ಡಿ. ಜೆ. ಹಳ್ಳಿ ಗಲಭೆ; ಪ್ರಮುಖ ಆರೋಪಿ ಬಂಧಿಸಿದ ಸಿಸಿಬಿ
ಬೆಂಗಳೂರು, ಸೆಪ್ಟೆಂಬರ್ 11 : ಬೆಂಗಳೂರಿನ ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಪ್ರಮುಖ ಆರೋಪಿ ಮುಜಾಹಿದ್ ಬಂಧಿಸಿದ್ದಾರೆ.
ಆಗಸ್ಟ್ 11ರಂದು ರಾತ್ರಿ ಗಲಭೆ ನಡೆದ ಬಳಿಕ ಆರೋಪಿ ಮುಜಾಹಿದ್ ತಲೆಮರೆಸಿಕೊಂಡಿದ್ದ. ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆದಿತ್ತು, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಗಲಭೆ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದಾಗ ಮೂವರು ಮೃತಪಟ್ಟಿದ್ದರು.

ಠಾಣೆ ಬಳಿ ಜನರನ್ನು ಕರೆತಂದಿದ್ದ
ಡಿ. ಜೆ. ಹಳ್ಳಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದ ಮುಜಾಹಿದ್ ಗಲಭೆ ನಡೆದ ದಿನ ಡಿ. ಜೆ. ಹಳ್ಳಿ ಠಾಣೆ ಮುಂದೆ ನೂರಾರು ಜನರನ್ನು ಕರೆತಂದಿದ್ದ. ಅಲ್ಲಿಂದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಬಳಿಗೆ ಜನರನ್ನು ಕರೆದುಕೊಂಡು ಹೋಗಿದ್ದು ಈತನೇ ಎಂಬ ಆರೋಪವಿದೆ.

ಪರಾರಿಯಾಗಿದ್ದ ಆರೋಪಿ
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಡಲು ಪ್ರಚೋದನೆ ನೀಡಿದ್ದ ಈತ ಗಲಭೆ ಬಳಿಕ ಪರಾರಿಯಾಗಿದ್ದ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಿಸಿಬಿ ಪೊಲೀಸರು ಗುರುವಾರ ಮುಜಾಹಿದ್ ಬಂಧಿಸಿದ್ದಾರೆ. ಗಲಭೆ ಹಿಂದೆ ಈತನ ಪಾತ್ರ ಇರುವ ಕುರಿತು ಶಾಸಕರು ಸಹ ಶಂಕೆ ವ್ಯಕ್ತಪಡಿಸಿದ್ದರು.

ಡ್ರಗ್ಸ್ ಪ್ರಕರಣದಲ್ಲಿ ಬ್ಯುಸಿ
ಗಲಭೆ ಬಳಿಕ ಪರಾರಿಯಾಗಿದ್ದ ಮುಜಾಹಿತ್ ಕೋಲಾರ, ಮುಳಬಾಗಿಲು, ರಾಮನಗರ ಸೇರಿದಂತೆ ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಂಬಂಧಿಕರ ಮನೆಯಲ್ಲಿದ್ದ. ಈಗ ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬೆಂಗಳೂರಿಗೆ ಆಗಮಿಸಿದ್ದ. ಚಾಮರಾಜಪೇಟೆಯ ಸಂಬಂಧಿಕರ ಮನೆಯಲ್ಲಿ ಆರೋಪಿ ಬಂಧಿಸಲಾಗಿದೆ.
Recommended Video

ರಾಜಕೀಯ ಆರೋಪಕ್ಕೆ ಕಾರಣವಾಗಿದ್ದ ಗಲಭೆ
ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಗಲಭೆಗೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications