ಬೆಂಗಳೂರಲ್ಲಿ ಜನೌಷಧಿ ಮಳಿಗೆ ತೆರೆಯಲು ಕೇಂದ್ರದ ನೆರವು
ಬೆಂಗಳೂರು, ನವೆಂಬರ್ 16 : 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಜನೌಷಧಿ ಕೇಂದ್ರಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದರೆ 100 ಕೇಂದ್ರಗಳಿಗೆ ಕೇಂದ್ರ ಸರ್ಕಾರ ಸಹಾಯ ಮತ್ತು ಅಗತ್ಯ ಅನುದಾನ ನೀಡಲು ಸಿದ್ಧವಾಗಿದೆ' ಎಂದು ಕೇಂದ್ರ ಸಚಿವ ಅನಂತ ಕುಮಾರ್ ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ವತಿಯಿಂದ ಬಿಬಿಎಂಪಿಯ ಅತ್ತಿಗುಪ್ಪೆ ವಾರ್ಡ್‍ನಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಕೇಂದ್ರ ಔಷಧ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರು, 'ಬಿಬಿಎಂಪಿ ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ಸಹಕಾರ ನೀಡುವುದಾಗಿ' ಹೇಳಿದರು. [ಮನೆ ಬಾಗಿಲಿಗೆ ಔಷಧ : ಆನ್ ಲೈನ್ ಮೆಡಿಕಲ್ ಸ್ಟೋರ್]

'ಜನೌಷಧಿ ಮಳಿಗೆಗಳನ್ನು ಸ್ಥಾಪನೆ ಮಾಡಿದರೆ ಸಾಮಾನ್ಯ ರೋಗಿಗಳಿಗೆ, ಹಿರಿಯ ನಾಗರಿಕರಿಗೆ ರಿಯಾಯತಿ ದರದಲ್ಲಿ ಔಷಧಿಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಬಿಬಿಎಂಪಿ ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ 100 ಕೇಂದ್ರಗಳಿಗೆ ಸೂಕ್ತ ಅನುದಾನ ನೀಡುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಿದೆ' ಎಂದು ತಿಳಿಸಿದರು. [1064 ಶುಶ್ರೂಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕೆಇಎ]
'ಕೇಂದ್ರ ಸರ್ಕಾರ ಸಹಾಯ ಮಾಡುವ ವಿಚಾರದ ಕುರಿತು ಒಂದು ವರ್ಷದ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಾಲಾಗಿದೆ. ಆದರೆ, ಈವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವ ಅಥವಾ ಸ್ಪಂದನೆ ಕಂಡುಬಂದಿಲ್ಲ' ಎಂದು ಅನಂತ ಕುಮಾರ್ ಹೇಳಿದರು. [ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಮಾಜಿ ಸಚಿವ ವಿ.ಸೋಮಣ್ಣ, ಪಾಲಿಕೆ ಸದಸ್ಯರಾದ ಡಾ.ಎಸ್.ಆರ್.ರಾಜು, ಮಾಜಿ ಮಹಾಪೌರರಾದ ಶಾಂತಕುಮಾರಿ, ಉಮೇಶ್ ಶೆಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಚೇರಿ ಉದ್ಘಾಟನೆ : ಜಯನಗರ ವಿಧಾನಸಭಾ ಕ್ಷೇತ್ರದ ಶಾಕಾಂಬರಿನಗರ ವಾರ್ಡ್‍ನ ಬಿಬಿಎಂಪಿ ಸದಸ್ಯರ ಕಛೇರಿಯನ್ನು ಅನಂತ್ ಕುಮಾರ್ ಅವರು ಭಾನುವಾರ ಉದ್ಘಾಟನೆ ಮಾಡಿದರು.












Click it and Unblock the Notifications