ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್ ಹಗರಣದ ಪ್ರಮುಖ ಸಾಲಗಾರನ ಬಂಧನ: ಎಷ್ಟು ಕೋಟಿ ಸಾಲ ಪಡೆದಿದ್ದ ಗೊತ್ತೇ?
ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣದ ಪ್ರಮುಖ ಫಲಾನುಭವಿಯನ್ನು (ಸಾಲಗಾರ) ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ತಿಳಿಸಿದೆ. ಈತ ಪಡೆದಿದ್ದ ಸಾಲ ಎಷ್ಟೆಂದು ತಿಳಿಯಿರಿ
ಬೆಂಗಳೂರು, ಫೆಬ್ರವರಿ 23: ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣದ ಪ್ರಮುಖ ಫಲಾನುಭವಿಯನ್ನು (ಸಾಲಗಾರ) ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ತಿಳಿಸಿದೆ. ಆರೋಪಿ ರಾಜೇಶ್ ವಿ ಆರ್ ಬ್ಯಾಂಕಿನ ಆಡಳಿತದೊಂದಿಗೆ ಶಾಮೀಲಾಗಿ ಅಪಾರ ಪ್ರಮಾಣದ ಹಣವನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಆತನನ್ನು ಮೂರು ದಿನಗಳ ಇಡಿ ಕಸ್ಟಡಿಗೆ ಕಳುಹಿಸಿದ್ದಾರೆ. ರಾಜೇಶ್ ಮತ್ತು ಆತನ ಪತ್ನಿ ಇತರ ಸಹಕಾರಿ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಲ್ಲಿಯೂ ಸಾಲ ಮಾಡಿದ್ದಾರೆ. ಈ ಆಪಾದಿತ ವಂಚನೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳೂ ದಾಖಲಾಗಿವೆ ಎಂದು ಇಡಿ ಹೇಳಿದೆ. ಅವರು ಹೆಬಿಚ್ಯುಲ್ ಅಫೆಂಡರ್‌ಗಳು ಎಂದು ಇಡಿ ತಿಳಿಸಿದೆ.

ಬ್ಯಾಂಕ್ ಮತ್ತು ಇತರರ ವಿರುದ್ಧ ಬೆಂಗಳೂರು ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು ಮತ್ತು ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟೆರೆಸ್ಟ್ ಡೆಪಾಸಿಟರ್ಸ್ ಆಕ್ಟ್ 2004 ರ ಅಡಿಯಲ್ಲಿ ದಾಖಲಿಸಲಾದ ಎಫ್‌ಐಆರ್ ಆಧಾರದ ಮೇಲೆ ED ತನ್ನ ಜಾರಿ ಪ್ರಕರಣದ ಮಾಹಿತಿ ವರದಿಯನ್ನು (ECIR) ದಾಖಲಿಸಿದೆ.
ಇಡಿ ಪ್ರಕಾರ, ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕೆ ಹೊಂದಿಕೆಯಾಗದ ಹೆಚ್ಚಿನ ಬಡ್ಡಿದರವನ್ನು ನೀಡುವುದಾಗಿ ಬ್ಯಾಂಕ್ ಭರವಸೆ ನೀಡಿತ್ತು. ಬ್ಯಾಂಕ್‌ನ ಅಧಿಕಾರಿಗಳು ಕಾಲ್ಪನಿಕ ಸಾಲದ ಖಾತೆಗಳನ್ನು ರಚಿಸಿ ಅವರಿಗೆ ಹಣವನ್ನು ವರ್ಗಾಯಿಸಿದ್ದಾರೆ. ಬ್ಯಾಂಕ್ ಉತ್ತಮ ಆರ್ಥಿಕ ಸ್ಥಿತಿಯಲ್ಲಿದೆ ಎಂದು ತೋರಿಸಲು ಹಣವನ್ನು ಮಿತಿಮೀರಿದ ಸಾಲದ ಖಾತೆಗಳಿಗೆ ವರ್ಗಾಯಿಸಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ತಪಾಸಣಾ ವರದಿಯ ಪ್ರಕಾರ, ಅವರು ಬ್ಯಾಂಕ್‌ನಿಂದ 40.4 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾರೆ ಆದರೆ ಅದನ್ನು ಮರುಪಾವತಿ ಮಾಡಿಲ್ಲ. ಪ್ರಕರಣದಲ್ಲಿ ಆರೋಪಿಗಳಿಗೆ ಸೇರಿದ 45.32 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ (ಎಸ್‌ಜಿಆರ್‌ಎಸ್‌ಬಿಎನ್) ಹಗರಣ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ ಎಂದು ಅಪರೇಷನ್ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದರು.
ಈ ಕುರಿತು ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಎಂಎಲ್‌ಸಿ ಯು ಬಿ ವೆಂಕಟೇಶ್‌ಗೆ ಉತ್ತರಿಸಿದ ಸಚಿವರು, 'ಸಿಐಡಿ, ಸಹಕಾರ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಹಗರಣದ ತನಿಖೆ ನಡೆಸಿ ಇದುವರೆಗೆ 1290 ಕೋಟಿ ರೂಪಾಯಿಗಳ ವಂಚನೆಯನ್ನು ಪತ್ತೆ ಮಾಡಿದೆ' ಎಂದು ಹೇಳಿದ್ದರು. ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಪ್ರಕರಣವನ್ನು ಸಿಬಿಐಗೆ ವಹಿಸುವುದು ವಿಳಂಬವಾಗಿತ್ತು ಎಂದೂ ಸ್ಪಷ್ಟಪಡಿಸಿದ್ದರು.
ಬ್ಯಾಂಕ್‌ನಲ್ಲಿ ಅಡಮಾನಕ್ಕೆ ನೀಡಿದ್ದ ದಾಖಲೆಗಳು ಬೇರೆಯವರ ಪಾಲಾಗಿರುವುದರಿಂದ ಸಾಲ ಪಡೆದವರ ಆಸ್ತಿಯನ್ನು ಬ್ಯಾಂಕ್‌ನಿಂದ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಯು.ಬಿ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದ್ದರು.












Click it and Unblock the Notifications