NH-44: ಚಂದಾಪುರ-ಅತ್ತಿಬೆಲೆ ಹೈವೇ ಕಾಮಗಾರಿ ವಿಳಂಬ, ಅವ್ಯವಸ್ಥೆ: ಲಾರಿ ಸಿಲುಕಿದರೂ ಬಾರದ ಅಧಿಕಾರಿಗಳು! ಜನ ಹೈರಾಣು

ಬೆಂಗಳೂರು: ನಗರದ ಬೊಮ್ಮಸಂದ್ರ ಹಾಗೂ ಎಲೆಕ್ಟ್ರಾನಿಕ್ ಸಿಟಿ ದಾಟುತ್ತಿದ್ದಂತೆ 'ಚಂದಾಪುರ-ಅತ್ತಿಬೆಲೆ'(NH44) ಮಾರ್ಗದ ಸವಾರರು, ಪ್ರಯಾಣಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಒಂದೆಡೆ ಹೈವೇ ಕಾಮಗಾರಿ ಕೈಗೊಂಡು ಅನೇಕ ವಾರಗಳು ಕಳೆದರೂ ಕೆಲಸ ಪೂರ್ಣವಾಗಿಲ್ಲ. ಇದೇ ಹೆದ್ದಾರಿಯ ದಟ್ಟಣೆಯಲ್ಲಿ ಸಿಲುಕಿದ್ದ 51 ವರ್ಷದ ಸಾಜಿರ್ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 30 ನಿಮಿಷ ದಟ್ಟಣೆಯಲ್ಲಿ ಸಿಲುಕಿದ್ದು, ಸಂಕಷ್ಟ ಸಮಯದಲ್ಲಿ ಆಸ್ಪತ್ರೆಗೆ ಹೋಗಲಾಗಿಲ್ಲ, ಹೀಗಾಗಿ ವ್ಯಕ್ತಿ ಜೀವ ಬಿಟ್ಟಿದ್ದಾರೆ. ಇನ್ನೂ ಕಳೆದ 24 ಗಂಟೆಯಲ್ಲಿ ಚಂದಾಪುರ ಬಳಿ ಹೆದ್ದಾರಿ ಪಕ್ಕ ಲಾರಿಯೊಂದು ಸಿಕ್ಕಿಹಾಕಿಕೊಂಡಿದೆ. ಅದರ ಮೇಲೆ ಮರ ಬಿದ್ದಿದೆ. ಮೊದಲೇ ಸಂಚಾರ ಸಮಸ್ಯೆಗೆ ಹೈರಾಣಾಗಿದ್ದ ಜನರು ಇದೀಗ ಮತ್ತಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಗಂಟೆಗಟ್ಟಲೇ ರಸ್ತೆಗಳಲ್ಲಿ ನರಳುತ್ತಿದ್ದಾರೆ. ಈ ಕುರಿತು NHAI, GBA, ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿದ 'ಒನ್ ಇಂಡಿಯಾ ಕನ್ನಡ'ಕ್ಕೆ ಅಧಿಕಾರಿಗಳು ಹೇಳಿದ್ದೇನು? ಅಲ್ಲಿನ ಸಮಸ್ಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಅತ್ತಿಬೆಲೆ, ಚೆಂದಾಪುರದಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್‌ ಕಡೆಗೆ ಬರುವವರು, ಹೋಗುವವರು ನಿತ್ಯವು ದೀರ್ಘ ಕಾಲದ ಸಂಚಾರ ಅಡಚಣೆಗೆ ಸಾಕ್ಷಿಯಾಗಿದ್ದಾರೆ. ಬೆಂಗಳೂರು- ಹೊಸೂರು-ಸೆಲಂ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಅತ್ತಿಬೆಲೆ, ಚೆಂದಾಪುರ ಕೆಲವು ಭಾಗಗಳಲ್ಲಿ ಹೈವೇ ದುರಸ್ತಿ, ವಿಸ್ತರಣೆ ಕೆಲಸ ನಡೆಸಲಾಗುತ್ತಿದೆ. ಈ ಕಾಮಗಾರಿ ನಿರಂತರ ವಿಳಂಬದಿಂದಾಗಿ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಓಡಾಡಬೇಕಿದ್ದು, ಸಂಚಾರ ನಿಧಾನಗತಿಯಲ್ಲಿದೆ. ಹೈವೇಯಲ್ಲಿ ಪೀಕ್ ಹವರ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ವಾಹನ ಸವಾರರು, ಪ್ರಯಾಣಿಕರು, ಶಾಲಾ ಮಕ್ಕಳು ನಿತ್ಯವು ಮಾನಸಿಕ ಯಾತನೆ ಅನುಭವಿಸುತ್ತಿದ್ದಾರೆ.

Chandapura-Attibele Highway Traffic

ಜಂಕ್ಷನ್ ಗಳ ಕಳಪೆ ನಿರ್ವಹಣೆ: ನಿತ್ಯವೂ ದಟ್ಟಣೆಯಲ್ಲಿ 40 ನಿಮಿಷ..!

ಇನ್ನೂ ಹೆದ್ದಾರಿ ಪ್ರಮುಖ ಜಂಕ್ಷನ್, ಸಿಗ್ನಲ್‌ಗಳನ್ನು ನಿರ್ವಹಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿಫಲವಾಗಿದೆ. ಇದರಿಂದ ಚಂದಾಪುರ ಮೇಲ್ಸೇತುವೆ ಬಳಿ ನೆನ್ನೆ ಭಾರೀ ದಟ್ಟಣೆ ಉಂಟಾಗಿತ್ತು. ಈ ಮಾರ್ಗದಲ್ಲಿ ಬರುವ ವಾಹನಗಳು 30-40 ನಿಮಿಷ ದಟ್ಟಣೆಯಲ್ಲಿ ಕಾಯಬೇಕಾದ ಸ್ಥಿತಿ ಇದೆ. ಇಷ್ಟಾದರೂ ಈ ಮಾರ್ಗದಲ್ಲಿ ಟ್ರಾಫಿಕ್ ಪೊಲೀಸರು ಕಾಣುವುದು ಅಪರೂಪವಾಗಿದೆ. ಮಳೆ ಬಂದರಂತೂ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸುತ್ತಿದೆ.

ರಸ್ತೆ ಕಾಮಗಾರಿ, ಕಾರಿಡಾರ್ ಕೆಲಸಗಳು ಆಮೆಗತಿಯಲ್ಲಿವೆ. ಸಂಚಾರಕ್ಕೆ ಸುಸೂತ್ರ ರಸ್ತೆ ಮೂಲಸೌಕರ್ಯ ಇಲ್ಲ. ನಿತ್ಯವು ದಟ್ಟಣೆಯಲ್ಲಿ ಸಮಯ ವ್ಯಯಿಸಬೇಕಿದೆ. ಪರೀಕ್ಷೆಗೆ ತೆರಳುವ ಶಾಲಾ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ, ಸಮರ್ಪಕ ರಸ್ತೆ ಮೂಲಸೌಕರ್ಯ ಇಲ್ಲದೇ ಸವಾರ ಮೇಲೆ ಹೆದ್ದಾರಿ ಶುಲ್ಕ ವಿಧಿಸುವುದೇ? ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಸಿಲುಕಿದ ಲಾರಿ, ಬಿದ್ದ ಮರ: ಹೇಳೋರಿಲ್ಲ, ಕೇಳೋರಿಲ್ಲ! ವಾಸ್ತವ ಹೀಗಿದೆ

ಚಂದಾಪುರ ಬಳಿ ರಸ್ತೆಯಲ್ಲಿ ಮಳೆಗೆ ಲಾರಿಯೊಂದು ಸಿಲುಕಿಕೊಂಡಿದ್ದು, ಅದರ ಮೇಲೆ ಮರ ಬಿದ್ದ ಬಗ್ಗೆ ಸ್ಥಳೀಯರು ಹಾಗೂ ಟ್ರಾಫಿಕ್ ಪೊಲೀಸರು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ಕರೆ ಮಾಡಿ ಎರಡು ಮೂರು ಬಾರಿ ದೂರು ನೀಡುತ್ತಿದ್ದಾರೆ. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆಯು ತಮಗೆ ಕರೆ ಬಂದಿರುವುದನ್ನು ಜಿಬಿಎ ಸಹಾಯವಾಣಿ ಅಧಿಕಾರಿಗಳು ದೃಢಪಡಿಸಿದ್ದಾರೆ.

ವಾಸ್ತವದಲ್ಲಿ ಚಂದಾಪುರ, ಅತ್ತಿಬೆಲೆಯು ಜಿಬಿಎ ವ್ಯಾಪ್ತಿಗೆ ಬರುವುದಿಲ್ಲ. ಅದು ಚೆಂದಾಪುರ ಪುರಸಭೆ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಅವರೊಂದಿಗೆ ಸಂಪರ್ಕಿಸಿ ಸಹಾಯ ಪಡೆಯುವಂತೆ ತಿಳಿಸಿದರು.

ಚಂದಾಪುರ ಪುರಸಭೆ ಅಧಿಕಾರಿಗಳು ಹೇಳಿದ್ದೇನು?

ಅಧಿಕಾರಿಗಳನ್ನು 'ಒನ್ ಇಂಡಿಯಾ ಕನ್ನಡ' ಸಂಪರ್ಕಿದಾಗ, 'ಲಾರಿ ಸಿಲುಕಿಕೊಂಡು, ಮರ ಬಿದ್ದಿರುವ ಘಟನೆ ನಡೆದಿರುವುದು ರಾಷ್ಟ್ರೀಯ ಹೆದ್ದಾರಿಯಲ್ಲಿ. ಅದನ್ನು ಅವರೇ ಬಂದು ತೆರೆವು ಮಾಡಬೇಕು. ನಮಗೆ ಸಂಬಂಧಪಡುವುದಿಲ್ಲ' ಎಂದು ಹೇಳಿ ಸಹಾಯಕ್ಕೆ ಬಾರದೇ, ಕನಿಷ್ಠ ಕಾಳಜಿ ತೋರದೇ ನುಣುಚಿಕೊಂಡಿದ್ದಾರೆ. ಅಸಲಿಗೆ ಆ ಭಾಗದ ಜನರ ಸಮಸ್ಯೆಗಳು, ಘಟನೆಯೇ ಅವರಿಗೆ ಗೊತ್ತಿಲ್ಲ!. ಅಧಿಕಾರಿಗಳು ಘಟನೆ ನಡೆದು ಹಲವು ಗಂಟೆಗಳಾಗಿದ್ದು, ಅದು ಎಲ್ಲಿ ನಡೆದಿದೆ? ಎಂದು ಪ್ರಶ್ನಿಸಿದ್ದಾರೆ. ಇದೆಲ್ಲ ನೋಡಿದರೆ ಇವರೆಷ್ಟು ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂಬುದು ಗೊತ್ತಾಗುತ್ತದೆ. ಇವರಿಗೆ ಸಾರ್ವಜನಿಕರ ಕಾಳಜಿ ಇಲ್ಲದಿರುವುದು ಗೊತ್ತಾಗುತ್ತದೆ.

NHAI ಅಧಿಕಾರಿಗಳು ಹೇಳಿದ್ದೇನು?

'ತಿಂಗಳುಗಳಿಂದ ಅತ್ತಿಬೆಲೆ, ಚೆಂದಾಪುರ, ಹೊಸೂರು ಮಾರ್ಗದಲ್ಲಿ ಅಲ್ಲಲ್ಲಿ ಹೈವೇ ಕಾಮಗಾರಿ ನಡೆಯುತ್ತಿರುವುದು ನಿಜ. ಬ್ಲಾಕ್ ಸ್ಪಾಟ್‌ಗಳು ಇರುವ ಕಡೆ, ಹದೆಗಟ್ಟ ರಸ್ತೆ ದುರಸ್ತಿ ಕಾರ್ಯ ನಡೆದಿದೆ. ರಸ್ತೆ ಅಂಡರ್ ಪಾಸ್ ಹಾಗೂ ಅಲ್ಲಲ್ಲಿ ವಿಸ್ತರಣೆ ಕೆಲಸ ನಡೆಯುತ್ತಿದೆ. ಇದರಿಂದ ಕೆಲವೆಡೆ ಸಮಸ್ಯೆ ಆಗುತ್ತಿದೆ' ಎಂದು ಹೆಸರು ಹೇಳಲು ಇಚ್ಛಿಸದ NHAI ಕೆಳ ಹಂತದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲು ಅವಕಾಶ ಇದೆ ಎಂದು ಯೋಜನಾ ಅಧಿಕಾರಿ ಜಯಕುಮಾರ್ ಅವರಿಗೆ ಕರೆ ಮಾಡುವಂತೆ ತಿಳಿಸಿದರು. ಈ ಮೇಲಾಧಿಕಾರಿಗಳನ್ನು ಸಂಪರ್ಕಿಸಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

ಹೈವೇಯಲ್ಲಿ ಕಾಮಗಾರಿ ನಡೆಸುತ್ತಿರುವ ಏಜೆನ್ಸಿಗಳು, ದೈನಂದಿನ ವಾಹನ ಸಂಚಾರ, ಮೂಲಸೌಕರ್ಯ ನಿರ್ಬಂಧಗಳು ಇಲ್ಲಿನ ಕಾರಿಡಾರ್, ಇತರ ಕಾಮಗಾರಿ ಪೂರ್ಣಗೊಳ್ಳಲು ತಡವಾಗಲು ಕಾರಣವಾಗಿವೆ. ಇದೆಲ್ಲ ಕಾರಣಗಳಿಂದ ಈ ಭಾಗದಲ್ಲಿ ಸಂಚಾರ ಆಮೆಗತಿಯಲ್ಲಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು NHAI ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+