Chandrayaan 3 ಲ್ಯಾಂಡಿಂಗ್ ಸೈಟ್‌ಗೆ 'ಇಸ್ರೋ ಬೆಂಗಳೂರು' ಎಂದು ನಾಮಕರಣ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 25: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಮಾಡಿರುವ ಸಾಫ್ಟ್ ಲ್ಯಾಂಡಿಂಗ್ ಸೈಟ್‌ಗೆ 'ಇಸ್ರೋ ಬೆಂಗಳೂರು' ಅಥವಾ 'ಬೆಂಗಳೂರು' ಎಂದು ಹೆಸರಿಡಲು ಚರ್ಚೆಗಳು ನಡೆಯುತ್ತಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಲ್ಯಾಂಡಿಂಗ್ ಮಾಡ್ಯೂಲ್ ವಿಕ್ರಮ್ ಇಳಿದ ಸ್ಥಳಕ್ಕೆ ಹೆಸರನ್ನು ನೀಡಲು ಯೋಜಿಸುತ್ತಿದ್ದಾರೆ. ಪರಿಗಣಿಸಲಾದ ಹೆಸರುಗಳಲ್ಲಿ 'ಬೆಂಗಳೂರು' ಮತ್ತು 'ಇಸ್ರೋ ಬೆಂಗಳೂರು' ಪ್ರಮುಖವಾಗಿವೆ.
ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು. ಇದು ದಕ್ಷಿನ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶವಾಗಿದೆ. ಲ್ಯಾಂಡಿಂಗ್ ನಂತರ, ರೋವರ್, ಪ್ರಗ್ಯಾನ್, ಲ್ಯಾಂಡರ್ ವಿಕ್ರಮ್ ಮಾಡ್ಯೂಲ್‌ನಿಂದ ಹೊರಬಿದ್ದಿವೆ. ಅವುಗಳ ವೈಜ್ಞಾನಿಕ ಪ್ರಯೋಗಗಳನ್ನು ಪ್ರಾರಂಭಿಸಿವೆ.

ಚಂದ್ರನ ಮೇಲೆ ಇಳಿದ ಸ್ಥಳವನ್ನು 'ಬೆಂಗಳೂರು' ಅಥವಾ 'ಇಸ್ರೋ ಬೆಂಗಳೂರು' ಎಂದು ಹೆಸರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಅಭಿಯಾನವನ್ನು ಪ್ರಾರಂಭಿಸಿವೆ.
'ಚಂದ್ರಯಾನ 3 ರಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಇಸ್ರೋನಲ್ಲಿರುವ ಹಲವಾರು ವಿಜ್ಞಾನಿಗಳು ಕರ್ನಾಟಕದವರು. ಇಸ್ರೋ ಪ್ರಧಾನ ಕಛೇರಿ ಕೂಡ ಬೆಂಗಳೂರಿನಲ್ಲಿದೆ. ಹೀಗಾಗಿ ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ಬೆಂಗಳೂರಿನ ಹೆಸರಿಡಬೇಕು' ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ಕನ್ನಡಪರ ಸಂಘಟನೆಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಸ್ಟ್ರಾಕ್) ನಿರ್ದೇಶಕ ಬಿಎನ್ ರಾಮಕೃಷ್ಣ, 'ಈ ಹೆಸರುಗಳನ್ನು ಇಡಲು ಸಾಧ್ಯವಿದ್ದು, ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು' ಎಂದು ತಿಳಿಸಿದ್ದಾರೆ.
'ಇದು ಜನರ ಆಶಯವಾಗಿದೆ. ಇದನ್ನು ನಾವು ಮಾಡಬಹುದು. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರ ನಮ್ಮದು. ಈ ಹಿಂದೆ, ಇತರ ಮೂರು ರಾಷ್ಟ್ರಗಳು ಸಹ ಹೆಸರುಗಳನ್ನು ನೀಡಿವೆ. ನಾವು ಖಂಡಿತವಾಗಿಯೂ ಸ್ಥಳಕ್ಕೆ ಹೆಸರಿಸುತ್ತೇವೆ. ನಾವು ನಮ್ಮ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ಪ್ರಸ್ತುತ, ನಮ್ಮಲ್ಲಿ ಯಾವುದೇ ಹೆಸರುಗಳಿಲ್ಲ. ಆದರೆ ನಾವು ಅದನ್ನು ಚರ್ಚಿಸುತ್ತೇವೆ ಮತ್ತು ಅಂತಿಮಗೊಳಿಸುತ್ತೇವೆ' ಎಂದು ISTRAC ನಿರ್ದೇಶಕರು ಹೇಳಿದ್ದಾರೆ.
ಈ ವಿಚಾರವನ್ನು ಮೊದಲು 2019 ರಲ್ಲಿ ಚಂದ್ರಯಾನ-2 ಉಡಾವಣೆ ಸಮಯದಲ್ಲಿ ಚರ್ಚಿಸಲಾಯಿತು. ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್ ಆಗ ಹೆಸರಿಸುವ ಕುರಿತು ಮಾತನಾಡಿದ್ದರು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದರು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯುವ ಸಮಯದಲ್ಲಿ ಯಶಸ್ಸು ಕಾಣದ ಕಾರಣ ಈ ಕಲ್ಪನೆಯನ್ನು ಕೈಬಿಡಲಾಯಿತು ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಂಗಳೂರಿಗೆ ಆಗಮಿಸಲಿದ್ದು, ISTRAC ನಲ್ಲಿ ವಿಜ್ಞಾನಿಗಳನ್ನು ಭೇಟಿಯಾಗಲಿದ್ದಾರೆ. ಚಂದ್ರಯಾನ-3 ಮಿಷನ್‌ನ ಯಶಸ್ಸಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ಶನಿವಾರದಂದು ವಿಜ್ಞಾನಿಗಳೊಂದಿಗೆ ಪ್ರಧಾನಿ ಮೋದಿಯವರು ಸಭೆ ನಡೆಸಲಿದ್ದಾರೆ. ಆ ಸಂದರ್ಭದಲ್ಲಿ ಲ್ಯಾಂಡರ್‌ನ ಸ್ಥಳವನ್ನು ಹೆಸರಿಸುವ ಕುರಿತು ಚರ್ಚೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications