ಕಳ್ಳನ ಹಿಡಿಯಲು ಮೇಲಿಂದ ಜಿಗಿದ ಸಾಹಸಿ ಪೇದೆ
ಬೆಂಗಳೂರು, ಜು. 5 : ಕೈಚಳಕ ತೋರಿಸುತ್ತಿದ್ದ ಕಳ್ಳನನ್ನು ಹಿಡಿಯಲೆಂದು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯಲು ಯತ್ನಿಸಿದ ಸಾಹಸಿ ಪೊಲೀಸ್ ಕಾನ್‌ಸ್ಟೇಬಲ್ ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗಿನ ಜಾವ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಪ್ಪಳ ಮೂಲದ ಪೊಲೀಸ್ ಪೇದೆ ಹುಲಿಯಪ್ಪ ಅವರ ತಲೆಗೆ ತೀವ್ರವಾಗಿ ಗಾಯವಾಗಿದ್ದು ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಡೆದಿದ್ದು ಸುಮಾರು 3.20ರ ಸುಮಾರಿಗೆ. ಅವರ ಜೊತೆಗಿದ್ದ ಮತ್ತೊಬ್ಬ ಪೇದೆ ಪ್ರಸನ್ನ ಅವರು ಹುಲಿಯಪ್ಪ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ವಿವರ : ಹುಲಿಯಪ್ಪ ಮತ್ತು ಪ್ರಸನ್ನ ಶುಕ್ರವಾರ ರಾತ್ರಿ ಪಾಳಿಯಲ್ಲಿದ್ದರು. ರಾಜಗೋಪಾಲ ನಗರದಲ್ಲಿ ಸಂಚರಿಸುತ್ತಿದ್ದಾಗ ಅವರಿಗೆ ಏನೋ ಸದ್ದು ಕೇಳಿಬಂದಿದೆ. ಸಂಶಯಗೊಂಡ ಹುಲಿಯಪ್ಪ ಅವರು ಕೂಡಲೆ ಮೂರು ಮಹಡಿಯ ಕಟ್ಟಡವನ್ನು ಏರಿದ್ದಾರೆ. ಅವರ ಅನುಮಾನ ನಿಜವಾಗಿದೆ. ಕಳ್ಳ ತನ್ನ ಕೈಚಳಕ ತೋರಿಸುತ್ತಿದ್ದ.
ಆಗ ಹುಲಿಯಪ್ಪ ಆತನನ್ನು ಎಚ್ಚರಿಸಿ ಹಿಡಿಯಲು ಮುಂದಾಗಿದ್ದಾರೆ. ಪೊಲೀಸನನ್ನು ನೋಡುತ್ತಿದ್ದಂತೆ ಕಳ್ಳ ಪರಾರಿಯಾಗಲು ಯತ್ನಿಸಿದ್ದಾನೆ. ಆತ ತಪ್ಪಿಸಿಕೊಳ್ಳಬಾರದೆಂದು ಸ್ವಲ್ಪ ಎತ್ತರದಲ್ಲಿದ್ದ ಹುಲಿಯಪ್ಪ ಅವರು ಹಿಂದೆ ಮುಂದೆ ನೋಡದೆ ಕೆಳಗಿದ್ದ ಭಾರತ್ ಮೆಕ್ಯಾನಿಕ್ಸ್ ಇಂಜಿನಿಯರಿಂಗ್ ಕಟ್ಟಡಕ್ಕೆ ಜಿಗಿದಿದ್ದಾರೆ. ಆಸ್ಬೆಸ್ಟಸ್ ಶೀಟ್ ಇದ್ದ ಛಾವಣಿ ಮುರಿದುಕೊಂಡು ಅವರು ಬಿದ್ದಿದ್ದಾರೆ.
ಭಾರತ್ ಮೆಕ್ಯಾನಿಕ್ಸ್ ಇಂಜಿನಿಯರಿಂಗ್ ಇಟ್ಟಿದ್ದ ಕೆಲ ಕಬ್ಬಿಣದ ವಸ್ತುಗಳ ಮೇಲೆ ಹುಲಿಯಪ್ಪ ಅವರ ತಲೆ ಅಪ್ಪಳಿಸಿದೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು, ರಕ್ತ ಹರಿಯಲು ಪ್ರಾರಂಭಿಸಿದೆ. ಈ ಅವಘಡ ಸಂಭವಿಸುತ್ತಿದ್ದಂತೆ ಅಲ್ಲೇ ಇದ್ದ ಪೇದೆ ಪ್ರಸನ್ನ ಅವರು ಹುಲಿಯಪ್ಪ ಅವರನ್ನು ಕೂಡಲೆ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊಪ್ಪಳದವರಾದ ಹುಲಿಯಪ್ಪ ಅವರು ಕೇವಲ ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಒಂದು ತಿಂಗಳ ಹಿಂದಷ್ಟೆ ಅವರ ಪತ್ನಿ ಬೆಂಗಳೂರಿಗೆ ಬಂದು ಅವರನ್ನು ಸೇರಿಕೊಂಡಿದ್ದರು. ಸದ್ಯಕ್ಕೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಲಿಯಪ್ಪ ಅವರು ಬೇಗನೆ ಗುಣವಾಗಲೆಂದು ಅವರ ಸಂಬಂಧಿಕರು ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications