ಬೆಂಗಳೂರಿನ ಪ್ರಮುಖ ಯೋಜನೆ ಬಗ್ಗೆ ಡಿಕೆಶಿ ಅಪ್ಡೇಟ್ಸ್: 2 ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ
ಬೆಂಗಳೂರು: ಬೆಂಗಳೂರಿನ ಪ್ರಮುಖ ಮತ್ತು ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದು, ಹೊಸ ಯೋಜನೆಯಿಂದ ಬೆಂಗಳೂರಿನ ಈ ಎರಡು ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಇದರ ವಿವರ ಈ ಲೇಖನದಲ್ಲಿದೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಪರ್ಟಿಗ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್ ಕೊಡುತ್ತಿದ್ದಾರೆ.

ಬೆಂಗಳೂರಿನ ಸಮೀಪ ಪ್ರದೇಶಗಳನ್ನು ಹೊಸ ಬೆಂಗಳೂರು ಎಂದು ಘೋಷಿಸಿರುವುದು, ಉಪ ನಗರಗಳ ಯೋಜನೆ, ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದು. ಇದರಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುತ್ತಿದೆ. ಇದೀಗ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಪೂರಕವಾಗಿ ಘೋಷಿಸಿರುವ ಯೋಜನೆಯ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.
ಏನಿದು ಸ್ಕೈಡೆಕ್ ಯೋಜನೆ
ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಸ್ಕೈಡೆಕ್ ಯೋಜನೆಯ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ. ಸ್ಕೈಡೆಕ್ (Skydeck) ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಮುಖ ಪ್ರವಾಸೋದ್ಯಮ ಯೋಜನೆಗಳಲ್ಲಿ ಒಂದಾಗಿದೆ. ಇದು ದಕ್ಷಿಣ ಏಷ್ಯಾದಲ್ಲೇ ಅತಿ ಎತ್ತರದ 250 ಮೀಟರ್ ಎತ್ತರದ ಗೋಪುರವಾಗಿರಲಿದೆ. ಅಲ್ಲದೇ ನಗರದ 360 ಡಿಗ್ರಿ ವೀಕ್ಷಣೆಗೆ ಪೂರಕವಾಗಿ ಈ ಗೋಪುರ ನಿರ್ಮಾಣವಾಗಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ಗುರುವಾರ (ಜನವರಿ 1) ಸ್ಥಳ ಪರಿಶೀಲನೆ ಮಾಡಿದ್ದು, ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ.
ಈ ಯೋಜನೆಯನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಿರ್ವಹಿಸಲಿದೆ. ಅಲ್ಲದೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಒಳಗೊಂಡಿದೆ. ಈ ಯೋಜನೆಗೆ ಅಂದಾಜು 350 ಕೋಟಿ ರೂಪಾಯಿಯಿಂದ 500 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ. ಮೊದಲಿಗೆ ಈ ಯೋಜನೆಗೆ ನೈಸ್ ರಸ್ತೆ ಬಳಿಯ ಹೆಮ್ಮಿಗೆಪುರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದರೊಂದಿಗೆ ಮೆಟ್ರೋ ಸಂಪರ್ಕವೂ ಇರಲಿದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ ಇದೀಗ ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿದೆ.
ಸ್ಕೈಡೆಕ್ ನಿರ್ಮಾಣಕ್ಕೆ ಈ ಎರಡು ಪ್ರದೇಶ ಪರಿಶೀಲನೆ
ಇನ್ನು ಬೆಂಗಳೂರಿನ ಸ್ಕೈಡೆಕ್ ನಿರ್ಮಾಣಕ್ಕೆ ಎರಡು ಸ್ಥಳಗಳನ್ನು ಪರಿಶೀಲನೆ ಮಾಡುತ್ತಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬೆಂಗಳೂರಿನ ಚಲ್ಲಘಟ್ಟ ಹಾಗೂ ಭೀಮನಕುಪ್ಪೆಯ ಕೆಂಪೇಗೌಡ ಬಡಾವಣೆ ಸಮೀಪ ಸ್ಕೈಡೆಕ್ ನಿರ್ಮಾಣದ ಸ್ಥಳ ಪರಿಶೀಲನೆ ಹಾಗೂ ರಸ್ತೆ ಕಾಮಗಾರಿ ಪರಿಶೀಲನೆ ಮಾಡಲಾಗಿದೆ.
ಬಿಡಿಎ ಅಧ್ಯಕ್ಷರಾದ ಎನ್.ಎ ಹ್ಯಾರಿಸ್ ಅವರೊಂದಿಗೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಬೆಂಗಳೂರು ಸ್ಕೈಡೆಕ್ ನಗರದ ಪ್ರಮುಖ ಆಕರ್ಷಣೆ ಆಗಲಿದ್ದು, ಬೆಂಗಳೂರಿನ ವಿಹಂಗಮ ನೋಟವನ್ನು ನೀಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದೂ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ, ಬೆಂಗಳೂರಿನ ಈ ಎರಡು ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಇನ್ನು ನೈಸ್ ಸಂಸ್ಥೆಯ ಕೆಲವು ಕೆಐಎಡಿಬಿ ಜಾಗವನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಇದಕ್ಕೆ ಅವರು ತಕರಾರು ತೆಗೆದಿದ್ದಾರೆ. ಹೀಗಾಗಿ ಸ್ಕೈಡೆಕ್ ನಿರ್ಮಾಣಕ್ಕೆ ನಾವು ಬೇರೆ ಕಡೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗವನ್ನು ಗುರುತಿಸಿದ್ದೇವೆ. ವಿಮಾನ ಹಾರಾಟದ ಟವರ್ ಸಮಸ್ಯೆ ಸಹ ಇರುವುದರಿಂದಾಗಿ , ಇದನ್ನು ಸೂಕ್ತ ಜಾಗದಲ್ಲಿ ನಿರ್ಮಿಸಲಿದ್ದೇವೆ ಎಂದಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಅಪ್ಡೇಟ್ಸ್‌ನಿಂದಾಗಿ ಬೆಂಗಳೂರಿನ ಈ ಪ್ರದೇಶದಲ್ಲಿ ಭೂಮಿ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಮೂಡಿದೆ.












Click it and Unblock the Notifications