ದರ್ಶನ್ ಕೇಸ್ ಟ್ರಯಲ್ ಆರಂಭ: ರೇಣುಕಾಸ್ವಾಮಿ ತಾಯಿಗೆ ಪ್ರಶ್ನೆಗಳ ಸುರಿಮಳೆ: ಡಿ.18ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು, ಡಿಸೆಂಬರ್ 17: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಟ್ರಯಲ್ (ವಿಚಾರಣೆ) ಇಂದು (ಡಿ.17) ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಆರಂಭವಾಗಿದೆ. ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಮೃತರ ಪೋಷಕರನ್ನು ಸಾಕ್ಷ್ಯಗಳನ್ನಾಗಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಕೋರ್ಟ್ ಸಮನ್ಸ್ ನೀಡಿತ್ತು. ಅದರಂತೆ ಇಂದು ಹಾಜರಾಗಿದ್ದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರನ್ನು ಪವಿತ್ರಾ ಗೌಡ ಪರ ವಕೀಲರಾದ ಬಾಲನ್ ಅವರು ವಿಚಾರಣೆಗೊಳಪಡಿಸಿದರು. ಇಂದು ಏನೇನಾಯಿತು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಕರೆತಂದು, ಪಟ್ಟಣಗೆರೆ ಶೆಡ್‌ನಲ್ಲಿಟ್ಟು, ಹಿಂಸಿಸಿ ನಟ ದರ್ಶನ್ ಹಾಗೂ ಇತರ ಆರೋಪಿಗಳು ಹತ್ಯೆ ಮಾಡಿದ್ದಾರೆಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ರೇಣುಕಾಸ್ವಾಮಿ ಮನೆಯಿಂದ ಹೊರಟ ಬಳಿಕ ಈ ಘಟನೆಗೂ ಮುನ್ನ ಮನೆಗೆ ಕರೆ ಮಾಡಿದ್ದರೇ? ಏನೆಲ್ಲ ಹೇಳಿದ್ದರೆಂದು ಅವರ ತಾಯಿ ರತ್ನಪ್ರಭಾ ಅವರನ್ನು ವಕೀಲ ಬಾಲನ್ ಪ್ರಶ್ನಿಸಿದರು.

ಜೂನ್ 08ರಂದು ನಿಮ್ಮ ಮಗ (ರೇಣುಕಾಸ್ವಾಮಿ) ಕಾಣೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕು ಮುನ್ನ ಮಗ ನಿಮ್ಮನ್ನು ಸಂಪರ್ಕಿಸಿದ್ದರೇ?. ಸ್ನೇಹಿತರ ಜೊತೆಗೆ ಹೋಗುವುದಾಗಿ ಹೇಳಿದ್ದನೆಂದು ನೀವು ಹೇಳಿಕೆ ನೀಡಿದ್ದೀರಿ. ಅದೆಲ್ಲವು ಸರಿಯೇ?, ನಿಮ್ಮ ಮತ್ತು ಮಗನ ಮೊಬೈಲ್ ಪೊಲೀಸರು ಪರಿಶೀಲಿಸಿದ್ದಾರೆಯೇ ಎಂದು ಬಾಲನ್ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರತ್ನಪ್ರಭಾ ಅವರು, ಆ ದಿನ ತಾನು ಮನೆಗೆ ಊಟಕ್ಕೆ ಬರುವುದಿಲ್ಲ ಎಂದು ಮಗ ಹೇಳಿದ್ದ. ಆದರೆ ತಾನು ಸ್ನೇಹಿತರ ಜೊತೆಗೆ ತೆರಳುವುದಾಗಿ ತಿಳಿಸಿದ್ದ ಎಂದು ನಾನು ಹೇಳಿಕೆ ನೀಡಿಲ್ಲ. ನಾನು ಯಾವ ದಿನ ಹೇಳಿಕೆ ನೀಡಿದ್ದೇನೆಂದು ನನೆಪಿಲ್ಲ. ನನ್ನ ಮತ್ತು ಮಗನ ಮೊಬೈಲ್ ಸಂಪರ್ಕದ ಬಗ್ಗೆ ಪೊಲೀಸರು ನನ್ನ ಮೊಬೈಲ್ ಪರಿಶೀಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಮನೆಯಲ್ಲಿ ಪತಿ, ಪುತ್ರ ರೇಣುಕಾಸ್ವಾಮಿ, ನನಗೆ ಪ್ರತ್ಯೇಕ ಫೋನ್‌ಗಳಿಗೆ, ಅವು ಯಾವ ಕಂಪನಿಗಳದ್ದು ಎಂದು ನನಗೆ ಗೊತ್ತಿಲ್ಲ ಸ್ವಾಮಿ. ನಮ್ಮ ಮಗ ಬಾರ್‌ಗೆ ಯಾವತ್ತು ಹೋಗಿಲ್ಲ. ಕಾಣೆಯಾದ ದಿನ ಆತ ಬಾರ್ ಹೋಗಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಾಲನ್ ಅವರ ಕೆಲವು ಪ್ರಶ್ನೆಗಳಿಗೆ ರತ್ನಪ್ರಭಾ ಅವರು ಉತ್ತರಿಸಿದರು.
ಡಿ.18ಕ್ಕೆ ವಿಚಾರಣೆ ಮುಂದೂಡಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಕಾಣೆಯಾದ ದಿನದಂದು ಏನೆಲ್ಲ ನಡೆಯಿತು. ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವುದಕ್ಕೂ ಮತ್ತು ಅಂದು ಮನೆಗೆ ರೇಣುಕಾಸ್ವಾಮಿ ಸಂಪರ್ಕಿಸಿದ್ದರ ಕುರಿತು ಅವರ ತಾಯಿಯಿಂದ ಬಾಲನ್ ಒಂದಷ್ಟು ಉತ್ತರ ಪಡೆದುಕೊಂಡರು. ಈ ವೇಳೆ ಕೋರ್ಟ್ ಕಾಲಾವಧಿ ಮುಗಿಯುತ್ತಾ ಬಂತು. ಆಗ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ನಾಳೆ ಗುರುವಾರ ಡಿಸೆಂಬರ್ 18ರಂದು ಮಧ್ಯಾಹ್ನ 12.30ಕ್ಕೆ ಮುಂದುವರಿಸುವುದಾಗಿ ತಿಳಿಸಿ ಮುಂದೂಡಿದರು.
ದರ್ಶನ್ ಸೇರಿ ಎಲ್ಲ ಆರೋಪಿಗಳು ಹಾಜರು
ಡಿಸೆಂಬರ್ 04ರಂದು ಪ್ರಕರಣ ಮತ್ತು ದರ್ಶನ್ ಅವರು ಸಲ್ಲಿಸಿದ್ದ ಬೆಡ್, ಬೆಡ್‌ಶೀಟ್ ಇತರ ಸೌಲಭ್ಯ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಜೈಲಲ್ಲಿ ದರ್ಶನ್ ಗೆ ಟಿವಿ ನೋಡಲು ಕೋರ್ಟ್ ಅವಕಾಶ ನೀಡಿತು. ಬಳಿಕ ಪ್ರಕರಣದಲ್ಲಿ ರೇಣುಕಾಸ್ವಾಮಿ ಅವರ ತಂದೆ ತಾಯಿಯನ್ನು ಸಾಕ್ಷ್ಯಗಳನ್ನಾಗಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಅದರಂತೆ ಇಂದು ನಡೆದ ವಿಚಾರಣೆಯಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ದರ್ಶನ್ ತೂಕಡಿಸುತ್ತ, ಆಕಳಿಸುತ್ತಲೇ ವಿಚಾರಣೆ ವೀಕ್ಷಿಸಿದರು ಎನ್ನಲಾಗಿದೆ.












Click it and Unblock the Notifications