Chitra Santhe 2024; ಬೆಂಗಳೂರು ಚಿತ್ರಸಂತೆ ದಿನಾಂಕ, ವಿಶೇಷತೆಗಳು
ಬೆಂಗಳೂರು, ಡಿಸೆಂಬರ್ 19; ಬೆಂಗಳೂರು ನಗರದಲ್ಲಿ ಕಡಲೆ ಕಾಯಿ ಪರಿಷೆ, ಅವರೆ ಮೇಳ, ಕರಗ ಉತ್ಸವದಂತೆ ಪ್ರತಿ ವರ್ಷ ಚಿತ್ರಸಂತೆ ನಡೆಯುತ್ತದೆ. ಪ್ರತಿ ವರ್ಷವೂ ವಿವಿಧ ಪರಿಕಲ್ಪನೆಯಡಿ ಒಂದು ದಿನದ ಚಿತ್ರಸಂತೆಯನ್ನು ಕುಮಾರಕೃಪಾ ರಸ್ತೆಯಲ್ಲಿ ಆಯೋಜನೆ ಮಾಡಲಾಗುತ್ತದೆ.
ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುವ ಚಿತ್ರಸಂತೆ 2024ರ ಜನವರಿ 7ರ ಭಾನುವಾರ ನಡೆಯಲಿದೆ. ಅಂತರಿಕ್ಷಯಾನದ ಶೀರ್ಷಿಕೆಯೊಂದಿಗೆ ಚಿತ್ರಸಂತೆಯನ್ನು ಆಯೋಜನೆ ಮಾಡಲಾಗಿದೆ. ಈಗಾಗಲೇ ಇದರಲ್ಲಿ ಪಾಲ್ಗೊಳ್ಳಲು ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ.

'ಎಲ್ಲರಿಗಾಗಿ ಕಲೆ' ಎಂಬ ಶೀರ್ಷಿಕೆಯಡಿ ಕುಮಾರಕೃಪಾ ರಸ್ತೆಯಲ್ಲಿ ನಡೆಯುತ್ತಿರುವ 21ನೇ ಚಿತ್ರಸಂತೆ ಇದಾಗಿದೆ. ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 100 ರೂ. ಇಂದ ಸಾವಿರಾರು ರೂಪಾಯಿ ವರೆಗಿನ ವಿವಿಧ ಕಲಾವಿದರ ಚಿತ್ರಗಳನ್ನು ಚಿತ್ರಸಂತೆಯಲ್ಲಿ ಕಾಣಬಹುದು.
ಚಂದ್ರಯಾನ ಯಶಸ್ಸು; ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆಯಲ್ಲಿ ಈ ಬಾರಿ ಅಂತರಿಕ್ಷಯಾದನ ಪರಿಕಲ್ಪನೆಯಡಿ ಚಿತ್ರಸಂತೆ ಆಯೋಜನೆ ಮಾಡಲಾಗಿದೆ. ರಾಕೆಟ್, ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳನ್ನು ಚಿತ್ರಸಂತೆಯಲ್ಲಿ ಕಾಣಬಹುದಾಗಿದೆ.
ಪ್ರತಿವರ್ಷವೂ ಜನವರಿ ಮೊದಲ ವಾರದಲ್ಲಿ ಕುಮಾರಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಚಿತ್ರಸಂತೆ ಆಯೋಜನೆ ಮಾಡಲಾಗುತ್ತದೆ. ಅಂದು ರಸ್ತೆಯನ್ನು ಸಂಪೂರ್ಣವಾಗಿ ಕಲಾವಿದರಿಗೆ ಮೀಸಲಿಡಲಾಗುತ್ತದೆ. ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗುತ್ತದೆ.
ತೈಲ ಮತ್ತು ಜಲವರ್ಣ, ಕೊಲಾಜ್, ಲಿಥೋಗ್ರಾಫ್, ಗ್ರಾಫಿಕ್ ಸೇರಿದಂತೆ ವಿವಿಧ ಮಾದರಿಯ ಕಲಾಕೃತಿಗಳನ್ನು ಚಿತ್ರಸಂತೆಯಲ್ಲಿ ನೋಡಬಹುದು ಮತ್ತು ಖರೀದಿ ಮಾಡಲು ಸಹ ಅವಕಾಶವಿದೆ. ಚಿತ್ರಕಲಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಆರ್ಯಮೂರ್ತಿ, ದಾನಿಗಳಾದ ಕೇಜ್ರಿವಾಲ್, ದಿ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಹೆಸರಿಯಲ್ಲಿ ತಲಾ 50 ಸಾವಿರ ರೂ. ನಗದು ಒಳಗೊಂಡ ಬಹುಮಾನವನ್ನು ಸಾಧಕರಿಗೆ ನೀಡಲಾಗುತ್ತದೆ. ಮೂರು ಪ್ರಶಸ್ತಿಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಕುಮಾರಕೃಪಾ ರಸ್ತೆಯಲ್ಲಿ ಸುಮಾರು 1200 ಮಂದಿಗೆ ಮಳಿಗೆ ನಿರ್ಮಾಣ ಮಾಡಲು ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಕಲಾವಿದರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲೆನೆ ಮಾಡುವ ಕಾರ್ಯವೂ ನಡೆಯುತ್ತಿದೆ. ಇದು ರಾಷ್ಟ್ರೀಯ ಮಟ್ಟದ ಚಿತ್ರಸಂತೆಯಾಗಿದೆ. ಆದ್ದರಿಂದ ಒಡಿಶಾ, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರಿಗೆ ಸಹ ಅವಕಾಶವನ್ನು ನೀಡಲಾಗುತ್ತದೆ.
ಕರ್ನಾಟಕದ ಚಿತ್ರಕಲಾ ಪರಿಷತ್ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಚಿತ್ರಸಂತೆ ಆಯೋಜನೆ ಮಾಡುತ್ತದೆ. ಪ್ರತಿವರ್ಷವೂ ಮುಖ್ಯಮಂತ್ರಿಗಳು ಚಿತ್ರಸಂತೆಗೆ ಚಾಲನೆ ನೀಡುತ್ತಾರೆ. ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾ ಸಹ ಕುಮಾರಕೃಪಾ ರಸ್ತೆಯಲ್ಲಿಯೇ ಇದೆ. ಚಿತ್ರಪ್ರೇಮಿಗಳ ಪಾಲಿನ ಕುಂಭಮೇಳ ಇದಾಗಿದ್ದು, ಭಾನುವಾರ ನಡೆಯುವುದರಿಂದ ನಗರದ ನಾನಾ ಭಾಗದ ಚಿತ್ರಪ್ರೇಮಿಗಳು ಚಿತ್ರಸಂತೆಗೆ ಆಗಮಿಸುತ್ತಾರೆ.
ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಮೂಲಕವೇ ಚಿತ್ರಸಂತೆ ಆಯೋಜನೆ ಮಾಡಲಾಗಿತ್ತು. ಈಗ ಕೋವಿಡ್ ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಕುಮಾರಕೃಪಾ ರಸ್ತೆಯಲ್ಲಿ ಆಯೋಜಿಸಲಾಗುತ್ತಿದೆ. ಇಡೀ ದಿನ ರಸ್ತೆ ಮತ್ತು ಚಿತ್ರಕಲಾ ಪರಿಷತ್ ಆವರಣದಲ್ಲಿ ಸಾವಿರಾರು ಕಲಾವಿದರು, ಚಿತ್ರರಸಿಕರು ಜಮಾವಣೆಗೊಳ್ಳಲಿದ್ದಾರೆ.
ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸುವ ಹಾಗೂ ಅವರ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸಲು ಚಿತ್ರಸಂತೆಯನ್ನು ಆಯೋಜಿಸಲಾಗುತ್ತದೆ. 19ನೇ ಚಿತ್ರಸಂತೆಗೆ ಸುಮಾರು 4 ಲಕ್ಷ ಜನರು ಆಗಮಿಸಿದ್ದರು. 3 ಕೋಟಿ ರೂ.ಗೂ ಅಧಿಕ ಮೊತ್ತದ ವಹಿವಾಟು ನಡೆದಿತ್ತು.
ಈ ಬಾರಿಯು ಮೈಸೂರು ಸಾಂಪ್ರದಾಯಿಕ ಶೈಲಿ, ರಾಜಸ್ಥಾನಿ ಶೈಲಿ, ಮಧು ಬನಿಯ ಶೈಲಿ, ತೈಲ ಮತ್ತು ಜಲವರ್ಣದ ಕಲಾಕೃತಿಗಳು ಲಭ್ಯವಿರಲಿದೆ. ವ್ಯಂಗ್ಯಚಿತ್ರಗಳ ಪ್ರದರ್ಶನ ಮತ್ತು ಮಾರಾಟ, ಸ್ಥಳದಲ್ಲೇ ಕುಂಚ ಮತ್ತು ಪೆನ್ಸಿಲ್‌ನಿಂದ ಭಾವಚಿತ್ರವನ್ನು ರಚಿಸುವ ಕಲಾವಿದರು ಸಹ ಆಗಮಿಸುತ್ತಾರೆ.












Click it and Unblock the Notifications