Real Estate: ಯಾವುದೇ ಕಾರಣಕ್ಕೂ ಜಮೀನು ಮಾರಬೇಡಿ: ಈ ಭಾಗದ ಜನರಿಗೆ ಡಿಕೆ ಶಿವಕುಮಾರ್ ಮನವಿ
ಬೆಂಗಳೂರು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳು ಘೋಷಣೆಯಾಗುತ್ತಿದ್ದು ಭೂಮಿಯ ಬೆಲೆ ದಿನದಿಂದ ಗಗನಕ್ಕೇರುತ್ತಿದೆ. ಬೆಂಗಳೂರು ಮಾತ್ರವಲ್ಲದೆ ಅಕ್ಕ ಪಕ್ಕದ ಜಿಲ್ಲೆಗಳಲ್ಲೂ ಭೂಮಿಗೆ ಚಿನ್ನದ ಬೆಲೆ ಬರುತ್ತಿದೆ. ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ನಿಮ್ಮ ಜಮೀನು ಮಾರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮತ್ತೊಮ್ಮೆ ಈ ಭಾಗದ ಜನರಿಗೆ ಮನವಿ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿಯನ್ನು ಮಾರಬೇಡಿ. ಮುಂದಿನ ದಿನಗಳಲ್ಲಿ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬರಲಿದೆ, ಆದ್ದರಿಂದ ಆಸ್ತಿಯನ್ನ ಮಾರದೆ ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲೂ ನಾನು ಇದೇ ಮಾತು ಹೇಳಿದ್ದೆ. ಈಗಲೂ ಅದೇ ಹೇಳುತ್ತಿದ್ದೇನೆ, ಕನಕಪುರ ಮತ್ತು ಸುತ್ತಮುತ್ತಲಿನ ಜನ ತಮ್ಮ ಆಸ್ತಿಯನ್ನು ಮಾರುವ ಯೋಚನೆ ಮಾಡದೆ ಕಾಪಾಡಿಕೊಳ್ಳಿ ಎಂದರು.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವುದಾಗಿ ಈ ಹಿಂದೆ ಡಿಕೆ ಶಿವಕುಮಾರ್ ಹೇಳಿದ್ದರು. ಇದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದಿದ್ದರು. ಆದರೆ ಅವರ ಈ ಬೇಡಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಹೆಸರು ಬದಲಾವಣೆಗೆ ಸರ್ಕಾರ ನಿರ್ಧಾರ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ವಿದೇಶಿ ಬಂಡವಾಳ ಆಕರ್ಷಣೆಗೆ ರಾಜ್ಯ ಸರ್ಕಾರ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿ ಮಾಡುತ್ತಿದ್ದು ವಿವಿಧ ಕಡೆಗಳಲ್ಲಿ ಭೂಮಿಗೆ ಭರ್ಜರಿ ಬೆಲೆ ಸಿಗುತ್ತಿದೆ.
ಹೆಚ್‌ಡಿಕೆ ಒಂದು ಸೈಟ್ ಆದ್ರೂ ಕೊಟ್ಟಿದ್ದಾರಾ?
ನಾನು ಶಾಲೆ ನಿರ್ಮಾಣಕ್ಕಾಗಿ 110 ಎಕರೆ ಜಮೀನು ಬರೆದುಕೊಟ್ಟಿದ್ದೇನೆ, ಹೆಚ್‌ಡಿ ಕುಮಾರಸ್ವಾಮಿಯಾಗಲೀ ಅಥವಾ ಮಂಜುನಾಥ್ ಆಗಲಿ ಒಂದೇ ಒಂದು ಸೈಟ್ ಆದರೂ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದರು. ಜನ ನನ್ನನ್ನು ಶಾಸಕ, ಸಚಿವ ಮತ್ತು ಉಪ ಮುಖ್ಯಮಂತ್ರಿಯಾಗಿ ಮಾಡಿದ್ದಾರೆ. ಬೇರೆ ಅಭ್ಯರ್ಥಿಗೆ ಮತ ಹಾಕಿದವರೂ ಯೋಚನೆ ಮಾಡಬೇಕು, ನಿಮ್ಮ ಬೈಕ್ ತಗೊಂಡು ಮದ್ದೂರು, ಮಳವಳ್ಳಿಗೆ ಹೋಗಿ ನೋಡಲಿ, ಚನ್ನಪಟ್ಟಣಕ್ಕೆ ಹೋದರೆ ಮೂಗು ಮುಚ್ಚಿಕೊಂಡು ಹೋಗಬೇಕಿತ್ತು ಎಂದರು.
ಕನಕಪುರ ಭಾಗದಲ್ಲಿ ಕಾಡಾನೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕನಕಪುರ ತಾಲೂಕಿನ ಕಾಡಂಚಿನ ಹಳ್ಳಿಗಳಲ್ಲಿ ಆನೆಗಳು ಪ್ರತಿದಿನ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೋಡಿಹಳ್ಳಿಯಲ್ಲಿರುವ ನಮ್ಮ ಮನೆ ಬಳಿ ಕೂಡ ಆನೆಗಳು ಓಡಾಡುವ ವಿಡಿಯೋ ನೋಡಿದ್ದೇನೆ. ಚನ್ನಪಟ್ಟಣ ಭಾಗದಲ್ಲಿ ಕೂಡ ಕಾಡಾನೆ ಹಾವಳಿ ಹೆಚ್ಚಾಗಿದ್ದು ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅರಣ್ಯ ಸಚಿವರ ಜೊತೆ ಚರ್ಚಿಸುತ್ತೇನೆ. ರೈಲು ಕಂಬಿಗಳ ತಡೆಗೋಡೆ ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.












Click it and Unblock the Notifications