ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಆಸ್ತಿ ವಿವರದಲ್ಲಿ ಸುಳ್ಳು ಮಾಹಿತಿ: ಎಎಪಿ ದಾಖಲೆ ಬಿಡುಗಡೆ
ಬೆಂಗಳೂರು, ಏಪ್ರಿಲ್ 24: ಚುನಾವಣಾ ಕಣ ರಂಗೇರಿದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಆಸ್ತಿ ವಿಚಾರದಲ್ಲಿ ಹಲವು ಆರೋಪಗಳು ಕೇಳಿ ಬಂದಿವೆ. ಬೆಂಗಳೂರಿನ ಸಿ.ವಿ.ರಾಮನ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಕಾರ್ಪೊರೇಟರ್ ಆನಂದ್ ಕುಮಾರ್‌ರವರು ನಾಮಪತ್ರದಲ್ಲಿ ಹಲವು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.
ನಗರದಲ್ಲಿ ಸೋಮವಾರ ಪಕ್ಷದ ಕಚೇರಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಸಿ.ವಿ.ರಾಮನ್ ಕ್ಷೇತ್ರದ ಅಭ್ಯರ್ಥಿ ಮೋಹನ್ ದಾಸರಿ ಅವರು ತಾವು ಮಾಡಿದ ಆರೋಪಕ್ಕೆ ಸಂಬಂಧಿಸಿ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕುಮಾರ್‌ರವರು 2015ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಮಗೆ ಯಾವುದೇ ಆದಾಯವಿಲ್ಲವೆಂದು ಘೋಷಿಸಿಕೊಂಡಿದ್ದರು. ಆದರೆ ಈ ಬಾರಿಯ ನಾಮಪತ್ರದಲ್ಲಿ, ಉಳಿತಾಯ ಖಾತೆಯಲ್ಲಿ 2.49 ಲಕ್ಷ ರೂ., ನಗದು ರೂಪದಲ್ಲಿ 2.25 ಲಕ್ಷ ರೂ. ಹಾಗೂ ತಾಯಿಯ ಬಳಿ 8.8 ಲಕ್ಷ ರೂ. ಮೌಲ್ಯದ 160 ಗ್ರಾಂ ಚಿನ್ನವಿದೆ ಎಂದಿದ್ದಾರೆ. ಮಣಿಕಂಠನ್ ಎಂಬುವವರಿಗೆ 16.5 ಲಕ್ಷ ರೂ. ಸಾಲ ನೀಡಿದ್ದಾಗಿ ಅವರು ಉಲ್ಲೇಖಿಸಿದ್ದಾರೆ ಎಂದರು.
ಕೆಲವೇ ವರ್ಷದಲ್ಲಿ 30 ಲಕ್ಷ ರೂ. ಆಸ್ತಿ
ಆನಂದ್ ಕುಮಾರ್ ಒಟ್ಟು 30.04 ಲಕ್ಷ ರೂ. ಆಸ್ತಿ ಇರುವುದಾಗಿ ತಿಳಿಸಿದ್ದಾರೆ. 29.57 ಲಕ್ಷ ರೂ. ಆದಾಯವಿದೆಯೆಂದು ಐಟಿಆರ್ ಸಲ್ಲಿಸಿದ್ದಾರೆ. 2015ರಲ್ಲಿ ಯಾವುದೇ ಆದಾಯವಿಲ್ಲವೆಂದು ಹೇಳಿದ್ದ ಅವರು ಈಗ 30 ಲಕ್ಷ ರೂ. ಆಸ್ತಿ ಹೊಂದಿದ್ದಾರೆ. ಇನ್ನು 2015ರ ಪ್ರಮಾಣಪತ್ರದಲ್ಲಿ 3ನೇ ತರಗತಿ ಪಾಸಾಗಿದ್ದೇನೆ ಎಂದ್ದಿದ್ದ ಅವರು, ಈಗಿನ ಪ್ರಮಾಣ ಪತ್ರದಲ್ಲಿ 8ನೇ ತರಗತಿ ಎಂದು ಘೋಷಿಸಿದ್ದಾರೆ ಎಂದು ದಾಸರಿ ವಿವರಿಸಿದರು.
ಕಾರ್ಪೊರೇಟ್‌ಗೆ ಸಿಗುವುದು 8,000 ಸಾವಿರ ಸಂಬಳ. ಟಿಎ, ಡಿಎ ಎಲ್ಲ ಸೇರಿ 15,000 ಆಗಬಹುದು. ಬೇರೆ ಯಾವುದೇ ಆದಾಯವಿಲ್ಲದೇ ಇಷ್ಟು ಆಸ್ತಿ ಹೇಗೆ ಮಾಡಲು ಸಾಧ್ಯ?. ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆಂದು ಹೇಳಿದ್ದಾರೆ. ಅದರ ಬಾಡಿಗೆಗೆ ಅವರು ಖರ್ಚು ಮಾಡಿಲ್ಲವೇ? ಆದಾಯವನ್ನೆಲ್ಲ ಆಸ್ತಿಗೇ ಖರ್ಚು ಮಾಡಿದ್ದರೆ, ಮನೆಯ ಬಾಡಿಗೆ ಹಾಗೂ ಬೇರೆ ಖರ್ಚುಗಳಿಗೆ ಹಣ ಎಲ್ಲಿಂದ ಬಂತು?ಎಂದು ಪ್ರಶ್ನಿಸಿದ್ದಾರೆ.

ಆನಂದ್ ಅವರು ಸ್ವಂತ ಮನೆ ಕಟ್ಟಿಸುತ್ತಿರುವ ಬಗ್ಗೆ ಕ್ಷೇತ್ರದ ಜನತೆಗೆ ತಿಳಿದಿದೆ. ಆದರೆ ಅದರ ಮಾಹಿತಿಯನ್ನು ಏಕೆ ನೀಡಿಲ್ಲ? ಆನಂದ್ ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದೆ. ಈ ಕುರಿತು ಹೈಕೋರ್ಟ್ ಮೊರೆ ಹೋಗಲು ಎಎಪಿ ಪಕ್ಷ ನಿರ್ಧರಿಸಿದೆ ಎಂದು ತಿಳಿಸಿದರು.
ಲೋಕಾಯುಕ್ತದ ವಿಚಾರಣೆಗೆ ಹಾಜರಾಗಿಲ್ಲ
ಆನಂದ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣವಿದೆ. ಲೋಕಾಯುಕ್ತವು ಎಷ್ಟೇ ನೋಟಿಸ್ ಜಾರಿ ಮಾಡಿದರೂ ಇವರು ವಿಚಾರಣೆಗೆ ಹಾಜರಾಗಿಲ್ಲ. ಅದು ಎಸ್‌ಸಿ ಎಸ್‌ಟಿ ಸಮುದಾಯದವರಿಗೆ ಸಂಬಂಧಿಸಿದ ಒಂಟಿ ಮನೆ ಯೋಜನೆಯಲ್ಲಾದ 8 ಕೋಟಿ ರೂ. ಮೊತ್ತದ ಭ್ರಷ್ಟಾಚಾರದ ಪ್ರಕರಣ. ಕಾನೂನುಗಳನ್ನು ಉಲ್ಲಂಘಿಸಿ ಒಂದೇ ಮನೆ ಮೇಲೆ ಹಲವು ಸಾಲ ಮಾಡಲಾಗಿದೆ ಹಾಗೂ ಅನರ್ಹರಿಗೂ ಮನೆ ನೀಡಲಾಗಿದೆ. ತಪ್ಪು ಮಾಡಿಲ್ಲ ಎನ್ನುವುದಾದರೆ ಲೋಕಾಯುಕ್ತಕ್ಕೆ ಹೋಗಲು ಹೆದರಿಕೆಯೇಕೆ? ಎಂದು ದಾಸರಿ ಕೇಳಿದರು.
ಅಷ್ಟೇ ಅಲ್ಲದೇ 2016ರ ಮಾರ್ಚ್‌ನಲ್ಲಿ "ಆನಂದ್ ಕುಮಾರ್‌ರವರನ್ನು ಏಕೆ ಅನರ್ಹ ಮಾಡಬಾರದು? ಎಂದು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಪ್ರಶ್ನೆ ಕೇಳಿತ್ತು. ಅವರ ಉದ್ಯಮದ ಜಾಹೀರಾತು ನೀಡಲು ಅನುಮತಿ ಪಡೆದಾಗ ಅವರು ಉದ್ಯಮ ನಡೆಸುತ್ತಿರುವುದು ಬಯಲಾಗಿತ್ತು. ಇದಕ್ಕಾಗಿ ಹೈಕೋರ್ಟ್ ಈ ಪ್ರಶ್ನೆ ಕೇಳಿತ್ತು ಎಂದರು.
ಲಿಂಗಾಯತ ಸಿಎಂ ವಿಚಾರದಲ್ಲಿ ರಾಜಕೀಯ: ಕಡೆಗಣನೆ
ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಲಿಂಗಾಯತ ಸಮುದಾಯದ ಸಿಎಂ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಬಿಜೆಪಿಯು ಹಿರಿಯ ನಾಯಕರನ್ನೆಲ್ಲ ಕಡೆಗಣಿಸುತ್ತಿದೆ. ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಈಗಾಗಲೇ ಬಿಜೆಪಿ ತೊರೆದಿದ್ದಾರೆ. ಈಶ್ವರಪ್ಪನವರಿಗೆ ಟಿಕೆಟ್ ನೀಡಿಲ್ಲ.
ವಸತಿ ಸಚಿವ ವಿ. ಸೋಮಣ್ಣರವರನ್ನು ಹರಕೆಯ ಕುರಿ ಮಾಡಿ ಬೇರೆ ಎರಡು ಕ್ಷೇತ್ರಗಳಿಗೆ ಕಳುಹಿಸಿದ್ದಾರೆ. ಇದರಲ್ಲಿ ಸಂಘ ಪರಿವಾರದ ಹುನ್ನಾರ ಕಾರ್ಯರೂಪಕ್ಕೆ ಬರುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಯಡಿಯೂರಪ್ಪನವರ ಮಕ್ಕಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ಆದರೆ ಈಶ್ವರಪ್ಪ, ಸೋಮಣ್ಣರವರ ಮಕ್ಕಳಿಗೆ ಸಿಕ್ಕಿಲ್ಲ. ಬಿಜೆಪಿಯು ಎಲ್ಲ ಸಮುದಾಯಗಳನ್ನು ಮೆಟ್ಟಿಲಾಗಿ ಬಳಸಿಕೊಂಡು, ಒಂದೊಂದೇ ಸಮುದಾಯಗಳನ್ನು ತಿರಸ್ಕಾರ ಮಾಡುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಠಿಯಲ್ಲಿ ಸಿ.ವಿ.ರಾಮನ್ ನಗರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಲೋಕೇಶ್, ಮಂಜುನಾಥ್ ಗೌಡ, ಜಗದೀಶ್ ಬಾಬು ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications