ಡಿಕೆಶಿ ಬಳಿಕ ಜಮೀರ್ ಅಹ್ಮಮದ್ ಖಾನ್‌ಗೆ ನಾಮಪತ್ರ ಸಂಕಷ್ಟ
ಬೆಂಗಳೂರು, ಏಪ್ರಿಲ್ 21: ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಳಿಕ ಈಗ ಬೆಂಗಳೂರು ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ಅವರ ನಾಮಪತ್ರ ಸಲ್ಲಿಕೆಗೆ ಸಂಬಂಧ ಈಗ ಅವರಿಗೆ ಸಂಕಷ್ಟ ಎದುರಾಗಿದೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದರುವ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ನವಭಾರತ ಸೇನಾ ಪಾರ್ಟಿಯ ರುಕ್ಮಂಗದ ಎಂಬುವವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಜಮೀರ್ ಅಹಮದ್ ಖಾನ್ ಅವರು ತಾವು ಸಲ್ಲಿಸಿರುವ ನಾಮಪತ್ರದಲ್ಲಿ ಕೆಲವು ದೋಷಗಳನ್ನು ಮಾಡಿದ್ದಾರೆ. ನಿಯಮಗಳ ಪ್ರಕಾರ ಅವರು ಯಾವುದೇ ಅಭ್ಯರ್ಥಿಯು ತನಗೆ ಸಂಬಂಧಿಸಿದ ಮಾಹಿತಿಗಳನ್ನು ಮರೆಮಾಚಬಾರದು ಅಥವಾ ಅಪೂರ್ಣ ಮಾಹಿತಿ ನೀಡಬಾರದು. ಆದರೆ, ಜಮೀರ್ ಅವರು ಇಂಥ ತಪ್ಪುಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ತಾವು ಸಲ್ಲಿಸಿರುವ ನಾಮಪತ್ರದಲ್ಲಿ ಅವರು ಒಂದು ಕಾಲಂ ಖಾಲಿ ಬಿಟ್ಟಿದ್ದಾರೆ. ಇದು ಕೂಡ ತಪ್ಪು. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ನವಭಾರತ ಸೇನಾ ಪಾರ್ಟಿಯ ರುಕ್ಮಂಗದ ಅವರು ಆಗ್ರಹಿಸಿದ್ದಾರೆ.
ನವಭಾರತ ಸೇನಾ ಪಾರ್ಟಿಯ ಪರವಾಗಿ ರುಕ್ಮಾಂಗದ ಅವರು ಜಮೀರ್ ಅಹಮದ್ ಖಾನ್ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಶಾಸಕ ಜಮೀರ್ ಅಹಮದ್ ಖಾನ್ ಅವರು ಹಿಂದೆ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಮ್ಮನ್ನು ಆಧರಿಸಿರುವ ತಮ್ಮ ಕುಟುಂಬ ಸದಸ್ಯರ ಪಟ್ಟಿಯಲ್ಲಿ ತಮ್ಮ ತಾಯಿಯ ಹೆಸರನ್ನು ಸೇರಿಸಿದ್ದರು. ಆದರೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ತಾಯಿಯ ಹೆಸರನ್ನು ಸೇರಿಸಿಲ್ಲ. ಇದು ಮೊದಲನೇ ಲೋಪವಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ಸವೋಚ್ಚ ನ್ಯಾಯಲಯ ಯಾವುದೇ ಅಭ್ಯರ್ಥಿಗಳು ನಾಮಪತ್ರದಲ್ಲಿ ಯಾವುದೇ ಮಾಹಿತಿಗಳನ್ನು ಮರೆಮಾಚಬಾರದು ಅಥವಾ ಯಾವುದೇ ಮಾಹಿತಿಯನ್ನು ಅಪೂರ್ಣವಾಗಿ ನೀಡಬಾರದು ಎಂದು ಹೇಳಿದೆ. ಆದರೆ ಜಮೀರ್ ಅಹಮದ್ ಖಾನ್ ಅವರು ತಮ್ಮ ತಾಯಿಯ ಹೆಸರನ್ನು ಮರೆಮಾಚಿರುವುದು ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನಾಮಪತ್ರದಲ್ಲಿ ಒಂದು ಕಾಲಂ ಖಾಲಿ ಬಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಮೀರ್ ಅವರು ನಾಮಪತ್ರದಲ್ಲಿರುವ ಯಾವುದೇ ಕಾಲಂ ಅನ್ನು ಖಾಲಿ ಬಿಡುವಂತಿಲ್ಲ. ಇದೂ ಸಹ ನಾಮಪತ್ರ ಸಲ್ಲಿಕೆಯ ನಿಯಮಗಳಿಗೆ ವಿರುದ್ಧವಾಗಿದ್ದು ಇದನ್ನೂ ಪರಿಗಣಿಸಿ ಜಮೀರ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿದಿರುವ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರೂ ಆಗಿದ್ದ ಭಾಸ್ಕರ್ ರಾವ್ ಅವರು, ನವಭಾರತ ಸೇನೆಯ ರುಕ್ಮಂಗದ ಅವರು ಹೇಳಿರುವಂತೆ ಜಮೀರ್ ಅವರ ನಾಮಪತ್ರದಲ್ಲಿ ಲೋಪಗಳಿವೆ. ಅಪೂರ್ಣ ಮಾಹಿತಿ ಕೊಡೋದು, ಸುಳ್ಳು ಮಾಹಿತಿ ಕೊಡೋದು ಸರಿಯಲ್ಲ. ಹಾಗಾಗಿ, ಜಮೀರ್ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಭಾಸ್ಕರ್ ರಾವ್ ಅವರು ಈಗ ಜಮೀರ್ ಅವರ ಪ್ರತಿಸ್ಪರ್ಧಿಯಾಗಿದ್ದಾರೆ.
2008ರಿಂದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜಮೀರ್ ಅಹಮದ್ ಖಾನ್ ಜಯಗಳಿಸುತ್ತಾ ಬಂದಿದ್ದು, ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಮೊದಲು ಜೆಡಿಎಸ್‌ನಲ್ಲಿದ್ದ ಅವರು ಆನಂತರ 2018ರಲ್ಲಿ ಕಾಂಗ್ರೆಸ್ ಸೇರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆಗಲೂ ಜಯ ಸಾಧಿಸಿದ್ದರು. ಜಮೀರ್ ಅಹಮದ್ ಖಾನ್ ವಿರುದ್ಧ ಶ್ರೀರಾಮಸೇನೆಯೂ ಕೂಡ ಚುನಾವಣಾಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದೆ.












Click it and Unblock the Notifications