ದೇವೇಗೌಡರಿಂದಲೇ ಜೆಡಿಎಸ್ ಉಳಿದಿದೆ: ಕುಮಾರಸ್ವಾಮಿ
ಬೆಂಗಳೂರು, ಜೂನ್ 7: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರಿಂದಾಗಿಯೇ ಪಕ್ಷ ಉಳಿದುಕೊಂಡಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಈ ವಯಸ್ಸಿನಲ್ಲಿ ಮತ್ತೆ ಪಕ್ಷ ಕಟ್ಟುತ್ತೇನೆ ಅಂತ ಅವರು ಹೊರಟಿದ್ದಾರೆ. ದೇವೇಗೌಡರ ಶ್ರಮದಿಂದಲೇ ಜೆಡಿಎಸ್ ಉಳಿದಿದೆ. ಅವರಲ್ಲಿರುವ ಉತ್ಸಾಹ ಯಾವ ಯುವಕರಲ್ಲಿಯೂ ಕಾಣಿಸಲಾರದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಈ ವಯಸ್ಸಿನಲ್ಲಿಯೂ ದೇವೇಗೌಡರು ಪಕ್ಷ ಕಟ್ಟುತ್ತೇನೆ ಎಂದು ಪಣ ತೊಟ್ಟಿದ್ದಾರೆ. ದೇವೇಗೌಡರ ಆತ್ಮವಿಶ್ವಾಸ ಯುವಕರಲ್ಲಿ ಕಾಣುವುದಿಲ್ಲ ಎಂದರು.

ಮುಸ್ಲಿಮರು ಈ ಬಾರಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ಬಿಜೆಪಿ 104 ಸ್ಥಾನಗಳಲ್ಲಿ ಗೆಲ್ಲುತ್ತಿರಲಿಲ್ಲ. ನಾವು ಕನಿಷ್ಠ 65-70 ಸ್ಥಾನ ಗೆಲ್ಲುತ್ತೇವೆ ಎಂದು ಅಂದುಕೊಂಡಿದ್ದೆವು. ಆದರೆ, ಕೇವಲ 37 ಸೀಟುಗಳಲ್ಲಿ ಗೆಲ್ಲುವ ವಾತಾವರಣ ಬಂತು ಎಂದು ಹೇಳಿದರು.
ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆದು ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಯಿತು. ಜೆಡಿಎಸ್‌ನವರು ಗೆದ್ದರೆ ಬಿಜೆಪಿಗೆ ಹೋಗುತ್ತಾರೆ ಎಂದು ಬಿಂಬಿಸಲಾಯಿತು ಎಂದು ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಈ ಬಾರಿಯ ಗ್ರಾಮ ವಾಸ್ತವ್ಯ ಹೇಗಿರುತ್ತದೆ ಅನ್ನೋದನ್ನು ನೋಡಿ. ಈ ಬಾರಿ ಮಧ್ಯರಾತ್ರಿ ಭೇಟಿ ನೀಡುವುದಿಲ್ಲ. ಬೆಳಿಗ್ಗೆ ಬರುತ್ತೇನೆ. ಬೆಳಿಗ್ಗೆ 10 ಗಂಟೆಗೆ ಪಂಚಾಯಿತಿಗೆ ಭೇಟಿ ನೀಡುತ್ತೇನೆ. ಅಂದು ಇಡೀ ಜಿಲ್ಲೆಯ ಅಧಿಕಾರಿಗಳು ಸ್ಥಳದಲ್ಲಿಯೇ ಇರುತ್ತಾರೆ. ಈ ಬಾರಿಯ ಗ್ರಾಮ ವಾಸ್ತವ್ಯ ವಿಭಿನ್ನವಾಗಿರುತ್ತದೆ. ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.












Click it and Unblock the Notifications