ವಿವಾಹ ವಾರ್ಷಿಕೋತ್ಸವದ 20 ದಿನ ಮೊದಲೇ ಹತ್ಯಗೀಡಾದ ರೇಣುಕಾಸ್ವಾಮಿ: ಕಣ್ಣೀರಲ್ಲಿ ಕುಟುಂಬ, ಪತ್ನಿ
ಬೆಂಗಳೂರು, ಜೂನ್ 28: ಮದುವೆ ಆಗಿ ಅದಾಗಲೇ ವರ್ಷ ಕಳೆಯುವ ಹೊತ್ತಿಗೆ ಮಾಡಬಾರದ ತಪ್ಪು ಮಾಡಿ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಕುಟುಂಬ ಇಂದು ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಐದು ತಿಂಗಳ ಗರ್ಭಿಣಿ ಪತ್ನಿ ಸಹನಾ ಅವರು ಹುಟ್ಟುವ ಮೊದಲೆ ತಂದೆ ಕಳೆದುಕೊಂಡು ಮಗುವಿನ ಭವಿಷ್ಯ, ಹೊಂದಿದ್ದ ಕನಸುಗಳ ಆಲೋಚನೆಯಲ್ಲೇ ಮುಳುಗಿದ್ದಾರೆ. ಎಲ್ಲವು ಸರಿ ಇದ್ದಿದ್ದರೆ ಇಂದು ಜೂನ್ 28ರಂದು ರೇಣುಕಾಸ್ವಾಮಿ-ಸಹನಾ ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲೂ ಮುಳುಗಿರುತ್ತಿದ್ದರು.
ಆದರೆ ಅದೊಂದು ತಪ್ಪು ಮಾಡಿದ್ದಕ್ಕಾಗಿ ರೇಣುಕಾಸ್ವಾಮಿ ಹತ್ಯೆಗೀಡಾಗಿದ್ದಾನೆ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಯಾರೇ ಆಗಲಿ ವಿವಾಹ ಪೂರ್ವದಲ್ಲಿ ಇದ್ದ ಜೀವನವೇ ಬೇರೆಯದ್ದಾಗಿರುತ್ತದೆ. ವಿವಾಹ ನಂತರ ಪ್ರತಿ ಹಂತದಲ್ಲಿ, ಸರಿ ತಪ್ಪುಗಳಲ್ಲಿ ನಾವು ಮಾತ್ರವಲ್ಲದೇ ನಮ್ಮವರು ಪಾಲುದಾರರಾಗುತ್ತಾರೆ ಎಂಬುದಕ್ಕೆ ರೇಣುಕಾಸ್ವಾಮಿ ಮತ್ತು ಕೊಲೆ ಪ್ರಕರಣದಲ್ಲಿ ಬಂಧನಕ್ಕೀಡಾದ ನಟ ದರ್ಶನ್ ಪ್ರಕರಣ ನಿದರ್ಶನವಾಗಿದೆ.

ಚಿಂತೆಯಲ್ಲಿ ಪತ್ನಿ ಪೋಷಕರು
ಒಬ್ಬನೇ ಮಗ ಇದ್ದು, ನಮ್ಮ ಮುಪ್ಪಿನ ಕಾಲದಲ್ಲಿ ಆಸರೆಯಾಗುತ್ತಾನೆ ಎಂದುಕೊಂಡಿದ್ದ ರೇಣುಕಾಸ್ವಾಮಿ ವೃದ್ಧ ತಂದೆ-ತಾಯಿ ಆಸೆ, ಕನಸಿಗೆ ಭಗ್ನ ಉಂಟಾಗಿದೆ. ಮಗನ ಅಗಲಿಕೆಯಿಂದ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.
ಇನ್ನೂ ರೇಣುಕಾಸ್ವಾಮಿಯೇ ಸರ್ವಸ್ವ ಎಂದುಕೊಂಡು ವರ್ಷದ ಹಿಂದೆ ಆತನೊಂದಿಗೆ ಸಪ್ತಪದಿ ತುಳಿದು ಬಂದಿದ್ದ ಸಹನಾ ಈ ಪತಿಯ ಹತ್ಯೆಯ ಘಟನೆಯಿಂದ ಕುಸಿದುಹೋಗಿದ್ದಾರೆ. ಭವಿಷ್ಯ ಇಲ್ಲದಂತಾಗಿ, ಆಕೆ ಬಾಳಲ್ಲಿ ಕತ್ತಲು ಆವರಿಸಿದಂತಾಗಿದೆ. ಮಾನಸಿಕವಾಗಿ ಇಡೀ ಕುಟುಂಬವೆಲ್ಲ ನೋಂದಿದೆ. ಇದಕ್ಕೆಲ್ಲ ಸಾಮಾಜಿಕ ಜಾಲತಾಣದಲ್ಲಿ ರೇಣುಕಾಸ್ವಾಮಿ ಪವಿತ್ರಾಗೌಡಗೆ ಕಳುಹಿಸಿದ್ದ ಆ ಅಶ್ಲೀಲ ಸಂದೇಶ ಎನ್ನಲಾಗಿದೆ.

ವಾರ್ಷಿಕೋತ್ಸವ ಮೊದಲೇ ಪತಿ ಕಳೆದುಕೊಂಡ ಪತ್ನಿ
ಪತ್ನಿ, ಮಗುವಿನೊಂದಿಗೆ ಸಂಸತದ ಜೀವನ ನಡೆಸಬೇಕಿದ್ದು, ವೃದ್ಧ ತಂದೆ ತಾಯಿಗೆ ಆಸರೆಯಾಗಬೇಕಿದ್ದ ರೇಣುಕಾಸ್ವಾಮಿ ಸತ್ತು ರಾಜಕಾಲುವೆ ಪಾಲಾಗಿದ್ದ. ವಿವಾಹ ಆದ ತಿಂಗಳೇ ವಾರ್ಷಿಕೋತ್ಸವಕ್ಕೆ ಸರಿಯಾಗಿ 20 ದಿನ ಮೊದಲೇ ಹೆಣವಾಗಿದ್ದಾನೆ. ಪತಿಯೊಂದ ವಾರ್ಷಿಕೋತ್ಸವ ಆಚರಣೆಯೊಂದಿಗೆ ಮತ್ತಷ್ಟು ಗಟ್ಟಿಗೊಳ್ಳಬೇಕಿದ್ದ ಪತ್ನಿಯ ಪ್ರೀತಿ, ಸಂಬಂಧ, ಭಾವನೆಗಳ, ನಂಬಿಕೆಗಳ ಗೋಪುರ ಕುಸಿದು ಬಿದ್ದಿದೆ.
ನಟ ದರ್ಶನ್ ಪ್ರೇಯಸಿ ನಟಿ ಪವಿತ್ರಾಗೌಡಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಮೆಸೆಜ್ ಮಾಡಿದ್ದ ಎಂಬ ಕಾರಣಕ್ಕೆ ಜೂನ್ 8ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಶೆಡ್ ನಲ್ಲಿಟ್ಟು ಹಲ್ಲೆ ಮಾಡಿ ಕೊಲ್ಲಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಈ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ಪೊಲೀಸ್ ಅಧಿಕಾರಿಗಳಾದ ಗಿರೀಶ್ ಮತ್ತು ಚೆಂದನ್ ಕುಮಾರ್ ಅವರು ಮಿಂಚಿನ ವೇಗದಲ್ಲಿ ನಟ ದರ್ಶನ್ ಮತ್ತುವನ ಸಹಚರರನ್ನು (17 ಮಂದಿ) ಬಂಧಿಸುವಲ್ಲಿ ಯಶಸ್ವಿಯಾದರು. ಚೂರು ವಿಳಂಬವಾಗಿದ್ದರು, ಪ್ರಕರಣದ ದಿಕ್ಕೆ ಬದಲಾಗುತ್ತಿತ್ತು.












Click it and Unblock the Notifications