Congress Ticket: ಬೆಂಗಳೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಅಭ್ಯರ್ಥಿಗಳಿವರು
ಬೆಂಗಳೂರು, ಮಾರ್ಚ್ 25: ಸಿಲಿಕಾನ್ ಸಿಟಿ ಉದ್ಯಾನ ನಗರಿ ಎಂದೇ ಖ್ಯಾತವಾದ ಬೆಂಗಳೂರಿಗೆ ವಿಶ್ವದಾದ್ಯಂತ ತನ್ನದೇ ಆದ ಹೆಗ್ಗುರುತು ಇದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳು ಇವೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬೆಂಗಳೂರಿನಲ್ಲಿ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ 14 ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿಸಿದೆ. ಇನ್ನು ಬಾಕಿಯಿರುವ 14 ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 2ನೇ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿ ಹೆಸರು ಬಿಡುಗಡೆಗೆ ಅವಕಾಶ ಕಲ್ಪಿಸಲು ಹೈಕಮಾಂಡ್ ಮುಂದಾಗಿದೆ.

ಬೆಂಗಳೂರಿನಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಯಾಥಾವತ್ತಾಗಿ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗಿದೆ. ಅದರಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ದಿನೇಶ್ ಗುಂಡೂರಾವ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಅವರು ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆಗಿದ್ದ ಅವರು ಟಿಕೆಟ್ ಪಡೆದುದ್ದರಲ್ಲಿ ಆಶ್ಚರ್ಯವೇನಿಲ್ಲ. ಕಾಂಗ್ರೆಸ್ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಐಡೆಂಟಿಟಿ ಹೊಂದಿರುವ ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಜಮೀರ್ ಅಹಮದ್ ಖಾನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಚಾಮರಾಜಪೇಟೆಯಲ್ಲಿ ಸತತವಾಗಿ ಗೆಲ್ಲುತ್ತಾ ತಮ್ಮದೇ ಭದ್ರಕೋಟೆಯನ್ನು ಕಟ್ಟಿಕೊಂಡಿರುವ ಜಮೀರ್ ಅವರು ಕ್ಷೇತ್ರದಾದ್ಯಂತ ಜನರೊಂದಿಗೆ ಯಾವ ಸಂದರ್ಭದಲ್ಲೂ ನಿಲುವ ವ್ಯಕ್ತಿಯಾಗಿದ್ದಾರೆ. ಕಷ್ಟ ಎಂದು ಹೇಳಿಕೊಂಡು ಬಂದ ಜನರಿಗೆ ಕೊಡುಗೈದಾನಿಯಾಗಿರುವ ಅವರು ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲರೊಂದಿಗೆ ಸಾಮರಸ್ಯ ಹೊಂದಿದ್ದಾರೆ.
ರಾಮಲಿಂಗಾರೆಡ್ಡಿ ಅವರಿಗೆ ಬಿಟಿಎಂ ಲೇಔಟ್
ಹಿರಿಯ ಕಾಂಗ್ರೆಸ್ ನಾಯಕರಾದ ರಾಮಲಿಂಗಾರೆಡ್ಡಿ ಅವರಿಗೆ ಬಿಟಿಎಂ ಲೇಔಟ್‌ನಿಂದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ರೆಡ್ಡಿ ಸಮುದಾಯದ ಪ್ರಬಲ ನಾಯಕರಾಗಿರುವ ಅವರು ಮಾಜಿ ಗೃಹ ಸಚಿವರೂ ಆಗಿದ್ದರು.
ಬಿಟಿಎಂ ಲೇಔಟಿನಲ್ಲಿ ತಮ್ಮದೇ ಅಭಿವೃದ್ಧಿ ಕೆಲಸಗಳಿಂದ ಹಾಗೂ ಜನಬೆಂಬಲದಿಂದ ಗುರುತಿಸಿಕೊಂಡಿರುವ ಅವರಿಗೆ ಟಿಕೆಟ್ ಬಯಸಿ ಬೇರೆ ಯಾರು ಪ್ರಬಲ ಅಭ್ಯರ್ಥಿ ಇಲ್ಲ ಕಾರಣ ಕಾಂಗ್ರೆಸ್ ಅವರಿಗೇ ಟಿಕೆಟ್ ನೀಡಿದೆ.

ಸೌಮ್ಯರೆಡ್ಡಿಯವರಿಗೆ ಕಾಂಗ್ರೆಸ್ ಟಿಕೆಟ್
ಇನ್ನೂ ಬೆಂಗಳೂರಿನ ಹಳೆಯ ಜನವಸತಿ ಪ್ರದೇಶಗಳಲ್ಲಿ ಜಯನಗರ ಕೂಡ ಒಂದು. ಇಲ್ಲಿ ಹಳೆಯ ಬೆಂಗಳೂರಿಗರು ವಾಸಿಸುವ ಪ್ರದೇಶ. ಜಯನಗರ ವಿಧಾನಸಭಾ ಕ್ಷೇತ್ರದಿಂದ ಸೌಮ್ಯರೆಡ್ಡಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಸೌಮ್ಯ ರೆಡ್ಡಿ ಅವರು ಮಾಜಿ ಗೃಹ ಸಚಿವರೂ ಆದ ರಾಮಲಿಂಗಾರೆಡ್ಡಿ ಅವರ ಮಗಳು.
ಬ್ಯಾಟರಾಯನಪುರದಿಂದ ಕೃಷ್ಣ ಬೈರೇಗೌಡ
ಬ್ಯಾಟರಾಯನಪುರದಿಂದ ಒಕ್ಕಲಿಗ ಸಮುದಾಯದ ಕೃಷ್ಣ ಬೈರೇಗೌಡ, ಆರ್.ಆರ್. ನಗರದಿಂದ ಒಕ್ಕಲಿಗ ಸಮುದಾಯದ ಕುಸುಮಾ ಡಿಕೆ ರವಿ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಬ್ರಾಹ್ಮಣ ಸಮುದಾಯದ ಅನೂಪ್ ಅಯ್ಯಂಗಾರ್‌ಗೆ ಟಿಕೆಟ್ ನೀಡಲಾಗಿದೆ.
ಅದೇ ರೀತಿ ಹೆಬ್ಬಾಳದಲ್ಲಿ ಸುರೇಶ್ ಬಿ,ಎಸ್.ಗೆ ಟಿಕೆಟ್ ನೀಡಲಾಗಿದೆ. ಸರ್ವಜ್ಞ ನಗರದಿಂದ ಕ್ರಿಶ್ಚಿಯನ್ ಸಮುದಾಯದ ಕೆ.ಜೆ ಜಾರ್ಜ್, ಶಿವಾಜಿನಗರ ಮುಸ್ಲಿಂ ಸಮುದಾಯದ ರಿಜ್ವಾನ್ ಅರ್ಷದ್, ಶಾಂತಿನಗರದಿಂದ ಎನ್.ಎ ಹ್ಯಾರಿಸ್ ರವರಿಗೆ ಕಾಂಗ್ರೆಸ್ ನೀಡಲಾಗಿದೆ.
ರಾಜಾಜಿನಗರ ಕ್ಷೇತ್ರದಿಂದ ಪುಟ್ಟಣ್ಣ
ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಪುಟ್ಟಣ್ಣ ಅವರಿಗೆ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಗೋವಿಂದ ರಾಜನಗರದಿಂದ ಪ್ರಿಯಾಕೃಷ್ಣ ಹಾಗೂ ವಿಜಯನಗರದಿಂದ ಎ.ಕೃಷ್ಣಪ್ಪ ಹಾಗೂ ಬಸವನಗುಡಿಯಿಂದ ಯು.ಬಿ ವೆಂಕಟೇಶ್, ಮಹದೇವಪುರದಿಂದ ಟಿ.ನಾಗೇಶ್ ರವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.












Click it and Unblock the Notifications