KPSC ಸಂಸ್ಥೆ ರದ್ದುಗೊಳಿಸಲು ಒತ್ತಾಯ: ಪರೀಕ್ಷಾರ್ಥಿಗಳ ಹಾಲ್ ಟಿಕೆಟ್ ವಾಪಸ್, ವ್ಯಾಪಕ ಆಕ್ರೋಶ
ಬೆಂಗಳೂರು, ನವೆಂಬರ್ 27: ಕರ್ನಾಟಕ ಲೋಕಸೇವಾ ಆಯೋಗದಿಂದ (KPSC) ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಇತ್ತೀಚೆಗೆ ಕೆಪಿಎಸ್‌ಸಿಯಿಂದ ಮರು ಪರೀಕ್ಷೆ ನಡೆಸುವಂತೆ ನಿರ್ದೇಶಿಸಲಾಗಿತ್ತು. ಅದರಂತೆ ಪರೀಕ್ಷೆಗೆ ದಿನಾಂಕ ಮಾಡಿದ್ದ ಸರ್ಕಾರವು, ಅಭ್ಯರ್ಥಿಗಳು ಹಾಲ್‌ಟಿಕೆಟ್ ಬಿಟ್ಟು ಮತ್ತು ವಾಪಾಸ್ ಡಿಲೀಟ್ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC)ದ ವಿರುದ್ಧ ಹಾಗೂ ಸರ್ಕಾರ ಹಾಲ್‌ಟೆಕೆಟ್ ವಾಪಾಸ್ ಪಡೆದ ನಡೆಯನ್ನು ಆಮ್ ಆದ್ಮಿ ಪಕ್ಷವು (ಎಎಪಿ) ತೀವ್ರವಾಗಿ ಖಂಡಿಸಿದೆ. ಉದ್ಯೋಗಿಗಳಿಗೆ, ಶ್ರಮಪಟ್ಟು ಓದುವ, ಉಜ್ವಲ ಭವಿಷ್ಯದ ಕನಸು ಕಂಡು ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವ ಉದ್ಯೋಗಾಕಾಂಕ್ಷಿಗಳಿಗೆ ಕೆಪಿಎಸ್‌ಸಿ ಎಂಸ್ಥೆಯಿಂದ ಅನ್ಯಾಯವಾಗುತ್ತಿದೆ ಎಂದು ಎಎಪಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಕೆ ಹನುಮಾಪುರ ಆರೋಪಿಸಿದ್ದಾರೆ.

ಬುಧವಾರ ಬೆಂಗಳೂರಿನ ಎಎಪಿ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಮಾಡುವ ಈ ಕೆಪಿಎಸ್‌ಸಿ ಸಂಸ್ಥೆಯನ್ನು ರದ್ದುಗೊಳಿಸಬೇಕೆಂದು ಅವರು ಒತ್ತಾಯ ಮಾಡಿದರು.
ಡಿಸೆಂಬರ್ 29 ರಂದು ಮರುಪರೀಕ್ಷೆ, ಕಾನೂನು ಸಚಿವರೇ...
ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಕನ್ನಡ-ಇಂಗ್ಲಿಷ್ ಭಾಷಾಂತರದಲ್ಲಿ ಪ್ರಶ್ನೆಗಳೇ ತಪ್ಪಾಗಿದ್ದವು. ಇದನ್ನು ವಿರೋಧಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ ಬಳಿಕ ನಡೆದಿದ್ದ ಪರೀಕ್ಷೆಯನ್ನು ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಹೇಳಿತ್ತು.
ಡಿಸೆಂಬರ್ 29 ರಂದು ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಿತ್ತು. ಹೊಸದಾಗಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಲ್ ಟಿಕೆಟ್ ಡೌನ್ ಲೋಡ್ ಮಾಡಲು ಹೋದಾಗ ಹಾಲ್ ಟಿಕೆಟ್ ಮತ್ತು ನೋಟಿಫಿಕೇಷನ್ ಅನ್ನು ಕೆಪಿಎಸ್ಸಿ ಡಿಲೀಟ್ ಮಾಡಿರುವುದು ಗಮನಕ್ಕೆ ಬಂದಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ವಿದ್ಯಾರ್ಥಿನಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗಾಗಲೇ ಬರೆಸಿರುವ ಪರೀಕ್ಷೆಯನ್ನೇ ಮಾನ್ಯ ಮಾಡಲಿ, ಹೊಸದಾಗಿ ಪರೀಕ್ಷೆ ಬರೆಸುವುದು ಬೇಡ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಹೈಕೋರ್ಟ್ ಸ್ಟೇ ನೀಡಿದೆ. ಈ ವಿಚಾರವಾಗಿ ಮುಂದಿನ ತಿಂಗಳು 9ನೇ ತಾರೀಕು ಮತ್ತೆ ವಿಚಾರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಇಷ್ಟೆಲ್ಲಾ ಪ್ರಕ್ರಿಯೆಗಳು ಆಗಿದ್ದರೂ ಕೂಡ, ಕಾನೂನು ಸಚಿವ ಎಚ್ ಕೆ ಪಾಟೀಲ್ ಅಥವಾ ಸರ್ಕಾರ ತಮ್ಮ ಜವಾಬ್ದಾರಿಯನ್ನು ಮರೆತಿರುವಂತಿದೆ. ಡಿಸೆಂಬರ್ 29ರಂದು ಪರೀಕ್ಷೆ ನಿಗದಿಯಾಗಿದ್ದರೂ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಯಾವುದೇ ಕ್ರಮಗಳನ್ನು ಕೈಗೊಳ್ಳದೆಯೇ ಹಾಲ್ ಟಿಕೆಟ್ ರದ್ದು ಮಾಡುವ ಮೂಲಕ ಪರಿಕ್ಷಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದ್ದಾರೆ. ಇದರಿಂದ ಲಕ್ಷಾಂತರ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅವರು ಕಿಡಿ ಕಾರಿದರು.
ಸೂಕ್ತ ಮಾಹಿತಿ ಕೊಡದಿದ್ದರೆ, ಉಗ್ರ ಹೋರಾಟದ ಎಚ್ಚರಿಕೆ
ಇದೀಗ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಕುರಿತು ಗೊಂದಲಗಳು ಮೂಡಿವೆ. ಡಿಸೆಂಬರ್ 29ರಂದು ನಡೆಯಲಿರುವ ಪರೀಕ್ಷೆ ಬಗ್ಗೆ ಪರೀಕ್ಷಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿ. ಇಲ್ಲವಾದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಯುವ ಘಟಕವು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ಆಮ್ ಆದ್ಮಿ ಪಾರ್ಟಿ ಯಶವಂತಪುರ ಯುವ ಘಟಕದ ಅಧ್ಯಕ್ಷ ಜನಾರ್ಧನ್ ಮಾತನಾಡಿ, ಕೆಪಿಎಸ್‌ಸಿ ಪರೀಕ್ಷೆಗಳಿಂದ ವಂಚಿತರಾದವರಲ್ಲಿ ನಾನೂ ಒಬ್ಬನಾಗಿದ್ದೇನೆ. ಕೆಪಿಎಸ್‌ಸಿ ಮತ್ತು ಸರ್ಕಾರದ ಗೊಂದಲಗಳಿಂದಾಗಿ ಹಲವರು ಅವಕಾಶಗಳಿಂದ ವಂಚಿತರಾಗುತ್ತಾರೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.












Click it and Unblock the Notifications