ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ : ಸಿದ್ದರಾಮಯ್ಯ
ಬೆಂಗಳೂರು, ಜುಲೈ 22 : "ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ತಿಳಿಯದಂತಾಗಿದೆ. ನಂಬಿಕೆ ಎಂಬ ಪದಕ್ಕೆ ಅರ್ಥವೇ ಇಲ್ಲವಾಗಿದೆ, " ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಯಶವಂತಪುರದ ತಾಜ್ ವಿವಾಂತ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಆಪ್ತ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. "ಶಾಸಕರು ಮಾಡಿದ ಕೆಲಸದಿಂದ ನನಗೆ ನೋವಾಗಿದೆ" ಎಂದು ಹೇಳಿದ್ದಾರೆ.
"ನಾವು ಎಲ್ಲಿಯೂ ಹೋಗುವುದಿಲ್ಲ ಎಂದು ನನ್ನ ಬಳಿ ಹೇಳಿದ್ದ ಶಾಸಕರು ಬಳಿಕ ಕೈ ಕೊಟ್ಟರು. ಎಲ್ಲರೂ ಮೋಸ ಮಾಡಿದರು. ಇದಕ್ಕಿಂತ ನೋವು ಇನ್ನೇನು ಆಗಬೇಕು" ಎಂದು ಸಿದ್ದರಾಮಯ್ಯ ಶಾಸಕರ ಬಳಿ ಬೇಸರ ತೋಡಿಕೊಂಡರು.
ವಿಶ್ವಾಸಮತಯಾಚನೆ ಮೇಲಿನ ಚರ್ಚೆಯನ್ನು ಶುಕ್ರವಾರ ಮುಂದೂಡಿದ ಬಳಿಕ ಕಾಂಗ್ರೆಸ್ ಶಾಸಕರು ತಾಜ್ ವಿವಾಂತ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಮತ್ತು ಭಾನುವಾರ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಶಾಸಕರ ಜೊತೆ ಸಭೆ ನಡೆಸಿದರು.

ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ
ಶಾಸಕರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಬಳಿ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡ ಶಾಸಕರೇ ಇದೀಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.

ಯಾರನ್ನು ನಂಬಬೇಕು ಎಂದು ತಿಳಿಯುತ್ತಿಲ್ಲ
"ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲದಂತೆ ಆಗಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕೆಲಸಗಳನ್ನು ಮಾಡಿಸಿಕೊಂಡು, ಈಗ ಹೇಸಿಗೆ ತಿನ್ನುವಂತ ಕೆಲಸ ಮಾಡಿದ್ದಾರೆ" ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಬಿಜೆಪಿ ಸೇರಲು ಹೇಳಿದ್ದೇನಾ?
"ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ರಾಜೀನಾಮೆ ನೀಡಿರುವ ಕೆಲವು ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಕಳಿಸಿದ್ದೇನೆ ಎಂದು ಪ್ರಚಾರ ಮಾಡಲಾಗುತ್ತಿದೆ. ನಾನು ನಿಮ್ಮಲ್ಲಿ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೇನಾ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ನನಗೆ ತುಂಬಾ ನೋವಾಗಿದೆ
"ಶಾಸಕರಿಗೆ ಬಿಜೆಪಿ ಸೇರುವಂತೆ ಸೂಚಿಸುವ ನೀಚ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ಇವರು ಮಾಡಿದ ಕೆಲಸದಿಂದ ನನಗೆ ತುಂಬಾ ನೋವಾಗಿದೆ. ಬಸವರಾಜ್, ಮುನಿರತ್ನ, ಸೋಮಶೇಖರ್, ಡಿ.ಸುಧಾಕರ್ ಹೇಳಿದ ಕೆಲಸವನ್ನು ಮಾಡಿಕೊಡುತ್ತಿದೆ" ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications