ದೆಹಲಿಯಂತೆ ಕರ್ನಾಟಕದಲ್ಲೂ 0% ಸರ್ಕಾರ ತನ್ನಿ ಕೇಜ್ರಿವಾಲ್ ಕರೆ
ಬೆಂಗಳೂರು ಏಪ್ರಿಲ್ 21: 'ಕರ್ನಾಟಕದಲ್ಲಿ 40% ಸರ್ಕಾರವಿದೆ ಆದರೆ ದೆಹಲಿಯಲ್ಲಿ 0% ಸರ್ಕಾರ ಇದೆ. ಹೀಗಾಗಿ ಕರ್ನಾಟಕದಲ್ಲೂ ಆಪ್ ಪಕ್ಷ ಅಧಿಕಾರಕ್ಕೆ ಬರಬೇಕು' ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದರು. ಇಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಮಾವೇಶದಲ್ಲಿ ಆಪ್ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾತನಾಡಿ, ನನಗೆ ಕನ್ನಡ ಮಾತನಾಡಲು ಬರಲ್ಲ. ಕ್ಷಮೆ ಇರಲಿ ಹಿಂದಿಯಲ್ಲಿ ಮಾತನಾಡುತ್ತಿದ್ದೇನೆ. ಎರಡು ದಿನಗಳ ಹಿಂದೆ ಹಲ್ಲುನೋವು ಇತ್ತು. ಅದಕ್ಕೆ ಆಪರೇಷನ್ ಆಗಿದೆ. ಹಾಗಾಗಿ ಮಾತನಾಡಲು ಆಗಲ್ಲ ಅಂತ ಹೇಳಿದ್ದೆ. ಆದ್ರೆ ಸಾವಿರಾರು ಸಂಖ್ಯೆಯಲ್ಲಿ ರೈತರು ಬರುತ್ತಿದ್ದಾರೆ. ಹಾಗಾಗಿ ಬರಬೇಕು ಅಂದ್ರು, ರೈತರು ಬಂದ್ರೆ ನಾನು ಬರಲ್ಲ ಅಂತ ಹೇಳಲು ಆಗಲಿಲ್ಲ. ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಂಡು ಬಂದಿದ್ದೇನೆ ಎಂದು ಕೇಜ್ರಿವಾಲ್ ಹೇಳಿದರು.
ಕೇಂದ್ರ ಸರ್ಕಾರ ಮೂರು ಕಾಯ್ದೆ ತಂದಿತ್ತು. ಅಹಂಕಾರದಿಂದ ಕಾಯ್ದೆ ಜಾರಿ ಮಾಡಿತ್ತು. ಲಂಕಾಧಿಪತಿ ಅಹಂಕಾರ ಹೇಗೆ ಹೊಯ್ತೊ. ಹಾಗೆ ರೈತರ ಮೂಲಕ ಮೋದಿ ಅಹಂಕಾರ ಹೊಯ್ತು. ನಿಮ್ಮ ಹೋರಾಟದಿಂದ ಕಾಯ್ದೆ ವಾಪಸ್ಸು ಆಯ್ತು. ನಾನು ಕೂಡ ಹೋರಾಟ ಮೂಲಕ ಬಂದಿದ್ದೇನೆ. ನನಗೆ ಸವಾಲು ಹಾಕಿದ್ರು, ಭ್ರಷ್ಟಾಚಾರ ಕಡಿವಾಣ ಹಾಕಲು. ಚುನಾವಣೆಗೆ ನಿಲ್ಲಿ ಅಂದ್ರು, ನನಗೆ ಆ ಶಕ್ತಿ ಇಲ್ಲ ಅಂದೆ. ಆದರೂ ಸಾಮಾನ್ಯ ಜನರಾಗಿ ನಾವು ಚುನಾವಣೆ ಎದುರಿಸಿದ್ದೇವೆ. ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು. ಇಲ್ಲಿ 40% ಸರ್ಕಾರ ಇದೆ. ದೆಹಲಿಯಲ್ಲಿ 0% ಸರ್ಕಾರ ಇದೆ. ಇದನ್ನು ನಾನು ಹೇಳಿದ್ದಲ್ಲ, ಮೋದಿನೆ ಹೇಳಿದ್ದಾರೆ. ಸಿಬಿಐ ದಾಳಿ ಆಯ್ತು, ನನ್ನ ಮನೆಯಲ್ಲಿ ಏನು ಸಿಗಲಿಲ್ಲ. ಆಗ ಮೋದಿನೆ ಹೇಳಿದರು ನಾನು ಸಾಮಾನ್ಯ ಮನುಷ್ಯ ಅಂತ. ಆಮೇಲೆ ಸರ್ಕಾರದ ಮಂತ್ರಿ ಮೇಲೆ ದಾಳಿ ಆಯ್ತು. ಆದರೆ ಸಿಬಿಐ ಗೆ ಏನು ಸಿಗಲಿಲ್ಲ. ನಾನು ಸಾಮಾನ್ಯ ಮನುಷ್ಯ, ಹೆಂಡತಿ ಮಕ್ಕಳು ಇದ್ದಾರೆ. ಹಾಗಾಗಿ ಸಾಮಾನ್ಯ ಜನರ ಸಮಸ್ಯೆ ನನಗೆ ಗೊತ್ತು ಎಂದಿದ್ದಾರೆ.
ಯುಪಿಯಲ್ಲಿ ರೈತರ ಮೇಲೆ ವಾಹನ ಹತ್ತಿಸಲಾಯ್ತು. ಮಂತ್ರಿ ಮಗ ವಾಹನ ಹತ್ತಿಸಿದ್ದ ಅವನ ಬಂಧನ ಆಗಲಿಲ್ಲ. ಆದರೂ ಅವನ ತಂದೆ ಮಂತ್ರಿ ಮಾಡಲಾಯ್ತು. ಅತ್ಯಾಚಾರ ಮಾಡಿದವರು ಬಿಜೆಪಿ ಸೇರಿದ್ದಾರೆ. ಅವರಿಗೆ ಬಿಜೆಪಿ ಸ್ವಾಗತ ಮಾಡುತ್ತದೆ. ನನಗೆ ಬಹಳ ಸಂತೋಷ ಆಗಿದೆ. ಇವತ್ತಿನ ಸಭೆ ನೋಡಿ ಸಂತೋಷ ಆಗಿದೆ ಎಂದರು. ನನಗೆ ರಾಜಕೀಯ ಮಾಡಲು ಬರಲ್ಲ. ಕೆಲಸ ಮಾಡಲು ಮಾತ್ರ ಬರುತ್ತೆ. ರೈತರು ದೇಶ್ಯಾದ್ಯಂತ ಒಟ್ಟಾಗಬೇಕು. ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಬೇಕು. ಎಲ್ಲರೂ ಒಟ್ಟಾಗಿ ಹೋಗೋಣ ಅಂತ ಕೇಜ್ರಿವಾಲ್ ಕರೆ ನೀಡಿದ್ದಾರೆ.

ಇನ್ನೂ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸಲು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ರೈತರಿಗೆ ಕರೆಕೊಟ್ಟಿದ್ದಾರೆ. ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಿಸ್ಟರ್ ಬೊಮ್ಮಾಯಿಯವರೆ ನೀವು ಸಿಎಂ ಆಗಿ ಮುಂದುವರೆಯಲು ನೈತಿಕತೆ ಇದ್ಯಾ? 17 ಜನ ನಿಮ್ಮ ಕ್ಯಾಬಿನೆಟ್ ಮಿನಿಸ್ಟರ್ ಏನು ಮಾಡಿದ್ದಾರೆ ? 17 ಜನ ಕೋರ್ಟ್ ಅಲ್ಲಿ ಸ್ಟೇ ತೆಗೆದುಕೊಂಡಿದ್ದಾರೆ. ಎಲ್ಲಿ ತಮ್ಮ ಅಶ್ಲೀಲ ವಿಡಿಯೋ ಬಿಡುಗಡೆ ಆಗುತ್ತೆ ಎಂಬ ಭಯದಲ್ಲಿ ಇದ್ದಾರೆ. ಇಂತವರನ್ನು ಇಟ್ಟುಕೊಂಡು ಸರ್ಕಾರ ನಡೆಸಲು ನೈತಿಕತೆ ಇದ್ಯಾ? ಎಂದು ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿ ರಾಜ್ಯಗಳಲ್ಲಿ ಭ್ರಷ್ಟಾಚಾರ ಇಲ್ಲದ್ದನ್ನ ತೋರಿಸಿ. ಒಂದೇ ಒಂದು ರಾಜ್ಯದಲ್ಲೂ ಇಲ್ಲ ನೀವಿರುವ ಕಡೆ ಭ್ರಷ್ಟಾಚಾರವಿಲ್ಲ ಎಂದೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ರಾಜ್ಯಗಳಲ್ಲೂ ನಿಮ್ಮಷ್ಟು ಭ್ರಷ್ಟಾಚಾರ ಇಲ್ಲ. ಪ್ರಾದೇಶಿಕ ಪಾರ್ಟಿಗಳಲ್ಲೂ ಅಂತದ್ದು ಕಾಣಲಿಲ್ಲ. ಹಾಗಾಗಿ ದೇಶಕ್ಕೆ ಅರವಿಂದ ಮಾಡೆಲ್ ಆಗಿದ್ದಾರೆ. ಮೂರು ಪಕ್ಷಗಳಿಗೆ ಪರ್ಯಾಯ ಪಕ್ಷದ ಅಗತ್ಯವಿದೆ. ಹಾಗಾಗಿ ನಾವು ಆಪ್ ಪಕ್ಷವನ್ನ ಬೆಂಬಲಿಸಬೇಕಿದೆ ಎಂದಿದ್ದಾರೆ. 2023ರ ಚುನಾವಣೆಗೆ ಆಮ್ ಆದ್ಮಿ ಬೆಂಬಲಿಸೋಣ. ಈ ಮೂಲಕ ವಿಧಾನಸಭೆ ಪ್ರವೇಶ ಮಾಡೋಣ ಎಂದು ರೈತ ಪರಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ ರೈತರಿಗೆ ಕರೆಕೊಟ್ಟಿದ್ದಾರೆ.
ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರದ ಗದ್ದುಗೆಗೇರಿದ ಬಳಿಕ ಆಮ್ ಆದ್ಮಿ ಪಕ್ಷ ಕರ್ನಾಟಕದತ್ತ ದೃಷ್ಟಿ ನೆಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರಲು ಈಗಿನಿಂದಲೇ ರಣತಂತ್ರ ಶುರುವಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘದೊಂದಿಗೆ ಚುನಾವಣಾ ಪೂರ್ವ ಮೈತ್ರಿಗೆ ಎಎಪಿ ಮುಂದಾಗಿದೆ. ಹೀಗಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಕೈಗೊಂಡಿದೆ. ಸಮಾವೇಶಕ್ಕೆ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಬೇರೆ ಜಿಲ್ಲೆಗಳಿಂದ ರೈತರು ಬಸ್‌ಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.
ರೈತ ಸಮಾವೇಶದಲ್ಲಿ ಗಣ್ಯರು ಕುಳಿತುಕೊಳ್ಳುವ ವೇದಿಕೆ ಬಳಿ ತರಕಾರಿ, ಧವಸ ಧಾನ್ಯಗಳು ಗಮನಸೆಳೆಯುತ್ತಿವೆ. ರಾಗಿ, ಭತ್ತ, ಅವರೇಕಾಳು, ಗೋದಿ, ತೊಗರಿಕಾಳು, ಜೋಳ, ಅಲಸಿನ ಬೀಜ, ಹುರುಳಿ ಕಾಳು, ಕ್ಯಾರೆಟ್, ಬೀಟ್ ರೋಟ್, ಗೆಡ್ಡೆ ಕೋಸ್, ಬದನೆಕಾಯಿ ಹೀಘೆ ವಿವಿಧ ತರಕಾರಿಗಳನ್ನು ವೇದಿಕೆ ಮೇಲೆ ಇಡಲಾಗಿದೆ. ಇಲ್ಲಿ ರೈತ ಸಂಘ ಸ್ವತಂತ್ರ ಆಗಿರುತ್ತದೆ. ಆಪ್ ಸರ್ಕಾರ ಇಲ್ಲಿ ಸ್ಥಾಪಿಸಲು ರೈತ ಸಂಘದ ಎಲ್ರೂ ಹಗಲೂ ರಾತ್ರಿ ಶ್ರಮಿಸ್ತಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆ ಪರ್ಯಾಯ ಆಪ್ ಪಕ್ಷವಾಗಿದೆ ಎಂದರು.












Click it and Unblock the Notifications