Namma Metro Big Update: ನಾಗಸಂದ್ರ-ಮಾದಾವರ ಮಾರ್ಗ ತೆರೆಯಲು ಅ.3 & 4ರಂದು ಗ್ರೀನ್ ಸಿಗ್ನಲ್
ಬೆಂಗಳೂರು, ಸೆಪ್ಟಂಬರ್ 26: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿಸ್ತರಿಸಿದ ನಮ್ಮ ಮೆಟ್ರೋ ನಾಗಸಂದ್ರ ಮತ್ತು ಮಾದಾವರ ಹಸಿರು ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಮಹೂರ್ತ ನಿಗದಿ ಆಗಲಿದೆ. ಈ ಕುರಿತು ಇದೇ ಅಕ್ಟೋಬರ್ 3 ಮತ್ತು 4ರಂದು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (CMRS) ತಪಾಸಣೆ ನಡೆಸಿ ಒಪ್ಪಿಗೆ ನೀಡಲಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೋ ಹಸಿರು ಮಾರ್ಗವು ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರವರೆಗೆ ಮಾತ್ರ ಕಾರ್ಯಾಚರಣೆ ನಡೆಸಿತ್ತು. ಇತ್ತೀಚೆಗೆ ನಾಗಸಂದ್ರದಿಂದ ಮಾದಾವರವರೆಗೆ 3.7 ಕಿಲೋ ಮೀಟರ್ ಮಾರ್ಗ ವಿಸ್ತರಣೆ ಮಾಡಲಾಗಿದೆ. ಇದರ ಸಿವಿಲ್ ಕೆಲಸ ಮುಗಿದು ಪ್ರಾಯೋಗಿಕ ಸಂಚಾರ ಸಹ ಯಶಸ್ವಿಯಾಗಿದೆ.

ಇದೀಗ ಅಕ್ಟೋಬರ್ 3 ಮತ್ತು 4ರಂದು ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಬೆಂಗಳೂರಿಗೆ ಆಗಮಿಸಿ ಈ ವಿಸ್ತರಣೆ ಮಾರ್ಗದಲ್ಲಿ ಸುರಕ್ಷತೆ ತಪಾಸಣೆ ನಡೆಸಿ ಸಾರ್ವಜನಿಕ ಬಳಕೆಗೆ ಅಂತಿಮ ಅನುಮೋದನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
298 ಕೋಟಿ ವೆಚ್ಚದಲ್ಲಿ ವಿಸ್ತರಣೆ
ನಮ್ಮ ಮೆಟ್ರೊ ಮೆಟ್ರೋ ಹಸಿರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ತುಮಕೂರಿನ ಕಡೆಗೆ ವಿಸ್ತರಣೆ ಮಾಡಲಾಗಿದೆ. ನಾಗಸಂದ್ರದಿಂದ ಮಾದಾವರ ವರೆಗೆ 3.7 ಕಿಲೋ ಮೀಟರ್ ವಿಸ್ತರಣೆ ಕೆಲಸ 2017ರಲ್ಲೇ ಆರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ಸುಮಾರು ಏಳು ವರ್ಷಗಳ ವಿಳಂಬದ ನಂತರ ಸಿವಿಲ್ ಕೆಲಸ ಪೂರ್ಣಗೊಂಡಿತು.
ಕಾಮಗಾರಿ ಪೂರ್ಣಗೊಂಡಿದ್ದೇ ತಡ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಳೆದ ತಿಂಗಳು ಆಗಸ್ಟ್ 06ರಿಂದ ಪ್ರಾಯೋಗಿಕ ಸಂಚಾರ ನಡೆಸಿದ್ದು, ಯಶಸ್ವಿಯಾಗಿದೆ. ಇದೀಗ ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (CMRS) ಪರಿಶೀಲನೆ ಮಾಡಬೇಕಿದೆ. ಈ ವಿಸ್ತರಣೆ ಮಾರ್ಗ ಸುರಕ್ಷತೆ ಪರಿಶೀಲನೆಗೆ ದಿನಾಂಕ ನಿಗದಿ ಆಗಿದೆ. ಅಕ್ಟೋಬರ್ 3 ಮತ್ತು 4ರಂದು ಸುರಕ್ಷತಾ ಅಧಿಕಾರಿಗಳು ಬಂದು ನೋಡಿ, ಅನುಮೋದನೆ ಕೊಡುತ್ತಿದ್ದಂತೆ ಈ ವಿಸ್ತರಣೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಶುರುವಾಗಲಿದೆ.
Commissioner Metro Rail Safety (CMRS) Inspection to be held on 3-4 Oct 2024 between Nagasandra & Madavara metro stations, Green Line, Phase 2, Reach -3 Extesion. 👇 pic.twitter.com/zCYPUMNO1p
— ನಮ್ಮ ಮೆಟ್ರೋ (@OfficialBMRCL) September 26, 2024
ಸಾವಿರಾರು ಪ್ರಯಾಣಿಕರಿಗೆ ಮೆಟ್ರೋ ಸೇವೆ ಲಭ್ಯ
ಈ ಮಾರ್ಗದಲ್ಲಿ ಮೂರು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ನೆಲಮಂಗಲ, ಪಿಣ್ಯ, ತುಮಕೂರು, ಮಾದಾವರ ಕಡೆಗಿನ ಸುತ್ತಮುತ್ತಲ ಸಾವಿರಾರು ಪ್ರಯಾಣಿಕರಿಗೆ ಈ ವಿಸ್ತರಣೆ ಮೆಟ್ರೋ ಮಾರ್ಗದಿಂದ ಸಾರಿಗೆ ಸೇವೆ ಲಭ್ಯವಾಗಲಿದೆ. ವಿಪರ್ಯಾಸವೆಂದರೆ ಮೆಟ್ರೋ ಸೇವೆ ವಿಸ್ತರಣೆ ಆಗುತ್ತಿದೆ. ಪ್ರಯಾಣಿಕರು ಹೆಚ್ಚುತ್ತಿದ್ದಾರೆ. ಆದರೆ ಸಮರ್ಪಕ ಸೇವೆ ನೀಡಲು ಮೆಟ್ರೋ ಕೋಚ್‌ಗಳ ಕೊರತೆ ಎದುರಾಗಿದೆ. ಹೀಗಾಗಿಯೇ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.












Click it and Unblock the Notifications