ಪಂಪ ಮಹಾಕವಿ ರಸ್ತೆ ಹೆಸರು ಬದಲಿಸಲ್ಲ: ವಿರೋಧದ ಬಳಿಕ ಎಚ್ಚೆತ್ತ ಮಹೇಶ ಜೋಶಿ
ಬೆಂಗಳೂರು ಸೆಪ್ಟಂಬರ್ 12: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಿಸುವ ಕುರಿತು ಯಾವುದೇ ಪ್ರಸ್ತಾವವನ್ನು ಸಲ್ಲಿಸುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ತಿಳಿಸಿದ್ದಾರೆ. ಈ ಮೂಲಕ ಜನಾಕ್ರೋಶದ ಬಳಿಕ ಪಂಪ ಮಹಾಕವಿ ರಸ್ತೆ ಬದಲಾವಣೆ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರೆ.
ಸೋಮವಾರ ಕರ್ನಾಟಕ ರಾಜ್ಯ ಜೈನ್ ಅಸೋಸಿಯೇಷನ್ ಮುಖಸ್ಥರು ಪ್ರತಿಭಟನೆ ನಡೆಸುವುದಾಗಿ ಪತ್ರವನ್ನು ಪರಿಷತ್ತಿಗೆ ನೀಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಡಾ.ಮಹೇಶ್ ಜೋಶಿ ಅವರು, ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಬಗ್ಗೆ ಸೇರಿದಂತೆ ಯಾವುದೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ವಿಡಿಯೋವನ್ನು ಜೈನ ಸಮುದಾಯದ ಮುಖಂಡರಾದ ನಿರಂಜನ್ ಜೈನ್ ಕನ್ಯಾಡಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಡಾ. ಮಹೇಶ್ ಜೋಶಿ, ರಸ್ತೆ ಹೆಸರು ಬದಲಿಸಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ. ನಮಗೆ ಆದಿ ಕವಿ ಪಂಪನ ಬಗ್ಗೆ ಅಪಾರ ಗೌರವಿದೆ. ಹಾಗೇಯೆ ಹಿಂದಿನಿಂದಲೇ ಜೈನ ಸಮುದಾಯದ ಬಗ್ಗೆಯೂ ಹೆಚ್ಚು ಗೌರವವಿದೆ ಎಂದು ಅವರು ಅವರು ಹೇಳಿಕೊಂಡಿದ್ದಾರೆ.

ಹೋರಾಟ ಎಚ್ಚರಿಕೆ ಬೆನ್ನಲ್ಲೆ ಎಚ್ಚೆತ್ತುಕೊಂಡ ಜೋಶಿ
ಅನೇಕ ಅನೇಕರು ಸಾಮಾಜಿಕ ಜಾಲತಾಣಗಳ ಮಾಧ್ಯಮ ಮೂಲಕ, ಬರವಣಿಗೆ ಮೂಲಕ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಸಹ ನಾನು ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಈ ಬಗ್ಗೆ ಸಮಾಧಾನದಿಂದ ಉತ್ತರಿಸಿದ ಅವರು ಇಂದು ಸ್ಪಷ್ಟೀಕರಣ ಕೊಡುವುದಾಗಿ ಹೇಳಿದ್ದರು. ಅದರಂತೆ ಇಂದು ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳು ಪ್ರತಿಭಟನಾ ಪತ್ರವನ್ನು ಪರಿಷತ್ತಿಗೆ ಒಪ್ಪಿಸಿದರು. ಈ ವೇಳೆ ಎಚ್ಚೆತ್ತುಕೊಂಡು ಮಹೇಶ್ ಜೋಶಿ ಅವರು, ರಸ್ತೆ ಹೆಸರು ಬದಲಾವಣೆ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುವುದಿಲ್ಲ ಎಂದಿದ್ದಾರೆ ಎಂದು ನಿರಂಜನ್ ಜೈನ್ ಕನ್ಯಾಡಿ ತಿಳಿಸಿದ್ದಾರೆ.
ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆಯಿಂದ ನ್ಯಾಷನಲ್ ಕಾಲೇಜುವರೆಗೆ ಪಂಪ ಮಹಾಕವಿ ರಸ್ತೆ ಇದೆ. ಮಿಂಟೋ ಆಸ್ಪತ್ರೆಯ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಪರಿಷತ್ತು ಇರುವ ಅರ್ಧ ಕಿಲೋ ಮೀಟರ್ ಪಂಪಮಾಹಕವಿ ರಸ್ತೆ ಹೆಸರು ಬದಲಾಯಿಸಿ ಆ ರಸ್ತೆಯ್ನು ಕನ್ನಡಮಯ ಮಾಡುವ ಉದ್ದೇಶದಿಂದ ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲು ಡಾ.ಮಹೇಶ್ ಜೋಶಿ ನಿರ್ಧರಿಸಿದ್ದರು.

ಈ ವಿಚಾರ ಕೇಳಿ ಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವಿರೋಧ ಕೇಳಿ ಬಂದಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ, ಜೈನ್ ಅಸೋಸಿಯೇಷನ್ ಪ್ರತಿಭಟನೆ ಬಗ್ಗೆ ಎಚ್ಚರಿಸಿದ್ದರು. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡ ಪರಿಷತ್ತು ಅಧ್ಯಕ್ಷರು ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.












Click it and Unblock the Notifications