Breaking: ಕೊಡಗು ನಿಷೇಧಾಜ್ಞೆ: ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆ
ಬೆಂಗಳೂರು, ಆಗಸ್ಟ್ 23: ಕೊಡಗಿನಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ತಿಯಾಗಿ ನಾನು ಅದನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಪ್ರತಿಭಟನೆಯನ್ನು ಮುಂದೂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೊಟ್ಟೆ ಎಸೆದ ಪ್ರಕರಣ, ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆ, ಕೊಡಗಿನಲ್ಲಿ ನಿಷೇಧಾಜ್ಞೆ ಸೇರಿ ಹಲವು ವಿಷಯಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಬಿಜೆಪಿ, ಕಾಂಗ್ರೆಸ್ 'ಮೊಟ್ಟೆ' ಜಗಳಕ್ಕೆ ಮತ್ತೊಂದು ವೇದಿಕೆ ಸಜ್ಜು
ಆಗಸ್ಟ್ 26 ರಂದು ಕಾಂಗ್ರೆಸ್ ಪ್ರತಿಭಟನೆ ಮತ್ತು ಬಿಜೆಪಿಯಿಂದ 'ಜನ ಜಾಗೃತಿ ಸಮ್ಮೇಳನ' ಘೋಷಣೆಯಾಗಿತ್ತು. ಈ ಹಿನ್ನೆಲೆ ಪೂರ್ವಭಾವಿಯಾಗಿ ಕೊಡಗು ಜಿಲ್ಲೆಯಲ್ಲಿ ನಾಲ್ಕು ದಿನ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಆಗಸ್ಟ್ 24 ರ ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27 ರ ಸಂಜೆ 6 ರವರೆಗೆ ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಿರಲಿದೆ.
ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ ಎಲ್ಲ ವಿಷಯಗಳಿಗೂ ಕೊಡಗು ಪೊಲೀಸರ ನಿರ್ಲಕ್ಷ್ಯ ಕಾರಣ, ಇದು ಸರಕಾರದ ಸಂಚು ಎಂದು ಸಿದ್ದರಾಮಯ್ಯ ಆರೋಪಿಸಿದರು.
"ಮಳೆ ಹಾನಿ ಪರಿಸ್ಥಿತಿ ನೋಡಲು ಹೋಗಿದ್ದೆ. ದಾರಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಒಂದು ಹತ್ತರಿಂದ ಹದಿನೈದು ಜನ ಇದ್ದರು. ಅಲ್ಲೂ ಕೂಡ ಪೊಲೀಸರು ಸುಮ್ಮನೆ ನಿಂತಿದ್ದರು. ಒಬ್ಬ ಬಂದು ನನ್ನ ಕಾರಿನ ಒಳಗಡೆ ಒಂದು ಭಿತ್ತಿ ಪತ್ರ ಹಾಕಿದರು.ಅವರನ್ನು ಪೊಲೀಸರು ಹಿಡಿಯುವುದಾಗಿ, ಬಂಧಿಸುವುದಾಗಲಿ ಮಾಡಲಿಲ್ಲ" ಎಂದರು.
'ಪ್ರತಿಭಟನೆ ನಡೆಯುವ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ...ಐದು ಸ್ಥಳಗಳಲ್ಲಿ ಪ್ರತಿಭಟನೆ ನಡೆದಿದೆ. ಕಪ್ಪು ಬಾವುಟ ಪ್ರದರ್ಶನ ನಡೆದಿದೆ. ಆದರೂ ಪೊಲೀಸರು ಏನು ಮಾಡಲಿಲ್ಲ" ಎಂದು ಆಕ್ರೋಶ ಹೊರಹಾಕಿದರು.

'ಅನಗತ್ಯವಾಗಿ ನನ್ನ ಮೆಲೆ ಮೊಟ್ಟೆ ಎಸೆಯವುದು, ಕಲ್ಲು ಎಸೆಯುವುದು, ಕಪ್ಪು ಬಾವುಟ ಪ್ರದರ್ಶಿಸುವುದು ಯಾಕೆ. ಅನವಶ್ಯಕವಾಗಿಯೇ ಇದನ್ನು ಮಾಡುತ್ತಿದ್ದಾರೆ. 2018ರಲ್ಲಿ ಅಧಿಕಾರ ಕಳೆದುಕೊಮಡ ಮೇಲೆ 2019ರಲ್ಲಿ ನಾನು ಕೊಡಗಿಗೆ ಹೋದಾಗ ಯಾಕೆ ಪ್ರತಿಭಟನೆ ನಡೆಸಲಿಲ್ಲ. ಕೊಡಗಿನ ಜನ ಒಳ್ಳೆಯರು. ನಾವು ಪ್ರತಿಭಟನೆ ಘೋಷಿಸಿದ್ದು ಕೂಡ ಜನರ ವಿರುದ್ಧವಲ್ಲ. ಸರಕಾರ, ಪೊಲೀಸ್ ಇಲಾಖೆ ವಿರುದ್ಧ" ಎಂದರು.
"ಇಂತಹ ಪರಿಸ್ಥಿತಿಯಲ್ಲಿ, ಬಿಜೆಪಿಯವರು ಕೂಡ ಸಮಾವೇಶ ಘೋಷಿಸಿದೆ ನಮ್ಮ ಪ್ರತಿಭಟನೆಯನ್ನು ತಪ್ಪು ದಾರಿಗೆ ಎಳೆಯುಲು ಕುಟಿಲ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಡಿಸಿ, ಎಸ್ಪಿ ಸೆಕ್ಷನ್ 144 ಜಾರಿ ಮಾಡಿದ್ದಾರೆ" ಎಂದರು.
"ಜಿಲ್ಲಧಿಕಾರಿ, ಎಸ್ಪಿ ಆದೇಶವನ್ನು ನಾನು ಉಲ್ಲಂಘಿಸಬಹುದು ಆದರೆ, ನಾನು ವಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿಯಾಗಿ ನಾನು ಅದನ್ನು ಮೀರಿ ಪ್ರತಿಭಟನೆ ಮಾಡುವುದಿಲ್ಲ. ಇದು ಪಕ್ಷದ ಕಾರ್ಯಕ್ರಮವಾಗಿದೆ, ಹೀಗಾಗಿ ನಾನು ನನ್ನ ಸ್ನೇಹಿತರು ಮತ್ತು ಪಕ್ಷದ ಅಧ್ಯಕ್ಷರ ಜೊತೆಗೆ ಮಾತನಾಡ ಇದನ್ನು ಮುಂದೂಡೂವ ಎಂದು ನಿರ್ಧಾರ ಮಾಡಿದ್ದೇವೆ. ಮುಂದೆ ನಾವು ಇದನ್ನು ಸ್ನೇಹಿತರ ಜೊತೆಗೆ ಚರ್ಚಿಸಿ ನಡೆಸುತ್ತೇವೆ" ಎಂದು ಮಾಹಿತಿ ನೀಡಿದರು.
ಮುಂದುವರೆದು, "ನಂಗೆ ಸವಾಲು ಹಾಕ್ತಾರೆ ಇವರು. ರೆಡ್ಡಿ ಬ್ರದರ್ಸ್ ಹೀಗೆ ಸವಾಲು ಹಾಕಿದ್ದಕ್ಕೆ ನಾನು ಪಾದಯಾತ್ರೆ ನಡೆಸಿದ್ದು. ನನಗೆ ಹೆದರಿಸಲು ಬರುತ್ತಾರೆ ಇವರು" ಎಂದರು.
"ನಾನು 26ಕ್ಕೆ ಕೊಡಗು ಚಲೋ ಘೋಷಣೆ ಮಾಡಿದ ಬಳಿಕ ಬಿಜೆಪಿ ಕೂಡ ಅಲ್ಲೇ ಜಾಗೃತಿ ಸಮಾವೇಶ ಮಾಡುತ್ತೇವೆ ಎಂದಿದ್ದಾರೆ. ಇದು ಅವರ ಇಬ್ಬಂದಿತನ ತೋರಿಸುತ್ತದೆ. ನಮ್ಮ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ತರಲು ಷಡ್ಯಂತ" ಎಂದರು.
"ನಮ್ಮ ಪಕ್ಷದ ಕಾರ್ಯಕರ್ತರು ಕಪ್ಪು ಬಾವುದ ಪ್ರದರ್ಶಿಸಿದಕ್ಕೆ ಬಂಧಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗದಗ್, ಹಾವೇರಿಗಳಲ್ಲಿ ಜಾಮೀನು ರಹಿತ ಬಂಧನ ಮಾಡಿದ್ದಾರೆ. ಆದರೆ ಕೊಡಗು ಕಾರ್ಯಕರ್ತರನ್ನು ಬಂಧಿಸಿಲ್ಲ. ಕೊಡಗಿನಲ್ಲಿ ಪೊಲೀಸರು ಯಾವುದೇ ಕೆಲಸ ಮಾಡುತ್ತಿಲ್ಲ. ಸರಕಾರ ಅವರಿಗೆ ಪ್ರತಿಭಟನೆ ತಡೆಯದಂತೆ ಸೂಚನೆ ನೀಡಿತ್ತು' ಎಂದು ಬಿಜೆಪಿ ಮೇಲೆ ಆರೋಪಿಸಿದರು.
ಕೊಡಗು ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಸೋಮವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ. ಈ ದಿನಗಳಲ್ಲಿ ಯಾವುದೇ ಪ್ರತಿಭಟನೆ, ಜಾಥಾ, ಮೆರವಣಿಗೆ, ಕಪ್ಪುಬಾವುಟ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಐದು ಮತ್ತು ಅದಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರದಂತೆ ನಿರ್ಬಂಧ ವಿಧಿಸಲಾಗಿದೆ.
ಆಗಸ್ಟ್ 18ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿ, ಮೊಟ್ಟೆ ಎಸೆದಿರುವ ಘಟನೆಗೆ ಪ್ರತಿರೋಧವಾಗಿ ಕಾಂಗ್ರೆಸ್ ಆ.26 ರಂದು ಕೊಡಗು ಚಲೋ, ಕೊಡಗು ಎಸ್ಪಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ನಡೆಸಲು ಕರೆ ನೀಡಿತ್ತು. ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವುದಾಗಿ ಹೇಳಿತ್ತು. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಪ್ರತಿಯಾಗಿ ಬಿಜೆಪಿ ಆಯೋಜಿಸಿದ್ದ 'ಜನಜಾಗೃತಿ ಸಮಾವೇಶ'ಕ್ಕೂ ಒಂದು ಲಕ್ಷ ಜನರನ್ನು ಸೇರಿಸುವುದಾಗಿ ಬಿಜೆಪಿಯೂ ತಿಳಿಸಿತ್ತು.