E-Khata: ಬೆಂಗಳೂರಲ್ಲಿ ಇ-ಖಾತೆ ಪಡೆಯಲು ₹4000 ಬೇಕಾ? ಆಸ್ತಿ ಮಾಲೀಕರೇ ಗಮನಿಸಿ
ಬೆಂಗಳೂರು, ಮಾರ್ಚ್ 14: ಸರ್ಕಾರ ವತಿಯಿಂದ ಆಸ್ತಿ ದಾಖಲಾತಿಗಳ ಡಿಜಿಟಲೀಕರಣ ಮಾಡಿ ಇ-ಖಾತಾ ವಿತರಣೆಗೆ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 12ಲಕ್ಷ ಆಸ್ತಿಗಳು ಡಿಜಿಟಲೀಕರಣಗೊಂಡಿವೆ. ಒಂದು ಲಕ್ಷಕ್ಕೂ ಹೆಚ್ಚು ಇ-ಖಾತಾಗಳು ವಿತರಣೆ ಆಗಿವೆ. ಆಸ್ತಿ ಮಾಲೀಕರು ಇ-ಖಾತಾಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅವರಿಗೆ ಅಂತಿಮ ಇಖಾತಾ ನೀಡಲು ಕಂದಾಯ ಅಧಿಕಾರಿಗಳು ರೂ.4000 ಹಣ ಕೇಳುತ್ತಿದ್ದಾರೆ ಎಂಬ ಆಸ್ತಿ ಮಾಲೀಕರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇ-ಖಾತಾದ ಅಂತಿಮ ಪ್ರತಿಯನ್ನು ಪಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕೃತವಾಗಿ 125 ರೂ. ಶುಲ್ಕ ವಿಧಿಸಿದೆ. ಕೆಲವೆಡೆ ಸರ್ವೀಸ್ ಚಾರ್ಜ್ 20ರಿಂದ 40 ರೂಪಾಯಿ ಹೆಚ್ಚುವರಿ ಚಾರ್ಜ್ ಮಾಡುತ್ತಿದ್ದಾರೆ. ಇದರ ಹೊರತು ಹೆಚ್ಚಿನ ಹಣ ಕೊಡಬೇಕಿಲ್ಲ.

ಹೀಗಿದ್ದರು ಸಹ ಬಿಬಿಎಂಪಿ ಕೆಲವು ಕಂದಾಯ ಅಧಿಕಾರಿಗಳು ಪ್ರತಿ ಅಂತಿಮ ಇ-ಖಾತಾ ಅರ್ಜಿ ವಿತರಣೆಗೆ ರೂಪಾಯಿ 4,000 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಇದು ಅನಧಕೃತ ಶುಲ್ಕ ಹೇರಿಕೆ. ಹೆಚ್ಚುವರಿ ಹಣ ಪಡೆಯುತ್ತಿರುವುದೇಕೆ ಎಂದು ಆಸ್ತಿ ಮಾಲೀಕರು ಪ್ರಶ್ನಿಸಿದ್ದಾರೆ. ನೀವು ಇಷ್ಟು ಹಣ ನೀಡಿದರೆ, ನಿಮ್ಮ ಅಂತಿಮ ಇ-ಖಾತಾವನ್ನು ಒಂದು ವಾರದೊಳಗೆಯೇ ನಿಮಗೆ ತಲುಪಿಸಲಾಗುತ್ತದೆ ಎಂದು ಭರವಸೆ ನೀಡುತ್ತಿದ್ದಾರೆ ಎಂದು ದೂರಿದರು.
ಇ-ಖಾತಾ ಮೇಳಕ್ಕೆ ಹಣಕ್ಕೆ ಡಿಮ್ಯಾಂಡ್
ಇತ್ತೀಚೆಗೆ ಇ-ಖಾತಾ ಮೇಳವನ್ನು ಆಯೋಜನೆ ಸಂಬಂಧ ಬಿಬಿಎಂಪಿಯ ಕಂದಾಯ ಅಧಿಕಾರಿಗಳನ್ನು ಬೆಳ್ಳಂದೂರಿನಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳ ಕಲ್ಯಾಣ ಸಂಘ (ARWA) ಸಂಪರ್ಕಿಸಿತ್ತು. ಇದಕ್ಕೂ ಸಹ ಅಧಿಕಾರಿಗಳು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಪ್ರತಿ ಫ್ಲಾಟ್ ಮಾಲೀಕರು ರೂ.4,000 ಕೊಟ್ಟರೆ ಪಾಲಿಕೆ ಸಿಬ್ಬಂದಿ ಸಹಿತ ಅಭಿಯಾನ ನಡೆಸಿಕೊಡಲಾಗುವುದು ಎಂದಿದ್ದಾರೆ. ಆಸ್ತಿ ದಾಖಲೆ ಅಪ್‌ಲೋಡ್ , ವೈಯಕ್ತಿಕ ದಾಖಲೆ ಸಂಬಂಧ ಪ್ರಕರಣಗಳ ಸರಿಪಡಿಸುವುದು, ಅನುಮೋದಿಸುವುದು ಎಲ್ಲ ಒಳಗೊಂಡಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆಂದು ARWA ಅಸಮಾಧಾನ ಹೊರ ಹಾಕಿದೆ.

ಅಪಾರ್ಟ್‌ಮೆಂಟ್‌್ನಲ್ಲಿ ಏಜೆಂಟರುಗಳಾದ 5,000 ರೂಪಾಯಿಗಿಂತ ಹೆಚ್ಚಿನ ಹಣ ಕೇಳುತ್ತಾರೆ. ಆದರೆ ನಾವು ಆ ರೀತಿ ಕೇಳುವುದಿಲ್ಲ. ಅವರಿಗಿಂತ ಕಡಿಮೆ ಹಣಕ್ಕೆ ಅಭಿಯಾನ ಮೂಲಕ ಆಸ್ತಿ ಖಾತಾ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತವೆ ಎಂದಿದ್ದಾರೆ ಎಂದು ವರದಿ ಆಗಿದೆ.
ಹಣ ನೀಡದವರಿಗೆ ಇ-ಖಾತಾ ವಿತರಣೆ ವಿಳಂಬ??
ಬಿಬಿಎಂಪಿಯು ತನ್ನವ್ಯಾಪ್ತಿಯ ನಿವಾಸಿಗಳಿಗೆ ಇ-ಖಾತಾ ಪಡೆಯುವಂತೆ ಸೂಚನೆ ನೀಡುತ್ತಿದೆ. ಅಭಿಯಾನ ಹಮ್ಮಿಕೊಳ್ಳುತ್ತಿದೆ. ಅರ್ಜಿಗಳನ್ನು ಆಹ್ವಾನಿಸಿದ್ದು, ಡಿಜಿಟಲೀಕರಣಗೊಂಡ ಆಸ್ತಿಗಳ ವಿತರಣೆ ಸಹ ಮಾಡುತ್ತಿದೆ. ಇದಕ್ಕಾಗಿ ಅಧಿಕೃತ ಪೋರ್ಟ್‌ಗಳು ಇವೆ. ಆನ್‌ಲೈನ್‌ನಲ್ಲೂ ಇ-ಖಾತೆ ಪಡೆಯಬಹುದಾಗಿದೆ. ಹೀಗಿದ್ದರೂ ಹೆಚ್ಚಿನ ಹಣಕ್ಕಾಗಿ ಇಂತಹ ಬೇಡಿಕೆ ಇಡುವುದರಿಂದ ಅರ್ಜಿ ಸಲ್ಲಿಕೆ, ಉದ್ದೇಶ ಖಾತಾ ವಿತರಣೆ ವಿಳಂಬಭವಾಗುತ್ತಿದೆ. ಇ-ಖಾತೆ ಉಪಕ್ರಮದಲ್ಲಿ ಭ್ರಷ್ಟಾಚಾರ ನುಸುಳಿದ್ದು, ಇದರಿಂದ ಆಸ್ತಿ ಮಾಲೀಕರಿಗೆ ತೊಂದರೆ ಆಗುತ್ತಿದೆ ಎಂದು ಸಂಘದ ಸದಸ್ಯರೊಬ್ಬರು ಹೇಳಿದರು.
ಕೇಳಿದಷ್ಟು ಹಣ ಕೊಡದವರಿಗೆ ವಿತರಣೆ ವಿಳಂಬ
ಎರಡು ತಿಂಗಳ ಹಿಂದೆಯೇ ಇ-ಖಾತಾಗಾಗಿ ಅರ್ಜಿ ಸಲ್ಲಿಸಿದ್ದೇನೆ. ಬಿಬಿಎಂಪಿ ಸೂಚನೆ ಮೇರೆಗೆ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಎಲ್ಲವನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಿದ್ದೇನೆ. ಅದಕ್ಕಾಗಿ ಡಿಜಿಟಲ್ ಸ್ವೀಕೃತಿಯನ್ನು ಪಡೆದುಕೊಂಡಿದ್ದೇನೆ. ಆದರೆ ನನಗೆ ಅಂತಿಮ ಇ-ಖಾತಾ ಇನ್ನೂವರೆಗೆ ವಿತರಣೆ ಆಗಿಲ್ಲ. ಕಾಯುತ್ತಿದ್ದೇನೆ ಎಂದು
ಆರ್‌ಆರ್ ನಗರದ ನಿವಾಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದೆಲ್ಲ ಬೆಳವಣಿಗೆ, ಆರೋಪ ಕೇಳಿ ಬರುತ್ತಿದ್ದಂತೆ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಹೆಚ್ಚುವರಿ ಹಣ ನೀಡದಂತೆ ಸೂಚನೆ ನೀಡಿದ್ದಾರೆ. ಅನಗತ್ಯ ಹಣ ನೀಡಬೇಡಿ. ಪಾಲಿಕೆಯು ಇ-ಖಾತಾ ಪ್ರಕ್ರಿಯೆ ಮೇಲ್ವಿಚಾರಣೆ ಮಾಡುತ್ತದೆ. ನೀವು ಮಧ್ಯವರ್ತಿಗಳು, ಅಧಿಕಾರಿಗಳನ್ನು ಸಂಪರ್ಕಿಸದೇ ಆನ್‌ಲೈನ್ ಮೂಲಕ ಇ-ಖಾತೆ ಅರ್ಜಿ ಹಾಕುವಂತೆ ಮನವಿ ಮಾಡಿದ್ದಾರೆ.













Click it and Unblock the Notifications