ಅಕ್ರಮ ಪ್ರಶ್ನಿಸಿದ ಸಾಂಗ್ಲಿಯಾನಾ ಮಗಳ ಮೇಲೆ ದಾಳಿ
ಬೆಂಗಳೂರು, ಡಿ. 9: ಈಕೆ ತಂದೆಗೆ ತಕ್ಕ ಮಗಳು. ಆದರೆ, ತಂದೆಯಷ್ಟು ಕಾಠಿಣ್ಯತೆ ಹೊಂದಿರಲಿಲ್ಲ. ಅಕ್ರಮವನ್ನು ಪ್ರಶ್ನಿಸಬಲ್ಲ ಧೈರ್ಯಸ್ಥಳು. ಆದರೆ, ಎದುರು ಬಿದ್ದವರನ್ನು ಮಟ್ಟ ಹಾಕುವುದು ಸಾಧ್ಯವಾಗದೆ ಏಟು ತಿನ್ನಬೇಕಾಗಿ ಬಂತು.
ಅವರ ಹೆಸರು ರಾಚೆಲ್ (34). ಇಬ್ಬರು ಮಕ್ಕಳ ತಾಯಿ. ಖ್ಯಾತ ಪೊಲೀಸ್ ಅಧಿಕಾರಿ ಹಾಗೂ ಮಾಜಿ ಸಂಸದ ಸಾಂಗ್ಲಿಯಾನಾ ಮಗಳು. ತಂದೆಯಂತೆ ನಿಯಮ ಉಲ್ಲಂಘನೆಯನ್ನು ದಿಟ್ಟವಾಗಿ ಪ್ರಶ್ನಿಸಿದ್ದಕ್ಕಾಗಿ ರಾಚೆಲ್ ಮೇಲೆ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ್ದಾರೆ. [ಲಂಡನ್ನಿಗೆ ಕರೆಸಿಕೊಂಡು ಹಾಳ್ಮಾಡಿಬಿಟ್ಟರು]

ನಡೆದಿದ್ದೇನು?: ಆಡುಗೋಡಿ ಪೊಲೀಸ್ ಠಾಣೆ ಎದುರು ಇರುವ ಪ್ರತಿಷ್ಠಿತ ಸೂಪರ್ ಮಾರ್ಕೆಟ್‌ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಖರೀದಿಗಾಗಿ ಸರದಿ ಸಾಲಿನಲ್ಲಿ ರಾಚೆಲ್ ನಿಂತಿದ್ದರು. ಈ ಸಂದರ್ಭ ಓರ್ವ ವ್ಯಕ್ತಿ ಹಾಗೂ ಆತನ ಪತ್ನಿ ಸಾಲು ಬಿಟ್ಟು ಮುನ್ನುಗ್ಗಲು ಯತ್ನಿಸಿದರು. ಈ ಅಕ್ರಮವನ್ನು ಪ್ರಶ್ನಿಸುವ ಧೈರ್ಯವನ್ನು ಇನ್ಯಾರೂ ತೋರಲಿಲ್ಲ. ಆಗ ಸರದಿ ಬಿಟ್ಟು ಮುನ್ನುಗ್ಗದಂತೆ ಹೇಳಿದ, ರಾಚೆಲ್ ಸಾಲಿನ ಹಿಂದಿನಿಂದಲೇ ಬರುವಂತೆ ಆಗ್ರಹಿಸಿದರು.
ಆ ದಂಪತಿ ಶಿಸ್ತಿನ ಸೂಚನೆಯನ್ನು ಪಾಲಿಸುವ ಬದಲು ಉರ್ದು ಭಾಷೆಯಲ್ಲಿ ಬಯ್ಯತೊಡಗಿದರು. ರಾಚೆಲ್ ಅವರನ್ನು ಚೀನೀಯರೆಂದು ನಿಂದಿಸಿದ್ದಲ್ಲದೆ, ಬುದ್ಧಿ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ಇದನ್ನು ರಾಚೆಲ್ ವಿರೋಧಿಸಿದಾಗ ಬುರ್ಕಾ ಧರಿಸಿದ್ದ ಆ ಮಹಿಳೆ ಹಲ್ಲೆ ನಡೆಸಿದಳು. ರಾಚೆಲ್ ಅವರನ್ನು ಹಿಡಿದು ದೂಡಿ, ಬೆನ್ನಿನ ಮೇಲೆ ಗುದ್ದಿದಳು.
ಈ ಸಂದರ್ಭದಲ್ಲಿ ಸೂಪರ್ ಮಾರ್ಕೆಟ್ ಗ್ರಾಹಕರಿಂದ ತುಂಬಿತ್ತು. ಆದರೆ, ಉಳಿದವರೆಲ್ಲ ಇದನ್ನು ಪುಕ್ಕಟೆ ಮನೋರಂಜನೆ ಎಂಬಂತೆ ನೋಡಿದರಷ್ಟೇ. ಯಾರೂ ಸಹಾಯಕ್ಕೆ ಬರಲಿಲ್ಲ. ಸುಮಾರು 7ರಿಂದ 10 ನಿಮಿಷಗಳ ನಂತರವೇ ಶಾಪ್‌ನಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರು ಬಿಡಿಸಲು ಬಂದರು. [ಮೈಸೂರು ಪೊಲೀಸ್ ಅಧಿಕಾರಿ ಎಬ್ಬಿಸಿದ ಬಿರುಗಾಳಿ]
ತಕ್ಷಣ ರಾಚೆಲ್ ತಮ್ಮ ಪತಿಗೆ ಫೋನಾಯಿಸಿ ವಿಷಯ ತಿಳಿಸಿದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಮಹಿಳೆಯ ಬೆಂಬಲಕ್ಕೆ ನಿಂತ ಮತ್ತೋರ್ವ ಮಹಿಳೆ, ಜಗಳ ಆರಂಭಿಸಿದ್ದೇ ರಾಚೆಲ್ ಎಂದು ಜಗಳ ತೆಗೆದಳು. ಅಲ್ಲದೆ, ನಿಂದಿಸಲು, ಒದೆಯಲು, ಗುದ್ದಲು ಆರಂಭಿಸಿದಳು. ಆಗ ಮೊದಲ ಮಹಿಳೆ ಕೂಡ ಜೊತೆ ಸೇರಿ ಹಲ್ಲೆ ನಡೆಸಿದಳು.
ಆಗ ಶಾಪ್‌ನಲ್ಲಿದ್ದ ಮೂವರು ನಾಗಾಲ್ಯಾಂಡ್‌ನ ಯುವತಿಯರು ಹಾಗೂ ಇತರ ಇಬ್ಬರು ರಕ್ಷಣೆಗೆ ಬಂದರು. ರಾಚೆಲ್ ಪತಿ ಬರುವವರೆಗೂ ರಕ್ಷಣೆ ಒದಗಿಸಿದರು. ಅಷ್ಟರಲ್ಲಿ ಪೊಲೀಸರೂ ಬಂದರು. ಆದರೆ, ದಾಳಿ ನಡೆಸಿದ್ದ ಮಹಿಳೆಯರು ಕಾಲ್ಕಿತ್ತಿದ್ದರು.
ಅವರು ಬುರ್ಕಾ ಧರಿಸಿದ್ದ ಕಾರಣ ಸಿಸಿಟಿವಿಯಲ್ಲಿ ಕೂಡ ಅವರ ಮುಖ ಕಂಡುಬರಲಿಲ್ಲ. ಪೊಲೀಸರು ಆರೋಪಿ ಮಹಿಳೆಯರ ಫೋಟೋ ಪ್ರಿಂಟ್ ತೆಗೆದುಕೊಂಡಿದ್ದಾರೆ. ಸೂಪರ್ ಮಾರ್ಕೆಟ್‌ನಲ್ಲಿದ್ದ ಇತರರನ್ನು ವಿಚಾರಿಸಿದ್ದು, ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications