Final E-Khata: ಬಿಬಿಎಂಪಿ 08 ವಲಯಗಳಲ್ಲಿ ಇ-ಖಾತಾ ವಿತರಣೆ ಆಗಿದ್ದೆಷ್ಟು?, ವಲಯವಾರು ಅಂಕಿ-ಸಂಖ್ಯೆಗಳು
ಬೆಂಗಳೂರು, ಜೂನ್ 29: ಕರ್ನಾಟಕ ರಾಜ್ಯ ಸರ್ಕಾರ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಜೊತೆಗೆ ಅವುಗಳನ್ನು ಇ-ಖಾತಾ ರೂಪದಲ್ಲಿ ನೀಡಲು ಸೂಕ್ತ ಕ್ರಮ ಕೈಗೊಂಡಿದೆ. ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇ-ಖಾತೆ ಅರ್ಜಿಗಳನ್ನು ಸ್ವೀಕರಿಸಿ ವಿತರಣೆ ಮಾಡಲಾಗುತ್ತಿದೆ. ಆದರೆ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇ-ಖಾತೆ ಮೇಳಕ್ಕೆ ಚಾಲನೆ ನೀಡಿದ್ದಾರೆ. ಹಾಗಾದರೆ ಈವರೆಗೆ ಎಂಟು ವಲಯಗಳಲ್ಲಿ ಎಷ್ಟು ಇ-ಖಾತೆ ವಿತರಣೆ ಆಗಿವೆ? ಅದರ ಅಂಕಿ ಸಂಖ್ಯೆಗಳು ಇಲ್ಲಿವೆ.
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಇ-ಖಾತೆ ಪಡೆಯುವಂತೆ ಆಸ್ತಿ ಮಾಲೀಕರಿಗೆ, ನಾಗರಿಕರಿಗೆ ಜಾಗೃತಿ ಮೂಡಿಸಲಾಗಿದೆ. ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಜನ ಸೇವಕ, ಆನ್‌ಲೈನ್ ಮೂಲಕ ಕೂತಲ್ಲಿಯೇ ಇ-ಖಾತೆ ಪಡೆದುಕೊಳ್ಳುವ ಸೌಲಭ್ಯ ಬಿಬಿಎಂಪಿ ಕಲ್ಪಿಸಿದೆ. ಹೀಗಿದ್ದರು 25 ಲಕ್ಷ ಇ-ಖಾತೆಯಲ್ಲಿ ಕೇವಲ 5.34 ಲಕ್ಷ ಮಾತ್ರ ವಿತರಣೆ ಆಗಿವೆ.

ಕಳೆದ 24 ಗಂಟೆಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ 3088 ಅಂತಿಮ ಇ-ಖಾತೆಗಳನ್ನು ಆಸ್ತಿ ಮಾಲೀಕರಿಗೆ ನೀಡಲಾಗಿದೆ. ಇದರಲ್ಲಿ ಆರ್‌ಆರ್‌ನಗರ ವಲಯ ವ್ಯಾಪ್ತಿಯಲ್ಲಿ ಮಾತ್ರವೇ ಹೆಚ್ಚಿನ ಸಂಖ್ಯೆ ಜನರು ಇ-ಖಾತಾ ಪಡೆದಿದ್ದಾರೆ. ಒಟ್ಟಾರೆಯಾಗಿ ಎಂಟು ವಲಯಗಳಲ್ಲಿ 5.34 ಲಕ್ಷ ಖಾತೆ ನೀಡಲಾಗಿದೆ. ಪಾಲಿಕೆ ವಲಯವಾರು ಈವರೆಗೆ ಎಷ್ಟು ಇ-ಖಾತೆಗಳು ವಿತರಣೆ ಆಗಿವೆ ಎಂಬ ಮಾಹಿತಿ ಮುಂದಿದೆ.
ವಲಯವಾರು E-Khata ವಿತರಣೆ ಮಾಹಿತಿ
* 06 ಉಪವಿಭಾಗ ಹೊಂದಿರುವ ಮಹಾದೇಪುವರ ವಲಯ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 493 ಇ-ಖಾತೆಗಳನ್ನು ವಿತರಿಸಲಾಗಿದೆ. ಇವು ಸೇರಿ ಈ ವಲಯದಲ್ಲಿ ಇದುವರೆಗೆ ಬರೋಬ್ಬರಿ 83,892 ಇ-ಖಾತೆಗಳನ್ನು ನೀಡಲಾಗಿದೆ.
* 12 ಉಪ ವಿಭಾಗ ಹೊಂದಿರುವ ಬೆಂಗಳೂರು ದಕ್ಷಿಣ ವಲಯದಲ್ಲಿ ಕಳೆದ 24 ಗಂಟೆಗಳಲ್ಲಿ 432 ಇ-ಖಾತಾಗಳನ್ನು ವಿತರಿಸಲಾಗಿದೆ. ಅದೆಲ್ಲವು ಸೇರಿ ಈವರೆಗೆ ವಲಯದಲ್ಲಿ ಒಟ್ಟು 73,532 ಇ-ಖಾತೆಗಳನ್ನು ಆಸ್ತಿ ಮಾಲೀಕರಿಗೆ ನೀಡಲಾಗಿದೆ.
* ಒಟ್ಟು 12 ಉಪ ವಿಭಾಗಗಳನ್ನು ಹೊಂದಿರುವ ಬೆಂಗಳೂರು ಪಶ್ಚಿಮ ವಲಯದಲ್ಲಿ ಕಳೆದ ಒಂದೇ ದಿನದಲ್ಲಿ370 ಇ-ಖಾತೆಗಳನ್ನು ನೀಡಿದ್ದು, ಈವರೆಗೆ ಒಟ್ಟು 54,892 ಅಂತಿಮ ಇ-ಖಾತೆಗಳು ಜನರ ಕೈ ಸೇರಿವೆ.
* 07 ಉಪ ವಿಭಾಗಗಳನ್ನು ಹೊಂದಿರುವ ಬೊಮ್ಮನಹಳ್ಳಿ ವಲಯದ ಅಧಿಕಾರಿಗಳು ಕಳೆದ ಒಂದೇ ದಿನದಲ್ಲಿ 447 ಮಂದಿ ಇ-ಖಾತಾ ಪಡೆದಿದ್ದಾರೆ. ಒಟ್ಟು ಈವರೆಗೆ 87,070 ಮಂದಿ ಇ-ಖಾತಾ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಅಧಿಕೃತ ಮಾಹಿತಿ ನೀಡಿದೆ.

* ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಕಳದ 24 ಗಂಟೆಗಳಲ್ಲಿ ಕೇವಲ 174 ಮಂದಿ ಇ-ಖಾತೆ ಪಡೆದುಕೊಂಡಿದ್ದಾರೆ. ಇದು ಸೇರಿ 30,439 ಮಂದಿ ಅಂತಿಮ ಇ-ಖಾತೆ ಪಡೆದುಕೊಂಡಂತಾಗಿದೆ.
* ಇನ್ನೂ 12 ಉಪ ವಿಭಾಗ ಹೊಂದಿರುವ ಬೆಂಗಳೂರಿನ ಪೂರ್ವ ವಲಯದಲ್ಲಿ ನೆನ್ನೆ ಒಂದೇ ದಿನ 291 ವಿತರಣೆ ಸೇರಿ, ಈವರೆಗೆ ಒಟ್ಟು 49,751 ಇ-ಖಾತೆಗಳನ್ನು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾತೆ ಪಡೆಯುವಂತೆ ಜನರಿಗೆ ಬಿಬಿಎಂಪಿ ಅಧಿಕಾರಿಗಳು ಜಾಗೃತಿ ಮೂಡಿಸುತ್ತಲೇ ಇದ್ದಾರೆ.
* ಐದು ಉಪ ವಿಭಾಗ ಹೊಂದಿರುವ ಯಲಹಂಕ ವಿಭಾಗದಲ್ಲಿ ಒಂದೇ ದಿನ ನೆನ್ನೆ 321 ಇ-ಖಾತಾ ಸೇರಿ 71,055 ಅಂತಿಮ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ.
* ಕೊನೆಯದಾಗಿ ರಾಜರಾಜೇಶ್ವರಿ ವಲಯ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 560 ಇ-ಖಾತೆಗಳನ್ನು ವಿತರಿಸಲಾಗಿದೆ. ಇದು ಸೇರಿದಂತೆ ಒಟ್ಟು ಈವರೆಗೆ ಈ ವಲಯದಲ್ಲಿ 84,041 ಇ-ಖಾತೆಗಳನ್ನು ವಿತರಣೆ ಮಾಡಿದ್ದೇವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications