ಕೋವಿಡ್ ಲಸಿಕೆ ವಿತರಣೆ; ಬಿಬಿಎಂಪಿಯಲ್ಲಿ ಮಹತ್ವದ ಸಭೆ
ಬೆಂಗಳೂರು, ನವೆಂಬರ್ 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ಲಸಿಕೆ ಹಂಚಿಕೆ ಮಾಡುವ ಕುರಿತು ಮಹತ್ವದ ಸಭೆ ನಡೆಯಿತು. ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಇರುವುದು ಬೆಂಗಳೂರು ನಗರದಲ್ಲಿ.
ಬುಧವಾರ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ವಿವಿಧ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿಗೆ ಲಸಿಕೆ ನೀಡಲು ಬಿಬಿಎಂಪಿ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಿದರು.
ಟಾಸ್ಕ್ ಫೋರ್ಸ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ ವಿಜೇಂದ್ರ ಮತ್ತು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಸೋಂಕಿಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ವಿವಿಧ ಲಸಿಕೆಗಳ ಪ್ರಯೋಗ 2 ಮತ್ತು 3ನೇ ಹಂತದಲ್ಲಿದೆ. 2021ರಲ್ಲಿ ಲಸಿಕೆ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿಯೇ ಅತಿ ಹೆಚ್ಚು ಸೋಂಕಿತರು ಇರುವುದು ಬೆಂಗಳೂರು ನಗರದಲ್ಲಿ. ಒಟ್ಟು ಸೋಂಕಿತರ ಸಂಖ್ಯೆ 3,58,606. ನವೆಂಬರ್ 17ರಂದು ನಗರದಲ್ಲಿ 729 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 17,707. ಇದುವರೆಗೂ ನಗರದಲ್ಲಿ 3,36,880 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. 4018 ಜನರು ಮೃತಪಟ್ಟಿದ್ದಾರೆ.












Click it and Unblock the Notifications