ಬಿಬಿಎಂಪಿ ಚುನಾವಣೆ ಮುನ್ನವೇ ಸೋಲು ಒಪ್ಪಿದ ಕಾಂಗ್ರೆಸ್: ಅಶ್ವತ್ಥ ನಾರಾಯಣ
ಬೆಂಗಳೂರು ಆಗಸ್ಟ್ 06: ಬಿಬಿಎಂಪಿ ಚುನಾವಣೆ ಹಿನ್ನೆಲೆ ಸರ್ಕಾರ ಮಾಡಿರುವ ವಾರ್ಡ್ ವಿಂಗಡಣೆ, ಮೀಸಲಾತಿ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಬೇಕು. ಅದನ್ನು ಬಿಟ್ಟು ಚುನಾವಣೆ ನಡೆಯದಂತೆ ಕಾಂಗ್ರೆಸ್ ಗುಂಡಾಗಿರಿ ಸಂಸ್ಕೃತಿ ಪ್ರದರ್ಶಿಸುತ್ತಿದೆ ಎಂದು ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಆರೋಪಿಸಿದರು.
ಶನಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ' ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವಿಚಾರದಲ್ಲಿ ರಾಜ್ಯ ಸರ್ಕಾರ ಕಾನೂನಿನ ಪ್ರಕಾರ ಕ್ರಮ ಕೈಗೊಂಡಿದೆ. ಕಾನೂನು ಉಲ್ಲಂಘನೆ ಆಗಿದ್ದಲ್ಲಿ ಅಥವಾ ಸರ್ಕಾರದ ನಿರ್ಧಾರದ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಅವುಗಳನ್ನು ನಿಯಮದಡಿ ತೋರ್ಪಡಿಸಿಕೊಳ್ಳಬೇಕು ಅದನ್ನು ಬಿಟ್ಟು ಚುನಾವಣೆಯೇ ನಡೆಯದಂತೆ ನೋಡಿಕೊಳ್ಳುವುದು ಸರಿಯಲ್ಲ ಎಂದರು.
ಬಿಬಿಎಂಪಿ ಚುಣಾವಣೆ ವಿಚಾರದಲ್ಲಿ ಗುಂಡಾಗಿರಿ ಸಂಸ್ಕೃತಿ ಮೂಲಕ ಕಾಂಗ್ರೆಸ್ ಪಾಲಿಕೆ ಚುನಾವಣೆಗೂ ಮುನ್ನವೇ ಸೋಲು ಒಪ್ಪಿಕೊಂಡಿದೆ. ಆದರೆ ಬಿಜೆಪಿ ನಡೆಸಿಯೇ ತೀರುತ್ತದೆ. ಆ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾಜಿ ಸಚಿವರು ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಕಾನೂನು ವ್ಯವಸ್ಥೆ, ಸಾಂವಿಧಾನ ಬಗ್ಗೆ ಅರಿವಿಲ್ಲದಿರುವುದು ಖಂಡನೀಯ. ಸಿದ್ದರಾಮಯ್ಯ ಅವರು ಪದೇ ಪದೆ ನಿವೃತ್ತಿಯ ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಎಲ್ಲ ಕಡೆ ನೆಲೆ ಕಳೆದುಕೊಳ್ಳುತ್ತಿದೆ. 75 ವರ್ಷಕ್ಕಾದರೂ ಅವರು ಮಾರ್ಗದರ್ಶಿ ಆಗಬೇಕಿತ್ತು. ಅವರ ಹೇಳಿಕೆಯನ್ನು ಅವರು ಪಾಲಿಸಬೇಕು ಎಂದು ಹೇಳಿದರು.

ಬಿಜೆಪಿ ವ್ಯಕ್ತಿ ಪೂಜೆ ಮಾಡಲ್ಲ
ಬಿಜೆಪಿ ಪಕ್ಷದ ಉತ್ಸವ ಮಾಡುತ್ತದೆ. ನಾವು ವ್ಯಕ್ತಿಪೂಜೆ ಮಾಡುವುದಿಲ್ಲ. ಪಕ್ಷ ಎಂದರೆ ಅದು ಒಂದು ಮನೆ ಇದ್ದಂತೆ. ಮನೆ ಎಂದ ಮೇಲೆ ಸಣ್ಣಪುಟ್ಟ ಗೊಂದಲ ಸಹಜ. ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಸಿದ್ದರಾಮೋತ್ಸವ ಕುರಿತ ಸುದ್ದಿಗಾರರ ಪ್ರಶ್ನೆಗೆ ಅಶ್ವತ್ಥ ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಅವರ ಪ್ರಕಾರ ಮುಸಲ್ಮಾನ ಮಹಿಳೆಯರು ಜನಪ್ರತಿನಿಧಿ ಆಗಬಾರದೇ? ಅವರೆಲ್ಲರದು ರಾಜಕೀಯ ಸ್ಟಂಟ್. ವೇದಿಕೆಗಳನ್ನು ಬಳಸದೆ ಕಾನೂನು ಕೈಗೆ ತೆಗೆದುಕೊಳ್ಳುವ ಮತ್ತು ಬಾಯಿಗೆ ಬಂದಂತೆ ಮಾತನಾಡಿ ವಿಧಾನಸೌಧದ ಘನತೆಯನ್ನು ಹಾಳು ಮಾಡಿದ್ದು ಖಂಡನೀಯ. ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತಾಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಖಂಡನೀಯ ಕೈ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಬೆಂಗಳೂರಿಗೆ ಪ್ರತ್ಯೇಕ ಕಾಯಿದೆ ತರುವ ಬೇಡಿಕೆ ಇತ್ತು. ನೂತನ ಕಾಯಿದೆಯನ್ನು ಸರ್ಕಾರ ಜಾರಿಗೊಳಿಸಿದೆ. ಕೋರ್ಟ್ ತೀರ್ಪಿನ ಆಧಾರದಡಿ ಡಿಲಿಮಿಟೇಶನ್ ಮಾಡಿದೆ. ಎಲ್ಲ ಸವಾಲಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸಿದ್ದು, ಆ ನಿಟ್ಟಿನಲ್ಲಿ ಉತ್ತಮ ಕೆಲಸಗಳು ಆಗಿವೆ ಎಂದು ಸರ್ಕಾರದ ನಡೆ ಕುರಿತು ಸಮರ್ಥಿಸಿಕೊಂಡರು.
ಮೀಸಲಾತಿ ವಿಚಾರದಲ್ಲೂ ಪುನರ್ ಪರಿಶೀಲನೆ ಅನಿವಾರ್ಯವಾಗಿತ್ತು. 243 ಸದಸ್ಯರ ಸಂಖ್ಯೆ ಅನುಗುಣವಾಗಿ ಸಮಿತಿ ರಚಿಸಿ ಮೀಸಲಾತಿ ನಿಗದಿ ಮಾಡಲಾಗಿದೆ. 50 ಶೇಕಡಾ ಒಬಿಸಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಟ್ಟಿದೆ. ಸಾಮಾನ್ಯ ವರ್ಗಕ್ಕೆ ಶೇ 50, ಮಹಿಳೆಯರಿಗೆ ಶೇ 50 ಮೀಸಲಾತಿ ಕೊಟ್ಟಿದೆ. ಇದಕ್ಕೆ ವಿರೋಧ, ಆಕ್ಷೇಪಣೆ ಇದ್ದರೆ ಅದಕ್ಕೆ ಅವಕಾಶವಿದೆ ಎಂದರು.

1 ಘಟಕವಾಗಿ ಬೆಂಗಳೂರು ಪರಿಗಣನೆ
ಬಿಜೆಪಿಯಲ್ಲಿ ವಲಸಿಗರು, ಮೂಲ ಪಕ್ಷದವರು ಎಂಬ ವ್ಯತ್ಯಾಸ ಇಲ್ಲ. ಕಾನೂನಿನ ಪ್ರಕಾರ ಹಾಗೂ ಕಾಲಬದ್ಧವಾದ ರೀತಿಯಲ್ಲಿ ಚುನಾವಣೆಗೆ ಸಿದ್ಧರಾಗಿದ್ದೇವೆ. ಕಾನೂನು ಪ್ರಕಾರ ಶೇ.50 ಮಹಿಳಾ ಮೀಸಲಾತಿಯನ್ನು ನೀಡಿದ್ದೇವೆ. ಇಡೀ ಬೆಂಗಳೂರನ್ನು ಒಂದು ಘಟಕವಾಗಿ ಪರಿಗಣಿಸಿ 243ಕ್ಕೆ ಯಾವ ಪ್ರಕಾರ ಎಷ್ಟು ಮೀಸಲಾತಿ ಕೊಡಬೇಕೆಂದು ಪರಿಗಣಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಘಟಕ ಪರಿಗಣಿಸಲು ಅವಕಾಶವಿಲ್ಲ ಎಂದು ಅವರು ವಿವರಿಸಿದರು.

ಕಾಂಗ್ರೆಸ್‌ನದ್ದು ದ್ವಂದ್ವ ನೀತಿ
ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಎಂ. ಸತೀಶ್ ರೆಡ್ಡಿ ಮಾತನಾಡಿ, ಸರ್ಕಾರದ ಮೀಸಲಾತಿ ನಿರ್ಧಾರ ವಿರುದ್ಧ ಗಾಂಧಿನಗರದ ಶಾಸಕರು ಪ್ರತಿಭಟನೆ ಮಾಡಿದ್ದರು. ಆದರೆ ಅವರು ಆಕ್ಷೇಪಣೆ ಸಲ್ಲಿಸಿರಲಿಲ್ಲ. 2015ರಲ್ಲಿ ಜೆಡಿಎಸ್‍ನಲ್ಲಿದ್ದ ಜಮೀರ್ ಅವರು ಹೆಚ್ಚು ಮಹಿಳಾ ಪ್ರತಿನಿಧಿಗಳ ಬಗ್ಗೆ ಪ್ರಶ್ನೆ ಎತ್ತಿರಲಿಲ್ಲ. ಈಗ ಯಾಕೆ ಮಾತನಾಡುತ್ತಾರೆ? ಎಂದು ಅಶ್ವತ್ಥ ಪ್ರಶ್ನಿಸಿದರು.
ಹಿಂದಿನ ಚುನಾವಣೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಹೆಚ್ಚು ಮಹಿಳೆಯರಿಗೆ ಅವಕಾಶ ಕೊಟ್ಟಿದ್ದರು. ಆದರೂ ನಾವು ಗೆದ್ದು ಬಂದಿದ್ದೇವೆ. ಕಾಂಗ್ರೆಸ್ಸಿಗರು ಮಹಿಳಾ ವಿರೋಧಿಗಳು. ಪಾಲಿಕೆ ಚುನಾವಣೆಯಲ್ಲಿ ಮೀಸಲಾತಿ ಮೂಲಕ ಮಹಿಳೆಯರಿಗೆ ಹೆಚ್ಚು ಅವಕಾಶ ಕೊಟ್ಟಿದ್ದನ್ನು ಸ್ವಾಗತಿಸಬೇಕಿತ್ತು. ಅದನ್ನು ಮಾಡದ ವಿರೋಧಿಸುತ್ತಿರುವುದು ಕಾಂಗ್ರೆಸ್ ದ್ವಂಧ್ವ ನೀತಿ ಅನುಸರಿಸಿದೆ ಎಂಬುದನ್ನು ತೋರ್ಪಡಿಸುತ್ತದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಕ್ಷಮೆಯಾಚಿಸಬೇಕು
ನಾವು ಚುನಾವಣೆಗೆ ಸಿದ್ಧರಿದ್ದೇವೆ. ಶಾಸಕರ, ಸಂಸದರ, ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನ ಜನರು ಬಿಜೆಪಿ ಪರ ಇದ್ದಾರೆ. 243ರಲ್ಲಿ 150ಕ್ಕಿಂತ ಹೆಚ್ಚು ಸೀಟು ಬಿಜೆಪಿ ಗೆಲ್ಲುವುದಾಗಿ ಸಮೀಕ್ಷೆ ತಿಳಿಸಿದೆ. ಚುನಾವಣೆ ಮುಂದೂಡುವ ಏಕೈಕ ಅಜೆಂಡ ಕಾಂಗ್ರೆಸ್‍ನದ್ದು. ಕಾಂಗ್ರೆಸ್ ಗೂಂಡಾಗಿರಿಯನ್ನು ಜನರು ಗಮನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಬೆಂಗಳೂರಿನ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.












Click it and Unblock the Notifications