ಬನ್ನೇರುಘಟ್ಟ ಬೋಟಿಂಗ್ ಕೊಳದಲ್ಲಿ ಮೊಸಳೆ ಪ್ರತ್ಯಕ್ಷ್ಯ!
ಬೆಂಗಳೂರು: ಬೆಂಗಳೂರಿಗರ ಅಚ್ಚುಮೆಚ್ಚಿನ ಜಾಗ, ವನ್ಯಜೀವಿ ತಾಣ ಬನ್ನೇರುಘಟ್ಟದಲ್ಲಿ ಆಘಾತಕಾರಿ ಘಟನೆ ನಡೆದಿದೆ. ದಿನನಿತ್ಯ ಸಾವಿರಾರು ಮಂದಿ ಬೋಟಿಂಗ್ ಮಾಡುವ ಕೊಳದಲ್ಲಿ ಭಾರಿ ಗಾತ್ರದ ಮೊಸಳೆ ಕಂಡುಬಂದಿದೆ. ತಕ್ಷಣವೇ ಬೋಟಿಂಗ್ ಬಂದ್ ಮಾಡಲಾಗಿದ್ದು, ಬನ್ನೇರುಘಟ್ಟ (Bannerghatta) ಇಡಿ ಸುನಿಲ್ ಕುಮಾರ್ ಪನ್ವರ್ ಒನ್‌ಇಂಡಿಯಾಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಪಿಕ್‌ನಿಕ್‌ಗಾಗಿ ಹೇಳಿ ಮಾಡಿಸಿದ ಜಾಗ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ವಾಸ ಇರುವ ಬಹುತೇಕ ಕುಟುಂಬಗಳು ತಮ್ಮ ಮಕ್ಕಳ ಜೊತೆ ವೀಕೆಂಡ್ ಸಮಯದಲ್ಲಿ ಇಲ್ಲಿಗೆ ಬಂದು ಕಾಲ ಕಳೆಯುತ್ತಾರೆ. ಹುಲಿ, ಸಿಂಹ, ಆನೆ, ಕರಡಿ ಸಫಾರಿ ಜೊತೆಗೆ ಜೂ ಕೂಡ ಗಮನ ಸೆಳೆಯುತ್ತದೆ. ಹಾಗೇ ಇಲ್ಲಿ ಬೋಟಿಂಗ್ ಮಾಡುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದೇ ಕೊಳದಲ್ಲಿ ಭಾರಿ ಗಾತ್ರದ ಮೊಸಳೆ ಕಂಡುಬಂದಿದೆ.

ಮೊಸಳೆ ಬಗ್ಗೆ ಬಿಗ್ ಅಲರ್ಟ
ಬೆಳಗ್ಗೆ ಇನ್ನೂ ಝೂ ತೆರೆಯುವುದಕ್ಕೂ ಮೊದಲು ಅಲ್ಲಿನ ಸಿಬ್ಬಂದಿ ಕಣ್ಣಿಗೆ ಬೋಟಿಂಗ್ ಕೊಳದಲ್ಲಿ ಏನೋ ಈಜಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಲರ್ಟ್ ಆದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗಲೇ ಗೊತ್ತಾಗಿದ್ದು ಬೋಟಿಂಗ್ ಕೊಳದಲ್ಲಿ ಭಾರಿ ಗಾತ್ರದ ಮೊಸಳೆ ಇದೆ ಎಂಬ ವಿಚಾರ. ತಕ್ಷಣ ಅಲರ್ಟ್ ಆದ ಬನ್ನೇರುಘಟ್ಟ ಮೃಗಾಲಯದ ಅಧಿಕಾರಿಗಳು, ಬೋಟಿಂಗ್ ನಿಲ್ಲಿಸಿ ಮೊಸಳೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ ಮೊಸಳೆ ಬಲೆಗೆ ಬೀಳಲು ಸಾಕಷ್ಟು ಸಮಯ ಅಗತ್ಯ, ಹೀಗಾಗಿ ಗುರುವಾರ ಇಡೀ ದಿನ ಬೋಟಿಂಗ್ ಬಂದ್ ಮಾಡಲಾಗಿದೆ.
'ಆಪರೇಷನ್ ಮೊಸಳೆ' ಕಾರ್ಯಾಚರಣೆ
ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೆಚ್ಚಾಗಿ ಬರುವುದು ಮಕ್ಕಳು. ಅದರಲ್ಲೂ ಮಕ್ಕಳೇ ಹೆಚ್ಚು ಬೋಟಿಂಗ್ ಪ್ರಿಯರಾಗಿದ್ದು, ಅಕಸ್ಮಾತ್ ಎಡವಟ್ಟು ನಡೆದುಹೋದರೆ ಕಷ್ಟ ಎಂಬ ಕಾರಣಕ್ಕೆ ಬೋಟಿಂಗ್ ಬಂದ್ ಮಾಡಲಾಗಿದೆ. ಮತ್ತೊಂದು ಕಡೆ ಮೊಸಳೆ ಹಿಡಿಯಲು ಕನಿಷ್ಠ ಇಂದು ರಾತ್ರಿಯ ತನಕ ಕಾರ್ಯಾಚರಣೆ ನಡೆಸಬೇಕಿದೆ. ಹೀಗಾಗಿ ಬನ್ನೇರುಘಟ್ಟ ಪಾರ್ಕ್ ಸಿಬ್ಬಂದಿ ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂದು ರಾತ್ರಿಯ ಒಳಗೆ ಮೊಸಳೆಯನ್ನು ಬಲೆಗೆ ಕೆಡವಿ, ಬೋಟಿಂಗ್ ನಡೆಸಲು ಮತ್ತೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರವಾಸಿಗರಲ್ಲಿ ಆತಂಕ ಅನಗತ್ಯ
'ಒನ್‌ಇಂಡಿಯಾ'ಗೆ ಈ ಕುರಿತು ಮಾಹಿತಿ ನೀಡಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಪನ್ವರ್, ಬನ್ನೇರುಘಟ್ಟದ ಒಳಗೆ ಸುಮಾರು 7 ಕೆರೆಗಳು ಇರುವ ಕಾರಣ ಮೊಸಳೆಯೊಂದು ಕಣ್ತಪ್ಪಿಸಿ ಬೋಟಿಂಗ್ ಕೊಳಕ್ಕೆ ಬಂದಿದೆ. ಹೀಗಾಗಿ ತಕ್ಷಣ ಬೋಟಿಂಗ್ ನಿಲ್ಲಿಸಲಾಗಿದೆ. ಕೂಡಲೇ ಮೊಸಳೆಯನ್ನ ಹಿಡಿದು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತೇವೆ ಎಂದಿದ್ದಾರೆ. ಹಾಗೇ ಈ ಘಟನೆ ಕುರಿತು ಪ್ರವಾಸಿಗರು ಆತಂಕಪಡುವ ಅಗತ್ಯತೆ ಇಲ್ಲ, ನಾಳೆಯ ಒಳಗಾಗಿ ಸಮಸ್ಯೆ ಬಗೆಹರಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಕೋವಿಡ್ ಬಳಿಕ ಚೇತರಿಕೆ!
ಕೊರೊನಾ ವಕ್ಕರಿಸಿದ ಸಂದರ್ಭದಲ್ಲಿ ಜಗತ್ತಿನ ಪ್ರತಿಯೊಂದು ಮೃಗಾಲಯವೂ ಸಂಕಷ್ಟಕ್ಕೆ ಸಿಲುಕಿತ್ತು. ಅದರಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೂಡ ಸಾಕಷ್ಟು ನಷ್ಟ ಅನುಭವಿಸಿತ್ತು. ಆದರೆ ಕಳೆದ 1 ವರ್ಷದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೋವಿಡ್ ಬಳಿಕ ಚೇತರಿಕೆ ಕಾಣುತ್ತಿದೆ. 2022-23ನೇ ವರ್ಷದಲ್ಲಿ ಬರೊಬ್ಬರಿ 2.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಈ ಮೂಲಕ 53 ಕೋಟಿ 89 ಲಕ್ಷ ಆದಾಯ ಸಂಗ್ರಹವಾಗಿದೆ. ಇದೀಗ ಪಾರ್ಕ್ ಮತ್ತಷ್ಟು ಅಭಿವೃದ್ಧಿಯಾಗಲು ಹಲವು ಯೋಜನೆಗಳನ್ನ ಹಾಕಿಕೊಳ್ಳಲಾಗಿದೆ.












Click it and Unblock the Notifications