ಜನತಾ ದರ್ಶನದ ಮಾಹಿತಿ ಆನ್ ಲೈನ್ ನಲ್ಲಿ
ಬೆಂಗಳೂರು, ನ. 13 : ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಜನತಾ ದರ್ಶನ ಕಾರ್ಯಕ್ರಮಕ್ಕೆ ಮತ್ತಷ್ಟು ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳು ಇನ್ನು ಮುಂದೆ ಆನ್‌ಲೈನ್‌ನಲ್ಲಿ ನೋಂದಣಿಯಾಗಲಿವೆ, ಮಂಗಳವಾರ ಅಧಿಕೃತವಾಗಿ ಆನ್‌ಲೈನ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಾರಕ್ಕೊಮ್ಮೆ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು 15 ದಿನಗಳಿಗೆ ಒಮ್ಮೆ ನಡೆಸಲು ಸಿಎಂ ತೀರ್ಮಾನಿಸಿದ್ದಾರೆ.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂದು ಬರೆದು ಸಿಎಂ ಸಿದ್ದರಾಮಯ್ಯ ಬರೆಯುತ್ತಿದ್ದರು. ನಂತರ ಅದು ಸಂಬಂಧಪಟ್ಟ ಇಲಾಖೆಗೆ ರವಾನೆಯಾಗುತ್ತಿತ್ತು. ಮುಂದೆ ಅರ್ಜಿಗಳ ಸ್ಥಿತಿ-ಗತಿ ಏನಾಯಿತು ಎಂದು ಅವರಿಗೆ ತಿಳಿಯುತ್ತಿರಲಿಲ್ಲ. ಆದ್ದರಿಂದ ಜನತಾ ದರ್ಶನ ಅರ್ಜಿಗಳನ್ನು ಆನ್‌ಲೈನ್ ನಲ್ಲಿ ನೋಂದಣಿ ಮಾಡುವ ವ್ಯವಸ್ಥೆ ಆರಂಭಿಸಲಾಗಿದೆ. ಇದರಿಂದ ಸಾರ್ವಜನಿಕರು ಅರ್ಜಿಗಳ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ.

ಹೊಸ ಯೋಜನೆಯಂತೆ ಜನತಾದರ್ಶನದಲ್ಲಿ ಬಂದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ, ಕ್ರಮಸಂಖ್ಯೆ ನೀಡಲಾಗುತ್ತದೆ. ಆನ್ ಲೈನ್ ನಲ್ಲಿ ದಾಖಲಿಸಿದ ಮಾಹಿತಿ ಸಂಬಂಧಪಟ್ಟ ಇಲಾಖೆಗೂ ರವಾನೆಯಾಗುತ್ತದೆ. ಅರ್ಜಿಯ ಬಗ್ಗೆ ಕ್ರಮ ತೆಗೆದುಕೊಂಡ ಇಲಾಖೆ ಸಿಬ್ಬಂದಿ ಅದನ್ನು ಜನತಾ ದರ್ಶನ ಆನ್ ಲೈನ್ ವಿಭಾಗಕ್ಕೆ ರವಾನಿಸಬೇಕು. ಇದರಿಂದ ಸ್ವತಃ ಮುಖ್ಯಮಂತ್ರಿಗಳಿಗೆ ಅರ್ಜಿಯ ಸ್ಥಿತಿ-ಗತಿ ಏನೆಂದು ತಿಳಿಯುತ್ತದೆ ಮತ್ತು ಸಂಬಂಧಿಸಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಸಕಾಲ ಮಾದರಿಯಲ್ಲಿ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಿಗದಿತ ಕಾಲಾವಧಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಇದ್ದಲ್ಲಿ ಸಕಾಲದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹೊಸದಾಗಿ ಜಾರಿ ಮಾಡಿರುವ ವ್ಯವಸ್ಥೆಯಿಂದ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದವರು ನಿಗದಿತ ಅವಧಿಯಲ್ಲಿ ಅನುಕೂಲ ಪಡೆಯಲು ಅನುಕೂಲವಾಗಲಿದೆ ಎಂದರು.
ಜನತಾ ದರ್ಶನ 15 ದಿನಕ್ಕೊಮ್ಮೆ : ಪ್ರತಿ ವಾರ ನಡೆಯುತ್ತಿದ್ದ ಜನತಾದರ್ಶನ ಕಾರ್ಯಕ್ರಮವನ್ನು 15 ದಿನಗಳಿಗೊಮ್ಮೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಾರಕ್ಕೊಮ್ಮೆ ನಡೆಸುವುದರಿಂದ ಸಾವಿರಾರು ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ 15 ದಿನಗಳಿಗೊಮ್ಮೆ ಜನತಾ ದರ್ಶನ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು. (ಸಕಾಲ ಸೇವೆಗಳು ಶೀಘ್ರದಲ್ಲೇ ಆನ್ ಲೈನ್ ನಲ್ಲಿ ಲಭ್ಯ)












Click it and Unblock the Notifications