E-Khata: ಹೆಸರಿನ ಸ್ಪೆಲ್ಲಿಂಗ್ ತಪ್ಪಾದರೂ ಇ-ಖಾತಾ ಕರಡು ಡೌನ್‌ಲೋಡ್ ಆಗಲ್ಲ
ಬೆಂಗಳೂರು, ನವೆಂಬರ್ 26: ಆಸ್ತಿಗಳ ನೋಂದಣಿಗೆ ಕರ್ನಾಟಕ ಸರ್ಕಾರ ಇ-ಖಾತಾ ವ್ಯವಸ್ಥೆ ಕಡ್ಡಾಯಗೊಳಿಸಿದೆ. ಈ ಕುರಿತು ಭೂ ಮಾಲೀಕರು, ಆಸ್ತಿ ಖರೀದಿ ಮತ್ತು ಮಾರಾಟಗಾರರಲ್ಲಿ ಅನೇಕ ಗೊಂದಲಗಳು ಇವೆ. ಇವುಗಳನ್ನು ಪರಿಹರಿಸುವ ಕೆಲಸವನ್ನು ಸಹ ಸರ್ಕಾರ, ಬಿಬಿಎಂಪಿ ಮಾಡುತ್ತಿದೆ. ಬೆಂಗಳೂರು ನಗರದ ಆಸ್ತಿ ಮಾಲೀಕರು ಕರಡು ಇ-ಖಾತಾವನ್ನು ಡೌನ್‌ಲೋಡ್ ಮಾಡಿಕೊಂಡು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಸರ್ಕಾರದ ಕ್ರಮಕ್ಕೆ ಜನರ ಬೆಂಬಲ ಸಹ ಸಿಕ್ಕಿದೆ.
ಉದ್ಯಾನ ನಗರಿಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವಿಭಾಗವಾರು ವ್ಯಾಪ್ತಿಯಲ್ಲಿ ಎಷ್ಟು ಆಸ್ತಿ ಮಾಲೀಕರು ಇ-ಖಾತಾ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ದಕ್ಷಿಣ ಮತ್ತು ದಾಸರಹಳ್ಳಿ ವಲಯದಲ್ಲಿ ಅತ್ಯಧಿಕ ಜನರು ಇ-ಖಾತಾ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಬಿಬಿಎಂಪಿ ಮಾಹಿತಿ ಪ್ರಕಾರ ನಗರದ ದಕ್ಷಿಣ ಮತ್ತು ದಾಸರಹಳ್ಳಿ ವಲಯದಲ್ಲಿ ಶೇ 40ರಷ್ಟು ಆಸ್ತಿ ಮಾಲೀಕರು ಇ-ಖಾತಾ ಕರಡು ಡೌನ್‌ಲೋಡ್ ಮಾಡಿಕೊಂಡು ಪರಿಶೀಲನೆ ನಡೆಸಿದ್ದಾರೆ. ಅಂತಿಮ ಇ-ಖಾತಾ ಪಡೆಯುವ ಮುನ್ನ ಕರಡು ಡೌನ್‌ಲೋಡ್ ಮಾಡಿಕೊಂಡು ಪರಿಶೀಲನೆ ಮಾಡಿ, ತಿದ್ದುಪಡಿಗಳಿದ್ದರೆ ಮಾಡಿಸಿಕೊಳ್ಳಲು ಸಹ ಅವಕಾಶವನ್ನು ನೀಡಲಾಗಿದೆ.
ಯಾವ ವಲಯದಲ್ಲಿ ಎಷ್ಟು ಡೌನ್‌ಲೋಡ್?; ಬಿಬಿಎಂಪಿ ಮಾಹಿತಿ ಪ್ರಕಾರ ದಕ್ಷಿಣ ವಲಯದಲ್ಲಿ 1.2 ಲಕ್ಷ ಅಥವ ಶೇ 43ರಷ್ಟು ಡೌನ್‌ಲೋಡ್ ಆಗಿದೆ. ಈ ವಲಯದ 2.8 ಲಕ್ಷ ಕರಡು ಇ-ಖಾತಾ ಅಪ್‌ಲೋಡ್ ಮಾಡಲಾಗಿದೆ. ದಾಸರಹಳ್ಳಿ ವಲಯದಲ್ಲಿ 25,300 ಅಥವ ಶೇ 41ರಷ್ಟು ಡೌನ್‌ಲೋಡ್ ಆಗಿದೆ. ಈ ವಲಯದಲ್ಲಿ 61,700 ಆಸ್ತಿಗಳ ಇ-ಖಾತಾ ಅಪ್‌ಲೋಡ್ ಮಾಡಲಾಗಿದೆ.
ಪಶ್ಚಿಮ ವಲಯದಲ್ಲಿ 2,57,000ದಲ್ಲಿ 94,200, ಯಲಹಂಕ ಮತ್ತು ಆರ್‌ಆರ್ ನಗರ ವ್ಯಾಪ್ತಿಯಲ್ಲಿ 2.1 ಲಕ್ಷ ಇ-ಖಾತಾಗಳ ಪೈಕಿ 63,500 ಡೌನ್‌ಲೋಡ್ ಆಗಿದೆ. ಮಹದೇವಪುರದಲ್ಲಿ 92,000, ಪೂರ್ವದಲ್ಲಿ 87,200 ಮತ್ತು ಬೊಮ್ಮನಹಳ್ಳಿಯಲ್ಲಿ 81,200 ಡೌನ್‌ಲೋಡ್ ಆಗಿದೆ. ನಗರದಲ್ಲಿ ಒಟ್ಟಾರೆ ಶೇ 25ರಷ್ಟು ಕರಡು ಇ-ಖಾತಾ ಡೌನ್‌ಲೋಡ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಕೆಲವು ಆಸ್ತಿ ಮಾಲೀಕರು ತಮ್ಮ ವಾರ್ಡ್ ಮತ್ತು ನಂಬರ್ ಬಗ್ಗೆ ಸರಿಯಾಗಿ ಮಾಹಿತಿ ತಿಳಿದಿಲ್ಲ. ಆದ್ದರಿಂದ ಡೌನ್‌ಲೋಡ್ ಮಾಡಿಕೊಂಡಿಲ್ಲ. ಕೆಲವು ಜನರು ತಮ್ಮ ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿ ನಮೂದಿಸಿರುತ್ತಾರೆ. ಅವರ ಇ-ಖಾತಾ ತೋರಿಸುವುದಿಲ್ಲ ಎಂದು ಹೇಳಿದ್ದಾರೆ.
ಮಹಾದೇವಪುರ ವ್ಯಾಪ್ತಿಯಲ್ಲಿ ರಾಮಪ್ರಸಾದ್ ಎನ್ನುವರು ತಮ್ಮ ಹೆಸರನ್ನು ರಾಮ ಪ್ರಸಾದ್ ಎಂದು ನಮೂದಿಸಿದ್ದು, ಅವರ ಆಸ್ತಿಯ ಕರಡು ಇ-ಖಾತಾ ತೋರಿಸಿಲ್ಲ. ಇಂತಹ ಅನೇಕ ತಪ್ಪುಗಳಿಂದ ಕೆಲವು ಆಸ್ತಿ ಮಾಲೀಕರ ಇ-ಖಾತಾ ಡೌನ್‌ಲೋಡ್ ಆಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕರಡು ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಎಂದು ನಾವು ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದೇವೆ. ಯೂಟ್ಯೂಬ್‌ನಲ್ಲಿ ವಿಡಿಯೋ ಸಹ ಅಪ್‌ಲೋಡ್ ಮಾಡಿದ್ದೇವೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಬೆಂಗಳೂರು ಒನ್‌ನಲ್ಲಿ ಇ-ಖಾತಾ ಪಡೆಯುವುದು ಹೇಗೆ?: ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತಾವನ್ನು ಪಡೆಯಲು ಬೆಂಗಳೂರು ಒನ್ ಕೇಂದ್ರದಲ್ಲೂ ಅವಕಾಶ ನೀಡಲಾಗಿದೆ.
ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕು. ಬಿಬಿಎಂಪಿಗೆ 125 ರೂ. (ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿಸಬೇಕು.
ಕೆಳಗಿನ ದಾಖಲೆಗಳ ಪ್ರತಿಯೊಂದಿಗೆ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ (ಕೆಲವು ದಾಖಲೆ ತೋರಿಸಲು ಮತ್ತು ಸ್ಕ್ಯಾನ್ ಮಾಡಲು ಮಾತ್ರ ಅಲ್ಲಿ ಸಲ್ಲಿಸುವ/ ನೀಡುವ ಅಗತ್ಯವಿಲ್ಲ)
* ನಿಮ್ಮ ಆಸ್ತಿ ತೆರಿಗೆ ರಶೀದಿ
* ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ
* ಎಲ್ಲಾ ಮಾಲೀಕರ ಆಧಾರ್
* ಬೆಸ್ಕಾಂ ಬಿಲ್
* ಜಲಮಂಡಳಿ ಬಿಲ್ (ನೀವು ಕಾವೇರಿ ಸಂಪರ್ಕವನ್ನು ಹೊಂದಿದ್ದರೆ)
* ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)
* ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)
* ಡಿಸಿ ಪರಿವರ್ತನೆ (ಇದರ ದಾಖಲೆ ಹೊಂದಿದ್ದರೆ)
* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್ (KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ (ಇದು ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಮತ್ತು ನೀವು ಇದರ ದಾಖಲೆ ಹೊಂದಿದ್ದರೆ)
ಮೇಲಿನ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ ಆನ್‌ಲೈನ್ ವಿವರಗಳನ್ನು ಸಲ್ಲಿಸಲು ಅವರಿಗೆ ತೋರಿಸಿ ಮತ್ತು ನಂತರ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಬಿಬಿಎಂಪಿ ಹೇಳಿದೆ.












Click it and Unblock the Notifications