ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳನ್ನು ವಿಸ್ತರಿಸಿ, ಆರ್ಥಿಕತೆ ಬೆಂಬಲಿಸಿ: ಡಿಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ.27: ಬೆಳೆಯುತ್ತಿರುವ ಗ್ರಾಮೀಣ ಆರ್ಥಿಕತೆಯನ್ನು ಬೆಂಬಲಿಸಲು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಬ್ಯಾಂಕ್‌ಗಳಿಗೆ ಕರೆ ನೀಡಿದ್ದಾರೆ.
ಆಕ್ಸಿಸ್ ಬ್ಯಾಂಕ್‌ನ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, "ಕರ್ನಾಟಕವು ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಕೊಡುಗೆಯನ್ನು ಹೊಂದಿರುವ ರಾಜ್ಯವಾಗಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳೂ ಬೆಳೆಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಶಾಖೆಗಳನ್ನು ತೆರೆಯಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಬ್ಯಾಂಕುಗಳು ಗಮನಹರಿಸಬೇಕು" ಎಂದಿದ್ದಾರೆ.

''ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಪೈಪೋಟಿ ಕಂಡು ಖುಷಿಯಾಗಿದೆ. ಬ್ಯಾಂಕ್ ರಾಷ್ಟ್ರೀಕರಣದಿಂದ ಜನರಿಗೆ ಬ್ಯಾಂಕಿಂಗ್ ಸುಲಭವಾಗಿದೆ. ಇಂದು ಬ್ಯಾಂಕುಗಳು ಜನರ ಮನೆ ಬಾಗಿಲಿಗೆ ಹೋಗುತ್ತಿವೆ. ಆಕ್ಸಿಸ್ ಬ್ಯಾಂಕ್ ಕರ್ನಾಟಕದಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿದೆ. ಇದು ನಮ್ಮ ರಾಜ್ಯಕ್ಕೆ ಆಕ್ಸಿಸ್ ಬ್ಯಾಂಕ್ ಕೊಡುತ್ತಿರುವ ಒತ್ತು ತೋರಿಸುತ್ತದೆ. ಕರ್ನಾಟಕ ಬಹುದೂರ ಸಾಗಿದೆ. ಇಂದು ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ" ಎಂದು ಹೇಳಿದ್ದಾರೆ.
ಇದೇ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಬಳಸಿಕೊಂಡು ರಾಜ್ಯದ ಸಾರ್ವಜನಿಕ ಶಾಲೆಗಳನ್ನು ಅಭಿವೃದ್ಧಿಪಡಿಸುವ ಸರ್ಕಾರದ ಯೋಜನೆಗಳನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದಾರೆ.
ರಾಜ್ಯದಲ್ಲಿ ಸಿಆರ್‌ಎಸ್ ನಿಧಿ ಬಳಸಿಕೊಂಡು ಅಂತಹ 2000 ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಈ ಯೋಜನೆಯಲ್ಲಿ ಬ್ಯಾಂಕ್‌ಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಹೂಡಿಕೆ ಮಾಡಬೇಕು ಎಂದು ಇದೇ ವೇಳೆ ಡಿಕೆ ಶಿವಕುಮಾರ್ ಹೇಳಿದ್ದಾರೆ.

"ನಮ್ಮ ಸರ್ಕಾರವು ಉದ್ಯಮಶೀಲತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ. ಸಾಧ್ಯವಾದಷ್ಟು ಜನರನ್ನು ಬೆಂಬಲಿಸುವ ಮೂಲಕ ನಮ್ಮ ಗುರಿಯನ್ನು ಬೆಂಬಲಿಸಲು ಬ್ಯಾಂಕ್‌ಗಳನ್ನು ನಾನು ಒತ್ತಾಯಿಸುತ್ತೇನೆ" ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 21 ಹೊಸ ಶಾಖೆ ತೆರೆದ ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್ ರಾಜ್ಯದಲ್ಲಿ 21 ಹೊಸ ಶಾಖೆಗಳನ್ನು ತೆರೆದಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಐಟಿ, ಬಿಟಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗಿದೆ.
ಬೆಂಗಳೂರು, ಉಡುಪಿ, ವಿಜಯಪುರ, ಹಾವೇರಿ, ಹಾಸನ, ಕೊಪ್ಪಳ, ತುಮಕೂರು, ಶಿವಮೊಗ್ಗ ಮತ್ತು ವಿಜಯನಗರ, ನಗರ ಕೇಂದ್ರಗಳು, ಅರೆ ನಗರ ಪ್ರದೇಶಗಳು, ಗ್ರಾಮೀಣ ಪ್ರದೇಶಗಳು, ಬ್ಯಾಂಕಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಆಕ್ಸಿಸ್ ಬ್ಯಾಂಕ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.












Click it and Unblock the Notifications