ಡ್ರಗ್ಸ್ ಪ್ರಕರಣದಲ್ಲಿ 50 ಲಕ್ಷ ವಹಿವಾಟು; ತನಿಖೆ ಆರಂಭಿಸಿದ ಇಡಿ
ಬೆಂಗಳೂರು, ಅಕ್ಟೋಬರ್ 25 : ಬೆಂಗಳೂರಿನಲ್ಲಿ ಕಳೆದ ವಾರ ಬಂಧಿಸಿದ ಡ್ರಗ್ ಪೆಡ್ಲರ್ 50 ಲಕ್ಷ ರೂ. ಬ್ಯಾಂಕ್ ವಹಿವಾಟು ನಡೆಸಿದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಪೆಡ್ಲರ್ ಹಣಕಾಸು ವ್ಯವಹಾರ ನಡೆಸಿರುವುದು ಬಿನೇಶ್ ಕೊಡಿಯೇರಿ ಜೊತೆ.
ಬಿನೇಶ್ ಕೊಡಿಯೇರಿ ಕೇರಳದ ಮಾಜಿ ಗೃಹ ಸಚಿವ, ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪುತ್ರ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗಾಗಲೇ ಅಕ್ಟೋಬರ್ 17ರಂದು ಬಿನೇಶ್ ಕೋಡಿಯೇರಿ ವಿಚಾರಣೆ ನಡೆಸಿದ್ದರು.
ಕಳೆದ ವಾರ ಬೆಂಗಳೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ ಮೊಹಮದ್ ಅನೂಪ್ ಬಿನೇಶ್ ಕೊಡಿಯೇರಿ ಜೊತೆ 50 ಲಕ್ಷ ರೂ. ಹಣವ ವ್ಯವಹಾರವನ್ನು ನಡೆಸಿರುವುದ ಬೆಳಕಿಗೆ ಬಂದಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ. ಜೊತೆ ಅನೂಪ್ ಸಂಪರ್ಕ ಹೊಂದಿದ್ದ.

ಮೊಹಮದ್ ಅನೂಪ್‌ನನ್ನು ಇಡಿ ಅಧಿಕಾರಿಗಳು ಕಚೇರಿಯಲ್ಲಿ ವಿಚಾರಣೆ ನಡೆಸಿದರು. ಆದರೆ, ಆತ ವಿಚಾರಣೆಗೆ ಸಹಕಾರ ನೀಡದ ಕಾರಣ ವಶಕ್ಕೆ ಪಡೆದು ವಿಚಾರಣೆಯನ್ನು ಮುಂದುವರೆಸಿದ್ದಾರೆ. ಅನಿಕಾ ಡಿ. ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಮೊದಲು ಬಂಧಿತಳಾದ ಆರೋಪಿ.
ಬಿನೇಶ್ ಕೊಡಿಯೇರಿ ಮತ್ತು ಅನೂಪ್ ಸಂಬಂಧದ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡಲಿದ್ದಾರೆ. 50 ಲಕ್ಷದಷ್ಟು ಹಣ ವರ್ಗಾವಣೆ ಆಗಿದ್ದು ಏಕೆ? ಎಂಬುದು ಕುತೂಹಲ ಮೂಡಿಸಿರುವ ಅಂಶವಾಗಿದೆ.
ಮೊಹಮದ್ ಅನೂಪ್ 2015ರಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದ. ಈ ಇದರಲ್ಲಿ ಬಿನೇಶ್ ಕೊಡಿಯೇರಿ ಪಾಲುದಾರಿಕೆ ಹೊಂದಿದ್ದಾರೆ ಎಂಬ ಆರೋಪವೂ ಇದೆ. ಆದರೆ, ಕೊಡಿಯೇರಿ ಕುಟುಂಬ ಸದಸ್ಯರು ಇದನ್ನು ನಿರಾಕರಿಸಿದ್ದಾರೆ.
ಇನ್ನು ಕೇರಳದಲ್ಲಿ ಪತ್ತೆಯಾದ ಚಿನ್ನ ಸಾಗಣೆ ಪ್ರಕರಣದಲ್ಲಿಯೂ ಬಿನೇಶ್ ಕೊಡಿಯೇರಿ ಹೆಸರು ಹೇಳಿ ಬರುತ್ತಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣದಲ್ಲಿಯೂ ಹೆಸರು ಕೇಳಿ ಬರುತ್ತಿದೆ. ಅಗತ್ಯವಿದ್ದರೆ ಪುನಃ ವಿಚಾರಣೆಗೆ ಹಾಜರಾಗಬೇಕು ಎಂದು ಇಡಿ ಬಿನೇಶ್ ಕೊಡಿಯೇರಿಗೆ ಸೂಚನೆ ನೀಡಿದೆ.












Click it and Unblock the Notifications