ಪರಮೇಶ್ವರ್ ಡಿಸಿಎಂ ಮಾಡಿ, ಕಾಂಗ್ರೆಸ್ ಕಚೇರಿಯಲ್ಲಿ ಗದ್ದಲ
ಬೆಂಗಳೂರು, ಮೇ 21 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಗದ್ದಲ ನಡೆಯಿತು. ರಾಜೀವ್ ಗಾಂಧಿ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಕಾರ್ಯಕರ್ತರ ಗದ್ದಲದಿಂದಾಗಿ ಮೊಟಕುಗೊಂಡಿತು.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಗೆಲುವಿನಲ್ಲಿ ಪರಮೇಶ್ವರ್ ಅವರ ಶ್ರಮವಿದೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದರು.

ಡಾ.ಜಿ.ಪರಮೇಶ್ವರ್ ಅವರು ಸಚಿವರಾಗಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಇನ್ನೂ ಏಳು ಕ್ಷೇತ್ರಗಳಲ್ಲಿ ಜಯಗಳಿಸಬಹುದಾಗಿತ್ತು ಎಂದು ರಾಜಶೇಖರನ್ ಹೇಳಿದರು. ಈ ಮಾತಿಗೆ ಧ್ವನಿಗೂಡಿಸಿದ ಕೆಲವು ಕಾರ್ಯಕರ್ತರು ಪರಮೇಶ್ವರ್ ಸಚಿವರಾದರೆ ಸಾಲದು, ಉಪಮುಖ್ಯಮಂತ್ರಿಯಾಗಬೇಕು ಎಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. [ಪರಮೇಶ್ವರ್ ಡಿಸಿಎಂ ಮಾಡುವಂತೆ ರಾಹುಲ್ ಗೆ ಮನವಿ]
ಕಾರ್ಯಕರ್ತರನ್ನು ಸಮಾಧಾನಪಡಿಸಲು ಪರಮೇಶ್ವರ್ ನಡೆಸಿದ ಪ್ರಯತ್ನ ವಿಫಲವಾಯಿತು. ಆದ್ದರಿಂದ ಕಾರ್ಯಕ್ರಮ ಮೊಟಕುಗೊಳಿಸಿದ ಅವರು, ತಮ್ಮ ಕಚೇರಿಗೆ ತೆರಳಿದರು. ಆದರೂ ಕಾರ್ಯಕರ್ತರ ಕೂಗಾಟ, ಗದ್ದಲ ಮುಂದುವರೆಯಿತು. ಪರಮೇಶ್ವರ್ ಕಚೇರಿಗೂ ನುಗ್ಗಿದ ಕಾರ್ಯಕರ್ತರು ಅವರು ಉಪ ಮುಖ್ಯಮಂತ್ರಿಯಾಗಬೇಕು ಎಂದು ಘೋಷಣೆಗಳನ್ನು ಕೂಗಿದರು. [ನಾನು ಡಿಸಿಎಂ ಆಗಲು ಸಿದ್ಧ ಪರಮೇಶ್ವರ್]
ಕಚೇರಿಯಲ್ಲಿದ್ದ ಕೆಲವು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರನ್ನು ಹೊರಗೆ ಕಳಿಸಲು ಯತ್ನಿಸಿದರು. ಇದರಿಂದ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಕಚೇರಿಯ ಹೊರಗಡೆ ತೆರಳಿದ ಕಾರ್ಯಕರ್ತರು ಕೆಪಿಸಿಸಿ ಕಚೇರಿಮುಂದೆ ಕುಳಿತು ಘೋಷಣೆಗಳನ್ನು ಕೂಗಿದರು.
ಪರಮೇಶ್ವರ್ ಅವರು ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಅವರನ್ನು ಉಪಮುಖ್ಯಮಂತ್ರಿ ಮಾಡಲು ನೀವು ವಿಳಂಬ ಮಾಡುತ್ತಿದ್ದೀರಿ. ಇದರ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಪರಮೇಶ್ವರ್ ಅವರನ್ನು ಡಿಸಿಎಂ ಮಾಡಬೇಕು ಎಂಬುದು ಕಾಂಗ್ರೆಸ್ ಪಕ್ಷದಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿರುವ ಕೂಗು. ಸದ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿ, ಲೋಕಸಭೆ ಚುನಾವಣೆಯೂ ಮುಕ್ತಾಯವಾಗಿರುವುದರಿಂದ ಈ ಬಗ್ಗೆ ಮತ್ತೊಮ್ಮೆ ಒತ್ತಾಯ ಕೇಳಿಬರುತ್ತಿದೆ.












Click it and Unblock the Notifications