ರೈತರಿಗೆ ನೀಡುವ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸದಂತೆ ಸೂಚನೆ ಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂನ್ 4: ಕೆಎಂಎಫ್ ರೈತರಿಗೆ ನೀಡುತ್ತಿದ್ದ ಹಾಳಿನ ಪ್ರೋತ್ಸಾಹಧನ ಕಡಿತಗೊಳಿಸಿದ್ದಕ್ಕೆ ಅಸಮಾಧಾನ ವ್ಯಕ್ತವಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕೆಎಂಎಫ್ ವ್ಯವಸ್ಥಾಒಕ ನಿರ್ದೇಶಕರ ಜೊತೆ ಸಭೆ ನಡೆಸಿದ್ದು, ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರವನ್ನು ಕಡಿತ ಮಾಡದಂತೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಮನ್ಮುಲ್ ಮತ್ತು ಬಮುಲ್ ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹಧನವನ್ನು ಕಡಿಮೆ ಮಾಡಿತ್ತು, ಉಚಿತ ಭಾಗ್ಯಗಳಿಗೆ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ರೈತರ ಆದಾಯಕ್ಕೆ ಕತ್ತರಿ ಹಾಕಿದೆ ಎಂದು ವಿರೋಧ ಪಕ್ಷಗಳು ಕಿಡಿ ಕಾರಿದ್ದವು. ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಏಕಾಏಕಿ ದರ ಕಡಿಮೆ ಮಾಡುವಂತಿಲ್ಲ, ಈ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಸಬೇಕು, ಪ್ರೋತ್ಸಾಹಧನ ಕಡಿಮೆ ಮಾಡಿದರೆ ರೈತರಿಗೆ ತೊಂದರೆ ಆಗುತ್ತದೆ ಎಂದು ಸೂಚನೆ ಕೊಟ್ಟಿದ್ದಾರೆ.

ಬೇಸಿಗೆ ಕಾಲದಲ್ಲಿ ನೀಡಿದ್ದ ಪ್ರೋತ್ಸಾಹಧನ
ಬೆಂಗಳೂರು ಜಿಲ್ಲಾ ಸಹಕಾರ ಹಾಲು ಜಿಲ್ಲಾ ಹಾಲು ಒಕ್ಕೂಟ ಬೇಸಿಗೆಯಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರುಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಬೇಸಿಗೆ ಸಂದರ್ಭದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಅದರಂತೆಯೇ ಏಪ್ರಿಲ್ 1ರಿಂದ ಮೇ 31ರವರೆಗೆ ವಿಶೇಷ ಪ್ರೋತ್ಸಾಹಧನ ನೀಡಿತ್ತು.
ಸದ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಮೇವಿನ ಲಭ್ಯತೆ ಉತ್ತಮವಾಗಿದೆ. ಹಸಿರು ಮೇವು ಹೆಚ್ಚಾಗಿ ಲಭ್ಯವಿರುವುದರಿಂದ ಹಾಲಿನ ಉತ್ಪಾದನೆ ಕೂಡ ಹೆಚ್ಚಳವಾಗಿದ್ದು, ಪ್ರೋತ್ಸಾಹಧನ ಕಡಿತ ಮಾಡುತ್ತಿರುವುದಾಗಿ ತಿಳಿಸಿತ್ತು. ಏಪ್ರಿಲ್ ತಿಂಗಳ ಆರಂಭದಲ್ಲಿ 13.50 ಲೀಟರ್ ಹಾಲು ಉತ್ಪಾದನೆಯಾಗಿತ್ತು. ಈ ತಿಂಗಳು ಹಾಲಿನ ಉತ್ಪಾದನೆ 16 ಲಕ್ಷ ಲೀಟರ್ ತಲುಪುವ ಸಾಧ್ಯತೆ ಇರುವುದರಿಂದ 2.5 ಲಕ್ಷ ಲೀಟರ್ ಹಾಲು ಹೆಚ್ಚುವರಿಯಾಗಿ ಉತ್ಪಾದನೆಯಾಗಲಿದೆ.
ಹಾಲಿನ ಪೂರೈಕೆಯಲ್ಲಿ ವ್ಯತ್ಯಯ
ಬೇಸಿಗೆ ಸಂದರ್ಭದಲ್ಲಿ ಕೆಎಂಎಫ್‌ಗೆ ಹಾಲಿನ ಪೂರೈಕೆ ಕಡಿಮೆಯಾಗಿದ್ದರಿಂದ ಭಾರಿ ಸಮಸ್ಯೆಯಾಗಿತ್ತು. ಬೇಡಿಕೆ ಹೆಚ್ಚಾಗಿದ್ದ ಕಾರಣ ಹಲವು ಕಡೆಗಳಲ್ಲಿ ಹಾಲಿನ ಕೊರತೆ ಉಂಟಾಗಿತ್ತು. ಅಲ್ಲದೆ ಹಲವು ಕಡೆಗಳಲ್ಲಿ ಹಾಲು ಬೇಗನೆ ಹಾಳಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿತ್ತು. ಅತ್ಯಧಿಕ ತಾಪಮಾನ ಇರುವ ಕಾರಣದಿಂದ ಹಾಲು ಬೇಗನೆ ಕೆಡುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಸದ್ಯ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದು ಹಸು ಸಾಕಾಣಿಕೆ ಮಾಡುವವರಿಗೆ ನಿರಾಳ ತಂದಿದೆ.












Click it and Unblock the Notifications