ಬೆಂಗಳೂರಿಗೆ ನಿನ್ನೆ ಕರಾಳ ಭಾನುವಾರ! ಬೆಚ್ಚಿ ಬಿದ್ದ ಜನರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಬೆಚ್ಚಿಬೀಳಿಸುವ ಘಟನೆಗಳು ನಡೆದಿವೆ. ವೀಕೆಂಡ್ ಮೂಡ್‌ನಲ್ಲಿ ಸೈಲೆಂಟ್ ಆಗಿದ್ದ ನಗರದಲ್ಲಿ ನಿನ್ನೆ ಯುವಕನ ಮೇಲೆ ಆಸಿಡ್ ದಾಳಿ ನಡೆದಿರುವ ಘಟನೆ ವರದಿಯಾಗಿದೆ. ಮತ್ತೊಂದೆಡೆ ಮಹಿಳೆಯೊಬ್ಬರ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಪೀಸ್ ಪೀಸ್ ಮಾಡಿಟ್ಟಿರುವ ವಿಚಾರ ಕೂಡ ಬೆಳಕಿಗೆ ಬಂದು ಎಲ್ಲರಲ್ಲೂ ಗಾಬರಿ ಹುಟ್ಟಿಸಿದೆ. ಇನ್ನು ಇತ್ತೀಚೆಗೆ ರಾಜಧಾನಿಯಲ್ಲಿ ಅಪರಾಧಗಳು ಮಿತಿಮೀರುತ್ತಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
ನಿನ್ನೆ ಹಾಡಹಗಲೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ದುಷ್ಕರ್ಮಿಗಳು ಯುವಕನ ಮೇಲೆ ಆ್ಯಸಿಡ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಯುವಕನ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಕಾಮಾಕ್ಷಿಪಾಳ್ಯದ ಬಾಲಾಜಿ ವೈನ್ ಸ್ಟೋರ್ ಬಳಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ 2: ಕೊಲೆಯಾಗಿದ್ದ ಮಹಿಳೆಯೊಬ್ಬರ ಮೃತದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವ ಭಯಾನಕ ಸಂಗತಿಯೊಂದು ನಗರದ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ವಿಚಾರ ಕೇಳಿ ಸದ್ಯ ಬೆಂಗಳೂರಿಗರು ಶಾಕ್‌ಗೆ ಒಳಗಾಗಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಮಾದರಿಯಲ್ಲೇ ಈ ಕೊಲೆಯೂ ನಡೆದಿದೆ ಎನ್ನಲಾಗಿದೆ.
ಆದರೆ, ಶ್ರದ್ಧಾ ಕೇಸ್‌ಗಿಂತ ಇಲ್ಲಿ ಕೊಲೆಯಾಗಿರುವ ಮಹಾಲಕ್ಷ್ಮಿಯವರ ಕೇಸ್ ಇನ್ನೂ ಬೆಚ್ಚಿಬೀಳಿಸುವಂತಿದೆ. ನೇಪಾಳ ಮೂಲದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಮೃತದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಮನೆಯ ಫ್ರಿಡ್ಜ್‌ನಲ್ಲಿ ಇಡಲಾಗಿದೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ್ದು ಯಾರು ಎನ್ನುವ ಮಾಹಿತಿ ಇಲ್ಲಿವರೆಗೆ ಪತ್ತೆಯಾಗಿಲ್ಲ. ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಅನುಮಾನದ ಮೇರೆಗೆ ಮಾಲೀಕರು ಈಕೆಯ ಸಂಬಂಧಿಕರಿಗೆ ಮಾಹಿತಿ ನೀಡಿದ ಬಳಿಕ ಮೃತಳ ತಾಯಿ ಮನೆಗೆ ಬಂದಿದ್ದರು. ಫ್ರಿಡ್ಜ್ ತೆರೆದು ನೋಡಿದಾಗ ಒಳಗೆ ಮಹಾಲಕ್ಷ್ಮಿಯ ಮೃತದೇಹ ಕಂಡು ಕಿರುಚಿಕೊಂಡು ಓಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತರ ತಾಯಿ ಸೀಮಾ ನೀಡಿದ್ದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ 3: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಬಿಎಂಪಿ ಮೈದಾನದಲ್ಲಿ ಗೇಟ್ ಮುರಿದು ಬಿದ್ದು 10 ವರ್ಷದ ನಿರಂಜನ್ ಎಂಬ ಬಾಲಕ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಆಟವಾಡಲು ಮೈದಾನಕ್ಕೆ ತೆರಳಿದ್ದ. ದುಸ್ಥಿತಿಯಲ್ಲಿದ್ದ ಗೇಟ್ ಅನ್ನು ಬಾಲಕ ಓಪನ್ ಮಾಡಲು ಮುಂದಾದಾಗ ಈ ಘಟನೆ ನಡೆದು ಹೋಗಿದೆ. ಕೂಡಲೇ ಸ್ಥಳೀಯರು ಬಾಲಕನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಒಟ್ಟಾರೆ ನಿನ್ನೆ ವೀಕೆಂಡ್ ಮೂಡ್‌ನಲ್ಲಿ ಸೈಲೆಂಟ್ ಆಗಿರುತ್ತಿದ್ದ ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳು ಸದ್ದು ಮಾಡಿವೆ.











Click it and Unblock the Notifications