Vijayalakshmi: ಪತಿ ದರ್ಶನ್ ಇಲ್ಲದೇ ವಿಜಯಲಕ್ಷ್ಮೀ ಭೀಮನ ಅಮಾವಾಸ್ಯೆ ಮಾಡಿದ್ದೇಗೆ?
ಬೆಂಗಳೂರು, ಆಗಸ್ಟ್ 06: ಕೊಲೆ ಪ್ರಕರಣದ ಆರೋಪದ ಮೇಲೆ ಸುಮಾರು 55 ದಿನಗಳಿಂದ ನಟ ದರ್ಶನ್ ಜೈಲಿನಲ್ಲಿದ್ದಾರೆ. ಅವರ ಮನೆ ಊಟದ ಅರ್ಜಿ ಪುರಸ್ಕೃತಗೊಂಡಿಲ್ಲ. ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪತಿಗಾಗಿ, ಪತಿಯ ಬಿಡುಗಡೆಗಾಗಿ ಟೆಂಪಲ್ ರನ್ ಮುಂದುವರೆಸಿದ್ದಾರೆ.
ದರ್ಶನ್‌ಗೆ ಜಾಮೀನು ಕೊಡಿಸಿ ಜೈಲಿನಿಂದ ಬಿಡುಗಡೆ ಮಾಡಲು ವಕೀಲರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಪತ್ನಿ ವಿಜಯಲಕ್ಷ್ಮೀ ಅವರು, ಇದೀಗ ಸಾಲು ಸಾಲು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವಾರವಷ್ಟೇ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿ ಪತಿ ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ಮಾಡಿದ್ದರು. ದರ್ಶನ್ ಒಳಿತಿಗೆ ದೇವರದಲ್ಲಿ ಪ್ರಾರ್ಥಿಸಿದ್ದರು.

ಇನ್ನೂ ಭಾನುವಾರ ಭೀಮನ ಅಮಾವಾಸ್ಯೆ ಇತ್ತು. ಈ ದಿನ ಪತ್ನಿಯಾದವರು ತಮ್ಮ ಪತಿಯ ಪಾದ ಪೂಜೆ ಮಾಡಿ, ಆಶೀರ್ವಾದ ಪಡೆಯುವುದು ಈ ಅಮಾವಾಸ್ಯೆಯ ಆಚರಣಾ ಪದ್ಧತಿಯಾಗಿದೆ. ಆದರೆ ಈ ವರ್ಷ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಈ ಭಾಗ್ಯ ಇಲ್ಲದಾಗಿದೆ.
ಬನಶಂಕರಿ ದೇವಾಲಯದಲ್ಲಿ ದರ್ಶನ್ ಹೆಸರಿನಲ್ಲಿ ಪತ್ನಿ ಪೂಜೆ
ಹೀಗಾಗಿಯೇ ಅವರು ಭೀಮನ ಅಮಾವಾಸ್ಯೆ ದಿನ ಮತ್ತೆ ದೇವಸ್ಥಾನಕ್ಕೆ ತೆರಳಿದ್ದಾರೆ. ಬನಶಂಕರಿ ದೇವಾಲಯಕ್ಕೆ ತೆರಳಿ ದೇವಿಗೆ ದರ್ಶನ್ ಹೆಸರಿನಲ್ಲಿ ಅರ್ಚನೆ, ಪೂಜೆ ಮಾಡುವ ಮೂಲಕ ಈ ವರ್ಷದ ಭೀಮನ ಅಮಾವಾಸ್ಯೆಯನ್ನು ನೆರವೇರಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೇ ಡಿ ಬಾಸ್ ಫ್ಯಾನ್ಸ್ ಸಹ ವಿಜಯಲಕ್ಷ್ಮೀ ಅವರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ನಟ ದರ್ಶನ್ ವಿಜಯಲಕ್ಷ್ಮೀ ಅವರಿಗೆ ಮನಬಂದಂತೆ ಬೈದರು, ಬೇರೆ ಹೆಣ್ಣಿನ ಸಹವಾಸ ಮಾಡಿ ಜೈಲು ಸೇರಿದರೂ ಸಹ ಪತ್ನಿಯಾದವಳು ಹೇಗೆ ನಡೆದುಕೊಳ್ಳಬೇಕು ಎಂದು ವಿಜಯಲಕ್ಷ್ಮೀ ಅವರು ತೋರಿಸಿಕೊಟ್ಟಂತಿದೆ. ಈ ಕಾರಣದಿಂದಲೇ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿಯವರನ್ನು ಅತ್ತಿಗೆ ಎಂದು ಕರೆಯುತ್ತಿದ್ದಾರೆ. ನಿಮ್ಮ ನಡೆ ಮಾದರಿ ಎಂದು ಕೊಂಡಾಡಿದ್ದಾರೆ.
ಚಾಮುಂಡೇಶ್ವರಿ ದೇಗುಲದಲ್ಲಿ ದಿನಕರ್ ಪೂಜೆ
ಸದ್ಯ ದರ್ಶನ್ ಜೈಲಿನಲ್ಲಿದ್ದು, ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮೀ ಓಡಾಡುತ್ತಿದ್ದಾರೆ. ಅವರಿಗೆ ದರ್ಶನ್ ಸಹೋದರ ದಿನಕರ್ ತೂಗೂದೀಪ ಅವರು ಸಾಥ್ ನೀಡಿದ್ದಾರೆ. ಅವರು ಸಹ ಮೈಸೂರು ಚಾಮುಂಡೇಶ್ವರಿಗೆ ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪತಿ ಇಲ್ಲದೇ ಭೀಮನ ಅಮಾವಾಸ್ಯೆ ಮಾಡಿರುವ ಪತ್ನಿ ವಿಜಯಲಕ್ಷ್ಮೀ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಪತಿಯ ದರ್ಶನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications