ದೇವನಹಳ್ಳಿ ಬಳಿ 13 ಬಡಾವಣೆಗಳು ಅಕ್ರಮ, ಹುಷಾರು
ಬೆಂಗಳೂರು, ಜೂನ್ 12: ದೇವನಹಳ್ಳಿ ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾಗಿದ್ದೇ ಪಾಳುಬಿದ್ದ, ಬರದ ನಾಡು ದೇವನಹಳ್ಳಿ ದಿನಬೆಳಗಾಗುವುದರೊಳಗಾಗಿ ಜೀವಕಳೆಯಿಂದ ಚಿಗಿತುಕೊಂಡಿತು.
ರಾಕೆಟ್ ವೇಗದಲ್ಲಿ ಇಲ್ಲಿನ ಭೂಮಿಯ ಬೆಲೆ ಗಗನದಲ್ಲಿ ತೇಲಾಡತೊಡಗಿತು. ರಿಯಲ್ ಎಸ್ಟೇಟ್ ಏಜೆಂಟುಗಳು ಇಲ್ಲಿ ಕಾಲಿಡುತ್ತಿದ್ದಂತೆ ದೇವನಹಳ್ಳಿ ಸುತ್ತಮುತ್ತಲದ ನೆಲ ಅಕ್ರಮಗಳ ಆಗರವಾಗಿಬಿಟ್ಟಿತು. ನೆಲದ ಕಾನೂನು ಹಳ್ಳ ಹಿಡಿಯಿತು. ದೌರ್ಭಾಗ್ಯವೆಂದರೆ ಅದು ಇಂದಿಗೂ ನಿಂತಿಲ್ಲ. ಬದಲಿಗೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಆದರೆ ಕಾನೂನು ಸ್ವಲ್ಪ ಮಟ್ಟಿಗೆ ಕಠಿಣವಾಗುತ್ತಿದೆ.
ಭೂಮಿಯೇ ಇಲ್ಲದಿದ್ದರೂ ಅಂಗೈಯಲ್ಲಿ ಆಕಾಶ ತೋರಿಸಿ ನಿವೇಶನಗಳನ್ನು ಮಾರಾಟ ಮಾಡುವ ಜಾಣರಿದ್ದಾರೆ. ಬೇರೆ ಯಾರದೋ ನಿವೇಶನಕ್ಕೆ ಕಾಗದ ಪತ್ರ ಮಾಡಿಸಿಕೊಂಡು ನಿವೇಶನ ಮಾರಾಟ ಮಾಡಿಕೊಂಡು ಸ್ಥಳದಿಂದ ಕಾಲ್ಕಿತ್ತವರೂ ಇದ್ದಾರೆ.

ಆದರೆ ಇದೀಗ ಅಕ್ರಮಗಳಿಗೆ ಒಂದಷ್ಟು ಕಡಿವಾಣ ಬೀಳುತ್ತಿದೆ. ದೇವನಹಳ್ಳಿ ತಹಸೀಲ್ದಾರ್ ಕೇಶವಮೂರ್ತಿ ಅವರು ಒಂದೇ ಏಟಿಗೆ 17 ಎಕರೆ ಸುವಿಶಾಲ ಪ್ರದೇಶದಲ್ಲಿ ತಲೆಯೆತ್ತಿದ್ದ 13 ಅಕ್ರಮ ಬಡಾವಣೆಯಗಳನ್ನು ತೆರವುಗೊಳಿಸಿದ್ದಾರೆ. ಇದರಲ್ಲಿ ನಿಮ್ಮ ನಿವೇಶನವೂ ಇದೆಯಾ? ಯಾವುದಕ್ಕೇ ಆಗಲಿ ಒಮ್ಮೆ ಚೆಕ್ ಮಾಡಿನೋಡಿ.
ನಿಮ್ಮ ಸೈಟಿನ ಸಾಚಾತನ ಖಚಿತಪಡಿಸಿಕೊಳ್ಳಲು ಒಮ್ಮೆ ಈ ಸೈಟಿಗೆ ಭೇಟಿ ಕೊಡಿ: BIAAPA website
ಖುದ್ದಾಗಿ ಭೇಟಿ ನೀಡಲು ಈ ವಿಳಾಸಕ್ಕೆ ಹೋಗಿಬನ್ನಿ: BIAAPA office, 333/1, 1st Floor, VJ Complex, Sulibele Road, Devanahalli Town, Bangalore Rural district.
ದೇವನಹಳ್ಳಿಯಿಂದ ಕಲ್ಲೆಸೆತದ ದೂರದಲ್ಲಿರುವ ಬೂದಿಗೆರೆ ಗ್ರಾಮದ ವ್ಯಾಪ್ತಿಯ ಬಾಗಲೂರು ರಸ್ತೆಯಲ್ಲಿ ಈ 13 ಬಡಾವಣೆಯಗಳು ಅಕ್ರಮವಾಗಿ ನಿರ್ಮಾಣಗೊಂಡಿದ್ದವು. ಇದನ್ನೆಲ್ಲಾ ತೆರವುಗೊಳಿಸಬೇಕು ಎಂದು ತಾಲೂಕು ಕರ್ನಾಟಕ ಹಿತರಕ್ಷಣಾ ವೇದಿಕೆ ಮನವಿ ಮಾಡಿತ್ತು.
ಈ ಸಂಬಂಧ ದೇವನಹಳ್ಳಿ ತಹಸೀಲ್ದಾರ್ ಕೇಶ್ವಮೂರ್ತಿ ಅವರು ಸಂಬಂಧಪಟ್ಟ ಬಡಾವಣೆಗಳ ಮಾಲೀಕರಿಗೆ ನೋಟಿಸ್ ನೀಡಿ, ಇದೆಲ್ಲಾ ಅಕ್ರಮ ನಿವೇಶನಗಳು. ಸೂಕ್ತ ದಾಖಲೆಪತ್ರಗಳಿದ್ದರೆ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದು ಸೂಚಿಸಿದ್ದರು. ಆದರೆ ಯಾರೊಬ್ಬರಿಂದಲೂ ಯಾವುದೇ ಬಂದಿರಲಿಲ್ಲ. ಹಾಗಾಗಿ ಹದಿಮೂರೂ ಬಡಾವಣೆಗಳನ್ನು ತೆರವುಗೊಳಿಸಿದ್ದಾರೆ. ಇಂಥವು ಇನ್ನೂ ಎಷ್ಟಿವೆಯೋ? ಹುಷಾರು ಇಲ್ಲೇ ಅಂತಲ್ಲ ಎಲ್ಲಿಯೇ ಆಗಲಿ ನಿವೇಶನ ಖರೀದಿಸುವ ಮುನ್ನ ನೂರೆಂಟು ಬಾರಿ ಪರೀಕ್ಷಿಸಿಕೊಳ್ಳಿ.












Click it and Unblock the Notifications