ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್ ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲ!
ಬೆಂಗಳೂರು, ಸೆಪ್ಟೆಂಬರ್ 01: ವರ್ಷಗಳಿಂದ ನೀರನ್ನೇ ಕಾಣದ ಶೌಚಾಲಯ, ಆ ಗಬ್ಬು ಶೌಚಾಲಯಕ್ಕೆ ಬಾಗಿಲುಗಳೂ ಇಲ್ಲ, ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಬೆಳೆದ ಕಳೆ ಗಿಡಗಳು ಇದು ಯಾವುದೋ ಹಳೆ ಕಟ್ಟಡದ ವರ್ಷಣೆಯಲ್ಲ. ದೊಮ್ಮಲೂರು ಬಿಡಿಎ ಕಾಂಪ್ಲೆಕ್ಸ್‌ನ ಸ್ಥಿತಿ.
ದೊಮ್ಮಲೂರಿನ ಬಿಡಿಎ ಕಾಂಪ್ಲೆಕ್ಸ್‌ನ ಶೌಚಾಲಯ ಅತಿಧಾರುಣ ಸ್ಥಿತಿಯಲ್ಲಿದೆ. ಮೂಗು ಮುಚ್ಚಿಕೊಂಡೂ ಒಳ ಹೋಗಲು ಅಸಾಧ್ಯವಾದ ಪರಿಸ್ಥಿತಿ. ಹಾಳು ಸುರಿದಿರುವ ಈ ಕಟ್ಟಡಕ್ಕೆ ಕಾವಲುಗಾರರೂ ಯಾರೂ ಇಲ್ಲ.
ಈ ಬಾಗಿಲಿಲ್ಲದ ಶೌಚಾಲಯವನ್ನೇ ಮಹಿಳೆಯರು ಬಳಸಬಹುದಾದ ಪರಿಸ್ಥಿತಿ ಇಲ್ಲಿದೆ. ಬೆಂಗಳೂರನ್ನು ಅಭಿವೃದ್ಧಿ ಮಾಡಲೆಂದು ಸ್ಥಾಪಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಟ್ಟಡದಲ್ಲಿಯೇ ಈ ಗತಿಯಾದರೆ ಇವರು ಬೆಂಗಳೂರನ್ನು ಉದ್ಧಾರ ಮಾಡುವುದಾದರೂ ಹೇಗೆ?

'ಒನ್‌ಇಂಡಿಯಾ ಕನ್ನಡ' ಓದುಗರೊಬ್ಬರು ಈ ವಿಷಯವನ್ನು ನಮ್ಮ ಸುದ್ದಿಮನೆಗೆ ತಲುಪಿಸಿದ್ದಾರೆ. 'ಅಧಿಕಾರ ಕುರ್ಚಿ ಉಳಿಸುವುದೆ ಅವರ ದೊಡ್ಡ ಸಾಧನೆ ಯಾವ ರಾಜಕೀಯ ಪಕ್ಷಗಳು ಅವರ ಸ್ವಾರ್ಥ ಬಿಟ್ಟು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕೊಡುವ ಪದ್ಧತಿ ಇಲ್ಲ' ಎಂದು ಆಕ್ರೋಶವನ್ನೂ ಹೊರಹಾಕಿದ್ದಾರೆ.
ತನ್ನನ್ನು ತಾನು ಬೆಂಗಳೂರಿನ ಉದ್ದಾರಕ ಎಂದು ಕರೆದುಕೊಳ್ಳುವ ಬಿಡಿಎ ತನ್ನದೇ ಕಾಂಪ್ಲೆಕ್ಸ್ ಬಗ್ಗೆ ಗಮನಿಸಿಲ್ಲ. ಇನ್ನಾದರೂ ಬಿಡಿಎ ಕಣ್ಣು ತೆರೆದುಕೊಳ್ಳಲಿ. ಸಾರ್ವಜನಿಕರ ಆಕ್ರೋಶ ಕಟ್ಟೆ ಒಡೆಯುವ ಮುನ್ನಾ ಎಚ್ಚೆತ್ತುಕೊಳ್ಳಲಿ ಎಂಬುದೇ ನಮ್ಮ ಆಶಯ.












Click it and Unblock the Notifications