ಕರ್ನಾಟಕದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಸೌಲಭ್ಯ ಪರಿಚಯ: ದಿನೇಶ್ ಗುಂಡೂರಾವ್
ಬೆಂಗಳೂರು, ಮೇ 20: ಕರ್ನಾಟಕದಲ್ಲಿ ಯಾರೆಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತೀರೋ ಅವರಿಗೆಲ್ಲ ಗುಡ್ ನ್ಯೂಸ್ ಸಿಕ್ಕಿದೆ. ಸರ್ಕಾರಿ ಆಸ್ಪತ್ರೆಗಳು ಯಾವ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ಇಲ್ಲ ಎಂಬಂತೆ ಮಾಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 'ಕೀಮೋಥೆರಪಿ ಸೌಲಭ್ಯ' ಪರಿಚಯಿಸುತ್ತಿದ್ದು, ಮೈಸೂರಿನಲ್ಲಿ ಶೀಘ್ರವೇ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಪ್ಡೇಟ್ ಕೊಟ್ಟಿದ್ದಾರೆ.
ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ಭಾನುವಾರ ಸ್ಪರ್ಶ್ ಆಸ್ಪತ್ರೆ ಸಮೂಹ ಸಂಸ್ಥೆಯು ನೂತನವಾಗಿ ಆರಂಭಿಸಿದ 'ವಿಶೇಷ ಚಿಕಿತ್ಸಾ ಸೌಲಭ್ಯಗಳು ಇರುವ 'ಸ್ಪರ್ಶ್ ಆಸ್ಪತ್ರೆ' ಶಾಖೆಗೆ ಸಚಿವರು ಚಾಲನೆ ನೀಡಿ ಮಾಹಿತಿ ನೀಡಿದರು. ಸರ್ಕಾರಿ ಆಸ್ಪತ್ರೆಗೆ ಬರುವ ಬಡರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಮಾಡಿಸಲು ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದಾರೆ. ಆ ಸೌಲಭ್ಯ ಸರ್ಕಾರಿ ಆಸ್ಪತ್ರೆಯಲ್ಲಿಯೇ ಲಭ್ಯವಾದರೆ ಜನರಿಗೆ ಸಹಕಾರಿಯಾಗಿದೆ. ಶೀಘ್ರವೇ ಈ ಹೊಸ ಸೌಲಭ್ಯ ಜಾರಿಗೆ ತರುತ್ತೇವೆ ಎಂದು ವಿವರಿಸಿದರು.

ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳ ರೀತಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನಾಗಿ ಮಾಡುವುದು ಕಷ್ಟಸಾಧ್ಯ, ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲೂ ಆಧುನಿಕ ತಂತ್ರಜ್ಞಾನಗಳೊಂದಿಗೆ ಸುಧಾರಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿದ್ದೇವೆ, ಸಾಕಷ್ಟು ಸೌಲಭ್ಯಗಳನ್ನು ರೋಗಿಗಳ ಸೇವೆಗೆ ಲಭ್ಯವಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಬಡ ಮಕ್ಕಳೂ ಸಹ ವೈದ್ಯರಾಗಬೇಕು ಎಂಬ ಕನಸನ್ನು ನನಸು ಮಾಡಲು, ಸರ್ಕಾರಿ ಕೋಟಾದಡಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಿಸಿದ್ದೇವೆ. ಇತರೆ ರಾಜ್ಯಗಳಿ ಹೋಲಿಸಿದರೆ ನಮ್ಮಲ್ಲಿಯೇ ಹೆಚ್ಚು ಸರ್ಕಾರಿ ಕೋಟಾ ವೈದ್ಯಕೀಯ ಸೀಟು ಮೀಸಲಿಡಲಾಗಿದೆ ಎಂದು ಹೇಳಿದರು.
300 ಹಾಸಿಗೆಯುಳ್ಳ ಹೊಸ ಸ್ಪರ್ಶ್ ಆಸ್ಪತ್ರೆ
ಸ್ಪರ್ಶ್ ಆಸ್ಪತ್ರೆ ಸಮೂಹವು ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿ ನೂತನವಾಗಿ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಬಹು ವಿಭಾಗೀಯ ರೋಗಿ ಕೇಂದ್ರಿತ ಚಿಕಿತ್ಸೆ, ಅತ್ಯುತ್ತಮ ಗುಣಮಟ್ಟದ ಮತ್ತು ಎಲ್ಲರಿಗೂ ಲಭ್ಯವಾಗುವಂತಿರುವ 300 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ಇದಾಗಿದೆ.
ಎಲ್ಲ ಬಗೆಯ ಚಿಕಿತ್ಸಾ ಸೇವೆಗಳನ್ನೊಳಗೊಂಡ ಈ ಸ್ಪರ್ಶ್ ಆಸ್ಪತ್ರೆಯು ಮೂಳೆ, ನರ ವಿಜ್ಞಾನ, ಹೃದ್ರೋಗ ವಿಭಾಗ, ಕ್ಯಾನ್ಸರ್ ಚಿಕಿತ್ಸೆಗಳೂ ಸೇರಿದಂತೆ ಅಂಗಾಂಗ ಕಸಿ ಸೇರಿ ವಿವಿಧ ಚಿಕಿತ್ಸೆಗಳು ಇಲ್ಲಿ ಸಿಗುತ್ತವೆ. ಮಹಿಳೆಯರು ಮತ್ತು ಮಕ್ಕಳ ಪ್ರತ್ಯೇಕ ಕೇಂದ್ರವನ್ನು ಒಳಗೊಂಡಿದೆ.
ಈ ನೂತನ ಆಸ್ಪತ್ರೆ ಉದ್ಘಾಟನೆಯೊಂದಿಗೆ ನಾವು ನಿಖರವಾದ, ಸಹಾನುಭೂತಿಯ ಹಾಗೂ ಎಲ್ಲ ವರ್ಗಗಳ ಕೈಗೆಟಕುವಂತೆ ಸೇವೆ ನೀಡುವ ನಮ್ಮ ಧ್ಯೇಯವನ್ನು ಮುಂದುವರಿಸುತ್ತಿದ್ದೇವೆ. ರೋಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳು, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ರೋಗನಿರ್ಣಯಗಳು ಹಾಗೂ 3 ಡಿ ಮುದ್ರಣ ತಂತ್ರಜ್ಞಾನವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು ನಮ್ಮ ಸಮುದಾಯಗಳಿಗೆ ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಹೆಚ್ಚು ಹೆಚ್ಚಾಗಿ ನೀಡುವ ಗುರಿ ಹೊಂದಿದ್ದೇವೆ ಎಂದು ಸ್ಪರ್ಶ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್ ಹೇಳಿದರು.
ವೈದ್ಯಕೀಯ ವಿಚಾರದಲ್ಲಿ ಅತ್ಯುನ್ನತ ಮಟ್ಟದ ಚಿಕಿತ್ಸೆ ಜೊತೆಗೆ ಸುಮಾರು 2,500 ಮಂದಿಗೆ ನೇರ ಉದ್ಯೋಗಾವಕಾಶವನ್ನೂ ಈ ಬೃಹತ್ ಆಸ್ಪತ್ರೆಯು ಒದಗಿಸುತ್ತಿದ್ದು ಈ ಭಾಗದ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲಿದೆ ಎಂದು ಡಾ.ಪಾಟೀಲ್ ತಿಳಿಸಿದರು.
ಸ್ಪರ್ಶ್ ಆಸ್ಪತ್ರೆ ಸಮಮೂಹದ ವಿಸ್ತರಣಾ ಯೋಜನೆಯಲ್ಲಿ ಹೆಣ್ಣೂರು ಆಸ್ಪತ್ರೆ ಉದ್ಘಾಟನೆಯು ಮಹತ್ವದ ಮೈಲಿಗಲ್ಲಾಗಿದ್ದು ಈ ವರ್ಷಾಂತ್ಯದೊಳಗೆ 9 ಆಸ್ಪತ್ರೆಗಳಲ್ಲಿ 1,700 ಹಾಸಿಗೆ ಸಾಮರ್ಥ್ಯದ ಗುರಿ ಹೊಂದಲಾಗಿದೆ ಎಂದರು.












Click it and Unblock the Notifications