ಬಿಜೆಪಿ ನಾಯಕರ ತಲೆ ಕಡಿಯುವ ಮಾತನಾಡಿದ ಕಾಂಗ್ರೆಸ್ ನಾಯಕ!
ಬೆಂಗಳೂರು, ಏಪ್ರಿಲ್ 04 : 'ಎಷ್ಟು ಕೇಸ್ ಆದ್ರು ಸರಿ, ಎಷ್ಟು ತಲೆಗಳು ಉದುರಿದ್ರು ಸರಿ. ನನ್ನ ಕಾಂಗ್ರೆಸ್‌ನಿಂದ ಕಿತ್ತು ಹಾಕಿದ್ರು ಪರ್ವಾಗಿಲ್ಲ ಬಿಜೆಪಿಯವರನ್ನು ಈ ಬಾರಿ ಬಿಡಲ್ಲ' ಎಂದು ಕಾಂಗ್ರೆಸ್ ನಾಯಕ ಅಮಾನುಲ್ಲಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಜಿ ಬಿಬಿಎಂಪಿ ಸದಸ್ಯ, ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ಕಾಂಗ್ರೆಸ್ ನಾಯಕ ಅಮಾನುಲ್ಲಾ ಖಾನ್ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾತನಾಡಿದ ಖಾನ್, ಬಿಜೆಪಿ ನಾಯಕರ ತಲೆ ಕಡೆಯುವ ಘೋಷಣೆಯನ್ನು ಮಾಡಿದ್ದಾರೆ.
ಅಮಾನುಲ್ಲಾ ಖಾನ್ ಅವರು ಕೆ.ಆರ್.ಪುರಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಬಸವರಾಜು ಅವರ ಆಪ್ತರು. ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿ ನಾಯಕರ ತಲೆ ಕಡೆಯುತ್ತೀನಿ ಎಂದು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿಯೇ ಘೋಷಿಸಿದ್ದಾರೆ.

'ಎಷ್ಟು ಕೇಸ್ ಆದ್ರು ಸರಿ, ಎಷ್ಟು ತಲೆಗಳು ಉದುರಿದ್ರು ಸರಿ. ನನ್ನ ಕಾಂಗ್ರೆಸ್‌ನಿಂದ ಕಿತ್ತುಹಾಕಿದ್ರು ಪರ್ವಾಗಿಲ್ಲ. ಬಿಜೆಪಿಯವರನ್ನು ಈ ಬಾರಿ ಬಿಡಲ್ಲ. ಸರ್ವನಾಶ ಮಾಡುವ ತನಕ ಬಿಡುವುದಿಲ್ಲ' ಎಂದು ಹೇಳಿಕೆ ನೀಡಿದ್ದಾರೆ.
'ವಿಜಿನಾಪುರದಲ್ಲಿ ಬಿಜೆಪಿ ಅವರು ಸುಮ್ಮನಿರಬೇಕು. ಸ್ವಲ್ಪ ಮೆರೆದ್ರು ಅವನ ಕಥೆ ಮುಗಿಸ್ತೀನಿ' ಎಂದು ಹೇಳಿರುವ ಖಾನ್, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಅವಾಚ್ಯ ಶಬ್ದಗಳಿಂದ ಟೀಕಿಸಿದ್ದಾರೆ.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ, ಮಾಜಿ ಬಿಬಿಎಂಪಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಸುಗುಮಾರ್ ಅವರು ಅಮಾನುಲ್ಲಾ ಹೇಳಿಕೆಗೆ ಚಪ್ಪಾಳೆ ತಟ್ಟಿದ್ದಾರೆ.












Click it and Unblock the Notifications