Breaking; ಬೆಂಗಳೂರಿನ ರೈನ್‌ಬೋ ಲೇಔಟ್ ವಿಲ್ಲಾಗಳಿಗೆ ನೋಟಿಸ್
ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಭಾರೀ ಸುದ್ದಿ ಮಾಡಿದ್ದು ರೈನ್ ಬೋ ಡ್ರೈವ್ ಲೇಔಟ್. ಐಷಾರಾಮಿ ವಿಲ್ಲಾಗಳನ್ನು ಹೊಂದಿರುವ ಲೇಔಟ್ ಸಂಪೂರ್ಣ ಜಲಾವೃತವಾಗಿತ್ತು. ಜನರ ಸಂಚಾರ ನಡೆಸಲು ಟ್ರಾಕ್ಟರ್ ಬಳಸಬೇಕಾದ ಅನಿವಾರ್ಯತೆ ಎದುರಾಗಿತ್ತು.
ಸರ್ಜಾಪುರ ರಸ್ತೆಯ ರೈನ್ ಬೋ ಡ್ರೈವ್ ಲೇಔಟ್ ಮುಳುಗಲು ರಾಜಕಾಲುವೆ ಒತ್ತುವರಿಯೇ ಕಾರಣ ಎಂದು ತಿಳಿದುಬಂದಿದೆ. ಕಾಲುವೆ ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ ಸುಮಾರು 15 ವಿಲ್ಲಾಗಳಿಗೆ ನೋಟಿಸ್ ನೀಡಲಾಗಿದೆ.
ಬೆಂಗಳೂರು ಪೂರ್ವ ವಿಭಾಗದ ತಹಶೀಲ್ದಾರ್ ಒತ್ತುವರಿ ಜಾಗವನ್ನು ತೆರವು ಮಾಡದಿದ್ದರೆ ನಾವೇ ತೆರವು ಮಾಡುತ್ತೇವೆ. ಕಾರ್ಯಾಚರಣೆ ವೆಚ್ಚವನ್ನು ವಿಲ್ಲಾ ಮಾಲೀಕರು ಭರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಮಳೆ ನೀರಿನಲ್ಲಿ ಮುಳುಗಿದ ಲೇಔಟ್‌ನಲ್ಲಿ ಜಿಲ್ಲಾಡಳಿತ ಸಮೀಕ್ಷೆ ನಡೆಸಿದೆ. ಕಾಲುವೆಗಳನ್ನು ಒತ್ತುವರಿ ಮಾಡಿ ವಿಲ್ಲಾಗಳನ್ನು ನಿರ್ಮಾಣ ಮಾಡಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಒತ್ತುವರಿ ತೆರವುಗೊಳಿಸುವ ನೋಟಿಸ್ ನೀಡಲಾಗಿದೆ. ಲೇಔಟ್‌ನಲ್ಲಿ ಸುಮಾರು 350ಕ್ಕೂ ಅಧಿಕ ಮನೆಗಳಿವೆ.
ಮಳೆ ನೀರು ಇಳಿದು ಹೋದ ಮೇಲೆ ಅಧಿಕಾರಿಗಳು ಮಳೆ ನೀರು ಹಲವು ದಿನಗಳ ಕಾಲ ಲೇಔಟ್‌ನಲ್ಲಿ ನಿಲ್ಲಲು ಕಾರಣ ಪತ್ತೆ ಹಚ್ಚಿದ್ದಾರೆ. ಮುಂದೆ ನೀರು ನಿಲ್ಲದಂತೆ ಮಾಡಲು ಕಾಲುವೆ ಒತ್ತುವರಿಯನ್ನು ತೆರವು ಮಾಡಲು ಮುಂದಾಗಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?; ತಹಶೀಲ್ದಾರ್‌ರವರ ನ್ಯಾಯಾಲಯ ಬೆಂಗಳೂರು ಪೂರ್ವ ತಾಲೂಕು ಕೆ. ಆರ್. ಪುರ ಇವರು ನೋಟಿಸ್ ನೀಡಿದ್ದಾರೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಪ್ರಕರಣ 94 ಮತ್ತು 104 ರಡಿ ನೋಟಿಸ್ ಕೊಡಲಾಗಿದೆ.
ಮಾನ್ಯ ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ನಿರ್ದೇಶಿಸಿರುವಂತೆ ಸರ್ಕಾರಿ ಜಮೀನು ಒತ್ತುವರಿದಾರರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 192 (ಎ) ರಂತೆ ಕ್ರಮ ಜರುಗಿಸುವ ಮುನ್ನ ಸಂಬಂಧಿಸಿದವರಿಗೆ ಒಂದು ಅವಕಾಶ ನೀಡಲು ನಿರ್ದೇಶಿಸಲಾಗಿರುತ್ತದೆ.
ಈ ನೋಟಿಸ್ ತಲುಪಿದ 7 ದಿನದಲ್ಲಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಸರ್ಕಾರದ ವಶಕ್ಕೆ ನೀಡಬೇಕು. ತಪ್ಪಿದಲ್ಲಿ ಈ ಕಾರ್ಯಾಲಯದ ವತಿಯಿಂದ ಒತ್ತುವರಿಯನ್ನು ತೆರವುಗೊಳಿಸಿ ಕ್ರಮ ಜರುಗಿಸಿ ತೆರವುಗೊಳಿಸಲು ತಗಲುವ ವೆಚ್ಚವನ್ನು ನಿಮ್ಮಿಂದ ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications