Namma Metro: ಪಾರ್ಕಿಂಗ್ ವಿಚಾರದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ
ಬೆಂಗಳೂರು, ನವೆಂಬರ್ 10: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ನಗರದ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಹೆಚ್ಚು ಹೆಚ್ಚು ಪ್ರಯಾಣಿಕರು ನಮ್ಮ ಮೆಟ್ರೋ ಬಳಕೆ ಮಾಡಲು ಆರಂಭಿಸಿದ್ದಾರೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಿಹರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮೂಲಕ ನಮ್ಮ ಮೆಟ್ರೋಗೆ ಇನ್ನಷ್ಟು ಪ್ರಯಾಣಿಕರನ್ನು ಸೆಳೆಯಲು ಯೋಜನೆ ರೂಪಿಸಲಾಗುತ್ತಿದೆ.
ನಮ್ಮ ಮೆಟ್ರೋ ಪ್ರಯಾಣಿಕರಲ್ಲಿ ಹಲವಾರು ಜನರು ಬೈಸಿಕಲ್ ಬಳಕೆ ಮಾಡುತ್ತಾರೆ. ಈಗಾಗಲೇ ಹಲವು ಮೆಟ್ರೋ ನಿಲ್ದಾಣದಲ್ಲಿ ಸೈಕಲ್ ಸ್ಟಾಂಡ್ ವ್ಯವಸ್ಥೆ ಮಾಡಲಾಗಿದೆ. ಈಗ ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ), ಬಿಎಂಆರ್‌ಸಿಎಲ್ ಹೊಸದೊಂದು ಸಮೀಕ್ಷೆಯನ್ನು ನಡೆಸಲಿವೆ.

ಸದ್ಯ ಸೈಕಲ್ ಸ್ಟಾಂಡ್ ಇರುವ 10 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚು ಸೈಕಲ್ ನಿಲ್ಲಿಸಲು ಅನುಕೂಲವಾಗುವಂತೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವ ಕುರಿತು ಅಧ್ಯಯನ ಆರಂಭಿಸಿವೆ. ಈಹಿಂದೆ ಡಿಯುಎಲ್‌ಟಿ ಬಿಎಂಆರ್‌ಸಿಎಲ್ ಜೊತೆ ಸೇರಿ ಸೈಕಲ್ ಸ್ಟಾಂಡ್ ವಿನ್ಯಾಸ ಸೇರಿದಂತೆ ಹಲವು ಕೆಲಸಗಳನ್ನು ಪ್ರಾಯೋಗಿಕವಾಗಿ ಕೈಗೊಂಡಿತ್ತು.
ಹೆಚ್ಚು-ಹೆಚ್ಚು ಸೈಕಲ್ ಬಳಕೆ: ಈಗ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಮೆಟ್ರೋ ಪ್ರಯಾಣಿಕರು ಬೈಸಿಕಲ್ ಬಳಕೆ ಮಾಡುವುದು ಹೆಚ್ಚಿದೆ. ಆದ್ದರಿಂದ 10 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಸೈಕಲ್ ನಿಲುಗಡೆ ವ್ಯವಸ್ಥೆ ಮಾಡುವ ಕುರಿತು ಅಧ್ಯಯನ ಆರಂಭಿಸಲಾಗಿದೆ.
ಅಲ್ಲದೇ ಹೊಸದಾಗಿ ಕೆಂಗೇರಿ ಬಸ್ ಟರ್ಮಿನಲ್, ಕೆಆರ್ ಪುರ, ಮಾದಾವರ, ಚಿಕ್ಕಬಿದರಕಲ್ಲು, ಮಂಜುನಾಥ ನಗರ, ದಾಸರಹಳ್ಳಿ, ನ್ಯಾಷನಲ್ ಕಾಲೇಜು, ಬನಶಂಕರಿ, ಜೆಪಿ ನಗರ, ರೇಷ್ಮೆ ಸಂಸ್ಥೆ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲು ವರದಿ ತಯಾರು ಮಾಡಲಾಗುತ್ತದೆ.
ನಮ್ಮ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ, ಜಾಗದ ಲಭ್ಯತೆ ಮುಂತಾದ ಅಂಶಗಳ ಆಧಾರದ ಮೇಲೆ ಮೆಟ್ರೋ ನಿಲ್ದಾಣಗಳನ್ನು ಅಂತಿಮಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಈಗಾಗಲೇ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ ಸ್ಟಾಂಡ್ ಯೋಜನೆ ಕಾರ್ಯಗತಗೊಳಿಸಲಾಗಿದೆ. ಬೈಕ್ ಮತ್ತು ಕಾರು ಪಾರ್ಕಿಂಗ್ ಮಾದರಿಯಲ್ಲಿಯೇ ಸೈಕಲ್ ಪಾರ್ಕಿಂಗ್‌ಗೆ ಸಹ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೂನ್ 2024ರಲ್ಲಿ ಡಿಯುಎಲ್‌ಟಿ 10 ಮೆಟ್ರೋ ನಿಲ್ದಾಣದಲ್ಲಿ ಸೈಕಲ್ ಪಾರ್ಕಿಂಗ್ ವ್ಯವಸ್ಥೆ ಮಾಡುವ ಕುರಿತು ಅಧ್ಯಯನವೊಂದನ್ನು ನಡೆಸಿತ್ತು. ಇದರಲ್ಲಿ ನಾಗಸಂದ್ರ, ಪೀಣ್ಯ, ಮಹಾಲಕ್ಷ್ಮಿ, ರಾಜಾಜಿನಗರ, ಮಹಾಕವಿ ಕುವೆಂಪು ರಸ್ತೆ, ಜಯನಗರ, ಯೆಲಚೇನಹಳ್ಳಿ, ಕೋನಕುಂಟೆ ಕ್ರಾಸ್, ಸ್ವಾಮಿ ವಿವೇಕಾನಂದ ರಸ್ತೆ, ಬೈಯಪ್ಪನಹಳ್ಳಿ ನಿಲ್ದಾಣಗಳು ಸೇರಿದ್ದವು.
ಅಧ್ಯಯನದ ಮಾಹಿತಿ ಪ್ರಕಾರ ಯಲಚೇನಹಳ್ಳಿ, ಕೋಣನಕುಂಟೆ ಕ್ರಾಸ್, ಸ್ವಾಮಿ ವಿವೇಕಾನಂದ ನಿಲ್ದಾಣಗಳಲ್ಲಿ ವಾರದ ದಿನಗಳಲ್ಲಿ ಹೆಚ್ಚು ಸೈಕಲ್ ಆಗಮಿಸುತ್ತಿವೆ. ಕೆಲವೊಂದು ದಿನ ಈ ಸಂಖ್ಯೆ 113ಕ್ಕೆ ಸಹ ತಲುಪಿದೆ. ರಾಜಾಜಿನಗರ, ಮಹಾಲಕ್ಷ್ಮಿ ಮತ್ತು ಪೀಣ್ಯ ನಿಲ್ದಾಣಗಳಲ್ಲಿ ಸೈಕಲ್ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.
ಅಧ್ಯಯನದ ಪ್ರಕಾರ ಹೆಚ್ಚು ಪ್ರಯಾಣಿಕರು ಭೇಟಿ ನೀಡುವ ನಿಲ್ದಾಣಗಳಲ್ಲಿ ಸೈಕಲ್ ಪಾರ್ಕಿಂಗ್‌ಗೆ ಹೆಚ್ಚು ಬೇಡಿಕೆ ಇದೆ. ಪಾವತಿ ಪಾರ್ಕಿಂಗ್ ವ್ಯವಸ್ಥೆ ಇರುವಲ್ಲಿಯೇ ಸೈಕಲ್ ನಿಲ್ಲಿಸಲು ಪ್ರಯಾಣಿಕರು ಬಯಸುತ್ತಿದ್ದಾರೆ. ಅಲ್ಲಿ ಕಣ್ಗಾವಲು ವ್ಯವಸ್ಥೆಯೂ ಇರುವ ಕಾರಣ ಸೈಕಲ್ ಸುರಕ್ಷಿತವಾಗಿರಲಿದೆ.












Click it and Unblock the Notifications