ಉದ್ಯೋಗದ ಅಮಿಷ ಒಡ್ಡಿ ಬೆಂಗಳೂರಿನಲ್ಲಿ ಯುವಕರಿಗೆ ಮಹಾ ದೋಖಾ!
ಬೆಂಗಳೂರು, ನ. 15: ಸರಕಾರಿ ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜನರ ಬಳಿ ಹಣ ಕಸಿದುಕೊಂಡು ವಂಚನೆ ಮಾಡುತ್ತಿದ್ದ ವಂಚಕರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದೀಗ ಅಂತಹದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ ಮತ್ತೆ ನಡೆದಿದೆ. ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೊಸ ಮಾಡಿರುವ ಸಂಗತಿ ಹೊರ ಬಿದ್ದಿದೆ. ಖಾಸಗಿ ಅಥವಾ ಸರ್ಕಾರಿ ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಹಣ ಪಡೆಯುವರ ಬಗ್ಗೆ ಸ್ವಲ್ಪ ಎಚ್ಚರ ವಹಿಸಿದರೂ ಮೋಸ ಹೋಗುವುದು ಗ್ಯಾರೆಂಟಿ.
ಲಾಕ್‌ಡೌನ್ ವೇಳೆ ಕೆಲಸ ತೊರೆದಿದ್ದ ಅನೇಕರು ಇದೀಗ ಕೆಲಸ ಹುಡುಕುತ್ತಿದ್ದಾರೆ. ಕೊರೊನಾ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕಂಪನಿಗಳು ಕೆಲಸ ಖಾಲಿ ಇಲ್ಲ ಎಂಬ ನಾಮ ಫಲಕಗಳನ್ನು ನೇತು ಹಾಕಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಇದೀಗ ನಿರುದ್ಯೋಗಿ ಯುವಕರನ್ನು ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಕೆಲಸ ಹುಡುಕವರು ಸ್ವಲ್ಪ ಎಚ್ಚರ ತಪ್ಪಿದರೂ ಹಣ ಪಡೆದು ವಂಚನೆ ಮಾಡುತ್ತಾರೆ.
ಪ್ರತಿಷ್ಠಿತ ಅಮೆಜಾನ್ ಕಂಪನಿಯಲ್ಲಿ ರಿಸರ್ಚರ್ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಐದು ಲಕ್ಷ ರೂ. ಪಡೆದು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹರ್ಷವರ್ಧನ್ ಹಣ ಕಳೆದುಕೊಂಡವರು. ಅಲ್ಲದೆ, ಅಮೆಜಾನ್ ಇ ಕಾಮರ್ಸ್ ಕಂಪನಿಯಲ್ಲಿ ರಿಸರ್ಚರ್ ಹುದ್ದೆಯ ಆಫರ್ ಪತ್ರವನ್ನೂ ರವಾನಿಸಿದ್ದರು. ಕೆಲವು ಪ್ರಾಡಕ್ಟ್‌ಗಳನ್ನು ಖರೀದಿಸಿದ ಬಳಿಕ ನೀವು ಮನೆಯಲ್ಲಿಯೇ ಇದ್ದು ಕೆಲಸ ಮಾಡಿದರೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದು ಎಂದು ನಂಬಿಸಿದ್ದರು. ಇದನ್ನು ನಂಬಿ ಹರ್ಷವರ್ಧನ್ ಹಂತ ಹಂತವಾಗಿ ಐದು ಲಕ್ಷ ರೂ. ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡ ಬಳಿಕ ಮೋಸ ಹೋಗಿರುವುದು ಗೊತ್ತಾಗಿದ್ದು ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೊಸ ಜಾಲ ಹೊಸಕೋಟೆಯಲ್ಲಿ ಪತ್ತೆ:
ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದರು. ನಿರುದ್ಯೋಗಿ ಯುವಕರನ್ನು ಟಾರ್ಗೆಟ್ ಮಾಡಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದರು. ಸರ್ಕಾರಿ ಕೆಲಸದ ಅಮಿಷ ತೋರಿ ಹಣ ಪಡೆಯುವ ವೇಳೆ ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿ ಹಣ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಅಕ್ರಮ ಕೃತ್ಯದಲ್ಲಿ ಭಾಗಿಯಾಗುತ್ತಿದ್ದೀರಾ ಎಂದು ಯುವಕರನ್ನು ಬೆದರಿಸಿ ವಾಪಸು ಕಳುಹಿಸುತ್ತಿದ್ದರು. ಹತ್ತು ಲಕ್ಷ ಪಾವತಿಸಿ ಮೋಸ ಹೋಗಿದ್ದ ಯುವಕನೊಬ್ಬ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೊಲೀಸರು ಕೆಲ ದಿನಗಳ ಹಿಂದಷ್ಟೇ ಏಳು ಮಂದಿಯನ್ನು ಬಂಧಿಸಿದ್ದರು. ಅವರ ಬಳಿ ವಾಕಿ ಟಾಕಿಗಳನ್ನು ಸಹ ಜಪ್ತಿ ಮಾಡಿದ್ದರು. ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಕನ್ಸೆಲ್ಟೆನ್ಸಿಗಳು ಒಂದಡೆ ಸುಲಿಗೆ ಮಾಡುತ್ತಿದ್ದರೆ, ಮತ್ತೊಂದೆಡೆ ಕೆಲಸ ಕೊಡಿಸುವ ಆಸೆ ಹುಟ್ಟಿಸಿ ದೊಡ್ಡ ಮೊತ್ತದ ಹಣ ಪಡೆದು ಮೋಸ ಮಾಡುವ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿವೆ. ಈ ಬಗ್ಗೆ ಯುವಕರು ಎಚ್ಚೆತ್ತುಕೊಳ್ಳಬೇಕಿದೆ.

ರಸ್ತೆ ಅಪಘಾತದಲ್ಲಿ ಆಟೋ ಜಖಂ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಮೀಪ ಕ್ಯಾಂಟರ್ ಡಿಕ್ಕಿ ಹೊಡೆದು ಆಟೋ ಜಖಂ ಆಗಿರುವ ಘಟನೆ ನಡೆದಿದೆ. ಪ್ಯಾಲೆಸ್ ಗುಟ್ಟಹಳ್ಳಿ ಸಮೀಪ ಅಪಘಾತ ನಡೆದಿದ್ದು, ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಳೆ ಹಣ್ಣು ಸಾಗಿಸುತ್ತಿದ್ದ ಆಟೋಗೆ ಕ್ಯಾಂಟರ್ ಡಿಕ್ಕಿ ಹೊಡೆದು ಅವಘಡ ಸಂಭವಿಸಿದ್ದು, ಹೈಗ್ರೌಂಡ್ಸ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆನ್‌ಲೈನ್ ಬೆಟ್ಟಿಂಗ್ : ಆರೋಪಿ ಸೆರೆ:
ಆನ್‌ಲೈನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಆರು ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಹೇಮಂತ್ ಬಂಧಿತ ಆರೋಪಿ. ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಂದರ್ಭದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಖಚಿತ ಮಾಹಿತಿ ಆಧರಿಸಿ ವಿಜಯನಗರದ ಆರ್‌ಪಿಸಿ ಲೇಔಟ್‌ನ ಮನೆ ಮೇಲೆ ದಾಳಿ ಮಾಡಿ ನಗದು ಹಣ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಬಂಧಿತನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.