ಜಲಮಂಡಳಿ ಬಿಲ್ ಪಾವತಿಯಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು, ಅಕ್ಟೋಬರ್ 18 : ಬೆಂಗಳೂರು ಜಲಮಂಡಳಿ ನೀರಿನ ಬಿಲ್ ಪಾವತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ನವೆಂಬರ್ 1ರಿಂದಲೇ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಲಮಂಡಳಿ ನೀರಿನ ಶುಲ್ಕವನ್ನು ನವೆಂಬರ್ 1ರಿಂದ ಚೆಕ್ ಅಥವ ಡಿಡಿ ಮೂಲಕ ಸ್ವೀಕಾರ ಮಾಡುವುದನ್ನು ರದ್ದುಗೊಳಿಸಲಾಗಿದೆ. ಡಿಜಿಟಲ್ ಪೇಮೆಂಟ್ ಮೂಲಕ ಬಿಲ್‌ಗಳನ್ನು ಪಾವತಿ ಮಾಡಲು ಅವಕಾಶ ನೀಡಲಾಗಿದೆ.
ನೀರಿನ ಬಿಲ್ ಪಾವತಿಸಿದ ಚೆಕ್ ಮತ್ತು ಡಿಡಿಗಳು ಹಲವು ಬಾರಿ ಬ್ಯಾಂಕ್‌ನಿಂದ ತಿರಸ್ಕೃತವಾಗುತ್ತಿವೆ. ಈ ಹಿನ್ನಲೆಯಲ್ಲಿ ನೀರಿನ ಬಿಲ್ ಪಾವತಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ಹೇಳಿದೆ.

ಡಿಜಿಟಲೀಕರಣವನ್ನು ಪ್ರೋತ್ಸಾಹಿಸಲು ಮತ್ತು ಬಿಲ್ ಪಾವತಿಯನ್ನು ಮತ್ತಷ್ಟು ಸರಳಗೊಳಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಜನರು ಜಲಮಂಡಳಿ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.
ಜನರು ನೀರಿನ ಶುಲ್ಕವನ್ನು ಬಿಬಿಪಿಎಸ್, ಪೇಟಿಎಂ, ಭೀಮ್, ಪೇಯು, ಫೋನ್ ಪೇ, ಗೂಗಲ್ ಪೇ ಸೇರಿದಂತೆ ವಿವಿಧ ಮಾದರಿಯ ವ್ಯವಸ್ಥೆ ಮೂಲಕ ಪಾವತಿ ಮಾಡಬಹುದಾಗಿದೆ.
ಕೋವಿಡ್ ಸಂದರ್ಭದಲ್ಲಿ ಜಲಮಂಡಳಿ ನೀರಿನ ಬಿಲ್ ಮೊತ್ತವನ್ನು ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್ ರೂಪದಲ್ಲಿ ಕಳಿಸುವ ವ್ಯವಸ್ಥೆಯನ್ನು ಮಾಡಿತ್ತು. ಜಲಮಂಡಳಿ ವೆಬ್‌ಸೈಟ್‌ನಲ್ಲಿಯೂ ಬಿಲ್ ಪಡೆಯುವ ವ್ಯವಸ್ಥೆಯನ್ನು ಮಾಡಿತ್ತು.
ಜಲಮಂಡಳಿ ನೀರಿನ ದರ ಪರಿಷ್ಕರಣೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬೆಂಗಳೂರು ನಗರ ಉಸ್ತುವಾರಿ ಸಚಿವರು. ಕೆಲವು ದಿನಗಳ ಕಾಲ ದರ ಏರಿಕೆ ಮಾಡುವುದು ಬೇಡ ಎಂದು ಅವರು ಸೂಚಿಸಿದ್ದಾರೆ. ಆದ್ದರಿಂದ, ದರ ಹೆಚ್ಚಳವಾಗಿಲ್ಲ.












Click it and Unblock the Notifications