿಬಿಎಂಪಿ ಅಧಿಕಾರಿಗಳ ಜೊತೆ ಕಾಮಗಾರಿ ಕುರಿತು ಸಭೆ ನಡೆಸಿರುವ ಸಚಿವರು, ಗುತ್ತಿಗೆ ಪಡೆದ ಸಂಸ್ಥೆಯೇ ಕಾಮಗಾರಿ ಮುಂದುವರೆಸಲು, ಯೋಜನೆ ಪೂರ್ಣಗೊಳಿಸಲು ಇರುವ ಗಡುವು ವಿಸ್ತರಣೆ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ.
2023ರ ನವೆಂಬರ್‌ನಲ್ಲಿ ಬಿಬಿಎಂಪಿ ಬಿಎಸ್‌ಸಿಪಿಎಲ್ ಇನ್‌ಫ್ರಾಸ್ಟ್ರಕ್ಚರ್ ಲಿ. ಫ್ಲೈ ಓವರ್ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಒಪ್ಪಿಗೆ ನೀಡಿತ್ತು, ಆಗ 15 ತಿಂಗಳ ಡೆಡ್‌ಲೈನ್ ನೀಡಲಾಗಿತ್ತು. ಆದರೆ ಗಡುವಿನೊಳಗೆ ಕೆಲಸ ಮುಗಿಸಲು ಕಂಪನಿ ವಿಫಲವಾಗಿದೆ. ಹಿಂದಿನ ಗುತ್ತಿಗೆ ಪಡೆದ ಕಂಪನಿಯ ವಿಳಂಬ ಕಾರಣ ತಮಗೆ ಸರಿಯಾಗಿ ಕೆಲಸ ಮಾಡಲು ಆಗಿಲ್ಲ ಎಂದು ಕಂಪನಿ ಹೇಳಿತ್ತು.
ಹಿಂದೆ ಗುತ್ತಿಗೆ ಪಡೆದ ಕಂಪನಿ ತಯಾರು ಮಾಡಿರುವ ಸೆಗ್ಮೆಂಟ್‌ಗಳನ್ನು ಹಸ್ತಾಂತರ ಮಾಡುವುದು ತಡವಾಗುತ್ತಿದೆ. ಆದ್ದರಿಂದ ಯೋಜನೆ ಪೂರ್ಣಗೊಳಿಸಲು ಇರುವ ಗಡುವು ವಿಸ್ತರಣೆ ಮಾಡಬೇಕು ಎಂದು ಕಂಪನಿ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿತ್ತು. ಈ ಸಮಸ್ಯೆ ಬಗೆಹರಿಸಲು ಒಂದು ವರ್ಷದ ಡೆಡ್‌ಲೈನ್ ವಿಸ್ತರಣೆ ಮಾಡಲಾಗಿದೆ.
ಈ ಫ್ಲೈಓವರ್‌ಗೆ 564 ಸೆಗ್ಮೆಂಟ್‌ಗಳನ್ನು ಅಳವಡಿಕೆ ಮಾಡಬೇಕಿದೆ. ಹಿಂದೆ ಗುತ್ತಿಗೆ ಪಡೆದಿದ್ದ ಕಂಪನಿ 69 ಸೆಗ್ಮೆಂಟ್‌ಗಳನ್ನು ನಿರ್ಮಾಣ ಮಾಡಿದೆ. ಆದರೆ ಇದರಲ್ಲಿ ಕೆಲವು ಸೆಗ್ಮೆಂಟ್‌ಗಳಲ್ಲಿ ದೋಷವಿದ್ದು, ಅದನ್ನು ಬದಲಾವಣೆ ಮಾಡಿ, ಹೊಸದಾಗಿ ನಿರ್ಮಾಣ ಮಾಡಬೇಕಿದೆ.
ಸೆಗ್ಮೆಂಟ್‌ಗಳಲ್ಲಿ ದೋಷವಿದ್ದರೆ ಫ್ಲೈ ಓವರ್ ಮೇಲೆ ವಾಹನ ಸಂಚಾರ ಮಾಡುವಾಗ ಅಪಾಯವಾಗಲಿದೆ. ಆದ್ದರಿಂದ ಬಿಬಿಎಂಪಿ ಈಗ ತಯಾರಾಗಿರುವ ಎಲ್ಲಾ ಸೆಗ್ಮೆಂಟ್‌ಗಳನ್ನು ಪರೀಕ್ಷೆ ಮಾಡಿದ ಬಳಿಕವೇ ಅಳವಡಿಕೆ ಮಾಡಲು ಅನುಮತಿ ನೀಡಲಿದೆ.
"ಕಾಮಗಾರಿ ವೇಳಾಪಟ್ಟಿಯನ್ನು ನೀಡಿದ್ದೇವೆ. ಪ್ರತಿ ತಿಂಗಳು ಕಾಮಗಾರಿಯ ಅಪ್‌ಡೇಟ್ ಕುರಿತು ಮಾಹಿತಿ ನೀಡಲಾಗುತ್ತದೆ. ಕಳೆದ ಮೂರು ತಿಂಗಳಿನಿಂದ ಕಾಮಗಾರಿ ನಿಗದಿತ ವೇಗದಲ್ಲಿ ಸಾಗುತ್ತಿದೆ. 2025ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ" ಎಂದು ಗುತ್ತಿಗೆ ಪಡೆದ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications