ಚಿಕ್ಕಪೇಟೆ ಚುನಾವಣಾ ಫಲಿತಾಂಶ 2023; ಬಿಜೆಪಿಗೆ ಗೆಲುವು
ಬೆಂಗಳೂರು, ಮೇ 13; ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ ಜಯಗಳಿಸಿದ್ದಾರೆ. ಅವರು ಚುನಾವಣೆಯಲ್ಲಿ 57136 ಮತಗಳನ್ನು ಪಡೆದಿದ್ದಾರೆ.
ಕಾಂಗ್ರೆಸ್‌ನ ಆರ್. ವಿ. ದೇವರಾಜ್ 45114 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ಇಮ್ರಾನ್ ಪಾಷ 1,582 ಮತಗಳನ್ನು ಗಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಮತ್ತು ತಮ್ಮ ಆಸ್ತಿಯ ಮೂಲಕವೇ ಸುದ್ದಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು 20921 ಮತ ಪಡೆದು ಸೋಲು ಕಂಡಿದ್ದಾರೆ.
ಹಿಂದಿನ ಅಪ್‌ಡೇಟ್; ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕನೇ ಸುತ್ತಿನ ಮತಎಣಿಕೆಯಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ 1606 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು 12,439 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌ನ ಆರ್. ವಿ. ದೇವರಾಜ್ 10,833 ಮತಗಳನ್ನು ಪಡೆದಿದ್ದಾರೆ.
ಬೆಂಗಳೂರು ನಗರ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಚಿಕ್ಕಪೇಟೆ. ಬಹುಭಾಷಿಕರ ನೆಲ, ಜವಳಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿರುವ ಚಿಕ್ಕಪೇಟೆಯ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ನಗರದ ಹಳೆಯ ಬಡಾವಣೆಯಾದ ಚಿಕ್ಕಪೇಟೆಯಲ್ಲಿ ಈ ಬಾರಿಯ ಚುನಾವಣೆಗೆ ಕಾಂಗ್ರೆಸ್‌ನ ಆರ್. ವಿ. ದೇವರಾಜ್, ಬಿಜೆಪಿಯ ಉದಯ್ ಗರುಡಾಚಾರ್, ಜೆಡಿಎಸ್‌ನ ಇಮ್ರಾನ್ ಪಾಷ ಕಣದಲ್ಲಿರುವ ಪ್ರಮುಖರು. ಯೂಸಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎಎಪಿಯಿಂದ ಪ್ರಸಿದ್ಧ ವಕೀಲ ಬ್ರಿಜೇಶ್ ಕಾಳಪ್ಪ ಅಭ್ಯರ್ಥಿ.

ಚಿಕ್ಕಪೇಟೆ ಕ್ಷೇತ್ರ ಜಯನಗರ, ಬಸವನಗುಡಿ, ಶಾಂತಿನಗರ, ವಿಲ್ಸನ್ ಗಾರ್ಡನ್‌ನ ಕೆಲವು ಪ್ರದೇಶಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ರಾಜಸ್ಥಾನ ಮತ್ತು ಗುಜರಾತಿನ ವ್ಯಾಪಾರಿಗಳು ಮಾತ್ರವಲ್ಲ. ತೆಲಗು ಮತ್ತು ತಮಿಳು ಭಾಷಿಗರೂ ಇದ್ದಾರೆ. ಕ್ಷೇತ್ರದಲ್ಲಿ ಸಿರಿವಂತರು, ವ್ಯಾಪಾರಿಗಳು ಮಾತ್ರವಿಲ್ಲ, ಕೊಳಗೇರಿ ನಿವಾಸಿಗಲೂ ಇದ್ದಾರೆ.
ಕ್ಷೇತ್ರದಲ್ಲಿ 2004 ಮತ್ತು 2008ರಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್‌ನ ಆರ್. ವಿ. ದೇವರಾಜ್ ಗೆದ್ದಿದ್ದರು. 2018ರಲ್ಲಿ ಆರ್. ವಿ. ದೇವರಾಜ್ 7,934 ಮತಗಳ ಅಂತರದಿಂದ ಸೋಲು ಕಂಡರು. ಬಿಜೆಪಿಯ ಉದಯ್ ಗರುಡಾಚಾರ್ ಗೆದ್ದರು. ಈ ಬಾರಿ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟಿದೆ.
ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಭ್ಯರ್ಥಿ ಘೋಷಣೆಗೂ ಮೊದಲೇ ಬೆಂಗಳೂರಿನ ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿದರು. ಕೆಜಿಎಫ್ ಬಾಬು ಕಾಂಗ್ರೆಸ್ ಟಿಕೆಟ್ ಸಿಗದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದರು. ಗಂಗಾಬಿಕೆ ಮಲ್ಲಿಕಾರ್ಜುನ್ ಮನವೊಲಿಸಿದ ಪಕ್ಷದ ನಾಯಕರು ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡಿದರು.
ಇಮ್ರಾನ್ ಪಾಷ, ಯೂಸಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಮತ್ತು ಎಸ್‌ಡಿಪಿಐ ಅಭ್ಯರ್ಥಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಮತ ವಿಭಜನೆಯ ಚಿಂತೆಯಲ್ಲಿದ್ದಾರೆ.












Click it and Unblock the Notifications