Constitution Day: ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರದ ಕೆಲಸಗಳ ಪಟ್ಟಿ ಕೊಟ್ಟ ಬಿಜೆಪಿ
ಬೆಂಗಳೂರು, ನವೆಂಬರ್ 26: ಭಾರತ ಸಂವಿಧಾನ ಅಂಗೀಕಾರವಾದ ದಿನವನ್ನು ನಾವು ಸಂವಿಧಾನ ದಿನಾಚರಣೆಯಾಗಿ ಆಚರಿಸುತ್ತೇವೆ. ಅಂಗೀಕಾರಗೊಂಡು 75 ವರ್ಷಗಳಾಗಿದ್ದು, ಇದರ ಆಚರಣೆ ಹೊತ್ತಿನಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಸಾಕಷ್ಟು ಕೆಲಸ ಮಾಡಿದೆ ಎಂದು ಬಿಜೆಪಿ ದೂರಿದೆ. ಅಧಿಕಾರಕ್ಕೆ ಬಂದ 18 ತಿಂಗಳಲ್ಲಿ ಮಾಡಿದ ಕೆಲಸದ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಪಟ್ಟಿ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರ ಹರಿಹಾಯ್ದಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಪಕ್ಷದ ಸಂವಿಧಾನ ವಿರೋಧಿ ಧೋರಣೆ ತಾಳಿದ್ದರ ಬಗ್ಗೆ ದೊಡ್ಡ ಕರಾಳ ಇತಿಹಾಸ ಇದೆ ಎಂದಿರುವ ಆರ್.ಅಶೋಕ್ ಅವರು ಮಂಗಳವಾರ ಸಂವಿಧಾನ ದಿನಾಚರಣೆಯಂದು ಟ್ವೀಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಲೇ ಬಂದಿದೆ ಎಂದು ಪಟ್ಟಿ ನೀಡಿದ್ದಾರೆ.

ಸಂವಿಧಾನ ವಿರೋಧಿ ಸರ್ಕಾರ ಕಿತ್ತೊಗೆಯಲು ಕರೆ
ಈ ಸಂವಿಧಾನ ದಿನದಂದು, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಪ್ರತಿಜ್ಞೆ ಮಾಡೋಣ. ಸಂವಿಧಾನದ ಮೌಲ್ಯಗಳು, ಆಶಯಗಳ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ನಮ್ಮ ರಾಜ್ಯದಿಂದ ಬೇರು ಸಮೇತ ಕಿತ್ತೊಗೆಯುವ ಸಂಕಲ್ಪ ಮಾಡೋಣ.
ಬಿಜೆಪಿ ನೀಡಿದ ಕಾಂಗ್ರೆಸ್ ಸಂವಿಧಾನ ವಿರೋಧಿ ಕಾರ್ಯಗಳ ಪಟ್ಟಿ
* ದೇಶದ ಸಾರ್ವಭೌಮತೆ, ಅಖಂಡತೆಯನ್ನು ಕಾಪಾಡಬೇಕಾದ ಚುನಾಯಿತ ಸರ್ಕಾರ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದಾಗ ಅದನ್ನ ಸಿಲಿಂಡರ್ ಬ್ಲಾಸ್ಟ್, business rivalry ಎಂದು ತಿಪ್ಪೆ ಸಾರಿಸುವ ಮೂಲಕ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿತು.
* ಭಾರತದ ಸಂವಿಧಾನದ ಪೀಠಿಕೆ ಆರಂಭವಾಗುವುದೇ 'ಭಾರತದ ಜನತೆಯಾದ ನಾವು' ಎಂದು. ಆದರೆ ಸಂವಿಧಾನ ರಕ್ಷಣೆ ಮಾಡಬೇಕಾದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದರು. ಆ ದೇಶದ್ರೋಹಿಗಳ ಹೆಡೆಮುರಿ ಕಟ್ಟಬೇಕಾದ ಕಾಂಗ್ರೆಸ್ ಸರ್ಕಾರ ಅದನ್ನು ಸಮರ್ಥಿಸಿಕೊಂಡಿತು. ಸುದ್ದಿ ಬಿತ್ತರ ಮಾಡಿದ ಮಾಧ್ಯಮಗಳ ಮೇಲೇ ಗೂಬೆ ಕೂರಿಸಲು ಮುಂದಾಯಿತು.
* ಪರಿಶಿಷ್ಟ ಸಮುದಾಯಗಳ ಅಭ್ಯುದಯಕ್ಕೆ ಕೆಲಸ ಮಾಡಬೇಕಾದ ಸರ್ಕಾರ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿವಿಯೋಗವಾಗಬೇಕಾದ ವಾಲ್ಮೀಕಿ ಅಭಿವೃದ್ಧಿ ನಿಗಮದ 182 ಕೋಟಿ ಲೂಟಿ ಮಾಡಿ ಪರಿಶಿಷ್ಟ ಪಂಗಡಗಳಿಗೆ ಅನ್ಯಾಯ ಮಾಡಿದೆ.
* ಮುಡಾ ಅಕ್ರಮ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನೆ ರಾಜಕೀಯ ಪ್ರೇರಿತ ತೀರ್ಪು ಎಂದು ಹೀಗಳೆಯುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದು ಇದೇ ಕಾಂಗ್ರೆಸ್ ರಾಜ್ಯ ಸರ್ಕಾರ ಎಂದು ಆರ್.ಅಶೋಕ್ ಗುಡುಗಿದರು.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ಸುಮಾರು 6,162 ಕೋಟಿ ರೂಪಾಯಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನು ದುರುಪಯೋಗ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರ ದಲಿತರಿಗೆ ಅನ್ಯಾಯ ಮಾಡುವ ಮೂಲಕ ಸಂವಿಧಾನದ ಆಶಯಗಳಿಗೆ ಎಳ್ಳು ನೀರು ಬಿಟ್ಟರು.
* ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಲಾಂಛನಗಳಿಗೆ ಗೌರವ ಕೊಡಬೇಕಾದ ಸರ್ಕಾರ, ಪ್ಯಾಲೆಸ್ತೀನ್ ಧ್ವಜ ಹಾರಿಸಿದರೆ ತಪ್ಪೇನು? ಎಂದು ಕೇಳಿತು.
* ಸಂವಿಧಾನ ಸಮಾವೇಶದ ಹೆಸರಿನಲ್ಲಿ ನಗರ ನಕ್ಸಲ್ ಗಳಿಗೆ, ಭಾರತದ ಸೈನಿಕರು ರೇಪಿಸ್ಟ್ ಗಳು ಎನ್ನುವ ವಿಕೃತ ಮನಸ್ಕರಿಗೆ ದೇಶದ್ರೋಹಿ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಖರ್ಚಿನಲ್ಲಿ ವೇದಿಕೆ ಕಲ್ಪಿಸಿಕೊಟ್ಟಿತು ಎಂದು ಆಕ್ರೋಶ ಹೊರ ಹಾಕಿದರು.
* ಶಾಸಕರ ಬಂಡಾಯ ಶಮನ ಮಾಡಲು ಸಂವಿಧಾನದ ನಿಯಮ ಉಲ್ಲಂಘಿಸಿ 90 ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸೃಷ್ಟಿಸುವ ಮೂಲಕ ಸಾರ್ವಜನಿಕರ ಹಣವನ್ನು ಇದೇ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಪೋಲು ಮಾಡುತ್ತಿದೆ ಎಂದರು.
* ತಮ್ಮ ತುಷ್ಟೀಕರಣ ರಾಜಕಾರಣದ ತೃಷೆಗಾಗಿ ಸಾಂವಿಧಾನಿಕ ಹುದ್ದೆಗಳಿಗೆ ಪದೇ ಪದೇ ಅಪಮಾನ ಮಾಡುವ ಚಾಳಿ ಬೆಳೆಸಿಕೊಂಡಿರುವ ಶಾಸಕ, ಸಚವಿ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಸಂವಿಧಾನಕ್ಕೆ ಅಪಚಾರ ಎಸಗುತ್ತಲೇ ಇದ್ದಾರೆ. ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿ ಶಾಸಕರು ತಲೆಬಾಗಬೇಕು ಎಂದು ಸ್ಪೀಕರ್ ಹುದ್ದೆಗೆ ಅಪಚಾರ ಎಸಗಿದ್ದ ಸಚಿವ ಜಮೀರ್ ಅಲ್ಲಿಗೆ ನಿಲ್ಲದೆ ಮುಸ್ಲಿಮರ ಕೆಲಸವನ್ನು ಸಚಿವರು ತಲೆಬಾಗಿ ಮಾಡಬೇಕು ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಾರೆ. ಈ ಮೂಲಕ ಸಂವಿಧಾನದ ಮೌಲ್ಯಗಳಿಗೆ ಅವರು ಅಪಮಾನ ಮಾಡಿದ್ದಾರೆ ಎಂದು ವಿವರಿಸಿದರು.
ಹೆಜ್ಜೆ ಹೆಜ್ಜೆಗೂ ಸಂವಿಧಾನಕ್ಕೆ ಅಪಚಾರ, ಅವಮಾನ, ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಲೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.












Click it and Unblock the Notifications