ಮೀಸಲಾತಿ ಗೊಂದಲ ನಿವಾರಣೆಗೆ ಪ್ರತ್ಯೇಕ ಸಭೆ: ವಾಲ್ಮೀಕಿ ಸಮುದಾಯದ ನಾಯಕರಿಗೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜುಲೈ 05: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಗೊಂದಲಗಳ ನಿವಾರಣೆಗೆ ಬಜೆಟ್ ಅಧಿವೇಶನ ಮುಗಿದ ನಂತರ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಹಾಗೂ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸುತ್ತೇನೆ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು ವಾಲ್ಮೀಕಿ ಸಮಾಜದ ಹಿತ ಕಾಪಾಡಲು ಬದ್ದವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರ ನಿಯೋಗ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿದರು.

ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿ ಕುರಿತು ಅವಸರದಲ್ಲಿ ತೀರ್ಮಾನ ಮಾಡಿದ್ದು, ಗೊಂದಲ ಸೃಷ್ಟಿಸಿದೆ. ಮುಸ್ಲಿಮರಿಗೆ ಶೇ. 4 ರಷ್ಟಿದ್ದ ಮೀಸಲಾತಿ ರದ್ದು ಮಾಡಿ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ತಲಾ ಶೇ. 2 ರಷ್ಟು ಮೀಸಲಾತಿ ನೀಡಿದೆ. 2 ಸಿ, 2 ಡಿ ಸಹ ಮಾಡಿದ್ದು ಇದರ ಬಗ್ಗೆ ಗೊಂದಲಗಳಿವೆ. ಸಂವಿಧಾನಾತ್ಮಕವಾಗಿ ಇಲ್ಲದಿರುವ ಕಾರಣ ಸುದೀರ್ಘ ಚರ್ಚೆಯ ಅಗತ್ಯವಿದೆ. ಮೀಸಲಾತಿಯ ಪರಿಮಿತಿಯನ್ನು ಸಡಿಲಗೊಳಿಸದಿದ್ದರೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ
ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರಮಾಣಪತ್ರ ವಿತರಣೆಯಾಗುತ್ತಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿ.ಆರ್.ಇ ಸೆಲ್ ನಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ರಾಯಚೂರು, ಬಿಜಾಪುರ, ಭಾಗದಲ್ಲಿ ಕೋಲಿ, ಕಬ್ಬಲಿಗ, ತಳವಾರರ ಸಮುದಾಯಗಳನ್ನು ಎಸ್‌ಟಿಗೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಕೋಲಿ ಸಮಾಜದವರು ತಳವಾರರು ಎಂದೇ ಹೇಳುತ್ತಾರೆ. ಈ ಗೊಂದಲಗಳ ಬಗ್ಗೆಯೂ ತೀರ್ಮಾನವಾಗಬೇಕು. ನಾಯಕ ಸಮುದಾಯದ ತಳವಾರರನ್ನು ಮಾತ್ರ ಎಸ್‌ಟಿ ಗೆ ಸೇರಿಸಲಾಗಿದ್ದು ಇವೆಲ್ಲಾ ಅತ್ಯಂತ ಸೂಕ್ಷ್ಮ ವಿಚಾರವಾಗಿರುವುದರಿಂದ ಸಂವಿಧಾನ ಮತ್ತು ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಪರಿಶಿಷ್ಟ ಪಂಗಡಕ್ಕೆ ಸ್ಥಾಪನೆಯಾಗಿರುವ ಪ್ರತ್ಯೇಕ ಸಚಿವಾಲಯಕ್ಕೆ ಕಾರ್ಯದರ್ಶಿ ನೇಮಕಾತಿ ಮಾಡಲಾಗುವುದು. ಬುಡಕಟ್ಟು ಸಲಹಾ ಮಂಡಳಿ ಸ್ಥಾಪನೆ ಬಗ್ಗೆ ವರದಿ ನೀಡಿದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಮೀಸಲಾತಿಯನ್ನು ಸಂವಿಧಾನದ 9 ನೇ ಪರಿಚ್ಛೇಧಕ್ಕೆ ಸೇರಿಸಲು ನಮ್ಮ ಸರ್ಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಅದಕ್ಕೆ ಮೊದಲು ಬಿಜೆಪಿ ಸರ್ಕಾರ ಸೃಷ್ಟಿಸಿದ ಎಲ್ಲಾ ಗೊಂದಲಗಳನ್ನು ನಿವಾರಿಸುವ ಅನಿವಾರ್ಯತೆ ಇದೆ ಎಂದರು.
ಸಹಕಾರ ಸಚಿವ ರಾಜಣ್ಣ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಾಲ್ಮೀಕಿ ಸಮುದಾಯದ 14 ಶಾಸಕರು, ಮುಖಂಡರು ಹಾಗೂ ಜನಪ್ರತಿನಿಧಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications